ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

ಚಿಕ್ಕಂದಿನಲ್ಲಿ ಕಲಿತ ವಿಚಾರಗಳು ಗಾಢ ಪರಿಣಾಮ ಬೀರುತ್ತವೆ: ಬಾಲಕೃಷ್ಣ ಭಟ್


ಪುತ್ತೂರು: ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರವೂ ಮಹತ್ತರವಾದುದು. ಚಿಕ್ಕಂದಿನಿಂದ ಕಲಿತ ವಿಚಾರಗಳು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುವುದರಿಂದ ಅವರನ್ನು ಸಮರ್ಪಕವಾಗಿ ರೂಪಿಸುವ ಕಾರ್ಯ ನಡೆಯಬೇಕು. ದೇಶಪ್ರೇಮ, ಸ್ವಚ್ಛತೆ, ಸಹಬಾಳ್ವೆ ಮೊದಲಾದ ವಿಚಾರಗಳ ಕುರಿತು ಅರಿವು ಮೂಡಿಸುವುದು ಅತ್ಯಗತ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಾಧಕೃಷ್ಣ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವದ ನೆಲೆಯಲ್ಲಿ ಆಯೋಜಿಸಲಾದ ಪ್ರತಿಭಾ ತರಂಗಿಣಿ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಹೆತ್ತವರು ತಮ್ಮ ಮಕ್ಕಳನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಮಕ್ಕಳು ವಿದ್ಯಾಭ್ಯಾಸ ಪಡೆದು ಉನ್ನತ ವೃತ್ತಿ, ಕೈತುಂಬಾ ಸಂಬಳವನ್ನೂ ಪಡೆಯುತ್ತಾರೆ. ಆದರೆ ವಿದೇಶಕ್ಕೆ ತೆರಳಿ ದೇಶ ಹಾಗೂ ಪೋಷಕರ ಸೇವೆಯನ್ನು ಮರೆತು ಬಿಡುತ್ತಾರೆ. ಹಣ ಗಳಿಕೆ ಹಾಗೂ ಖಾಸಗಿ ಜೀವನವೇ ಅವರಿಗೆ ಮಹತ್ವವಾಗುತ್ತದೆ. ಆದ್ದರಿಂದ ಎಳೆವೆಯಿಂದಲೇ ಮಕ್ಕಳಿಗೆ ಸಂಸ್ಕಾರ, ದೇಶಪ್ರೇಮ ತುಂಬುವ ಕಾರ್ಯ ನಡೆಸಿದಾಗ, ಪೋಷಕರು ವೃದ್ಧಾಪ್ಯ ತಲುಪಿದಾಗ ಹೆಗಲು ನೀಡುವ ಕಾರ್ಯವನ್ನು ಮಕ್ಕಳು ಮಾಡುತ್ತಾರೆ ಎಂದು ತಿಳಿಸಿದರು.


ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕಜೆ ಮಾತನಾಡಿ, ದಶಾಂಬಿಕೋತ್ಸವ ಅಂಗವಾಗಿ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರೂಪಿಸಲಾಗಿದೆ, ಇನ್ನೂ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆ ಸಿದ್ಧವಾಗುತ್ತಿದ್ದು, ಆರೋಗ್ಯ, ಆಧ್ಯಾತ್ಮಿಕ, ಜ್ಞಾನ ಬೋಧಕ ಮೊದಲಾವುಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಶಾಲಾವರಣ ಮಾತ್ರವಲ್ಲದೆ, ಸಮಾಜಕ್ಕೂ ಪ್ರಯೋಜನವಾಗಬೇಕು ಎಂಬ ಗುರಿಯೊಂದಿಗೆ ವಿವಿಧ ಸಮಾಜ ಸೇವಾ ಕಾರ್ಯಗಳು ನಡೆಯಲಿದೆ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ, ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಸೂಕ್ತ ನಿರ್ಣಯ ಕೈಗೊಂಡು ಶ್ರದ್ಧೆ ಹಾಗೂ ಪರಿಶ್ರಮದಿಂದ ಮುನ್ನಡೆದಾಗ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿಗಳು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಪೋಷಕರು ಬೆಂಬಲ ನೀಡುವುದು ಅತೀ ಅಗತ್ಯವಾಗಿದೆ. ಯಾವುದೇ ಯೋಜನೆಗಳನ್ನು ಪೂರ್ಣ ಪೂರ್ವಸಿದ್ಧತೆಗಳೊಂದಿಗೆ ಮಾಡಿದಾಗ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.


10ನೇ ತರಗತಿಯ ವಿದ್ಯಾರ್ಥಿ ಜಸ್ವಿತ್ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪಡೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು. ದಶಾಂಬಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳ ಹೆತ್ತವರಿಂದಲೂ ಗಾಯನ, ಭರತನಾಟ್ಯ, ಜಾನಪದ ನೃತ್ಯ, ಸುಗ್ಗಿ ಕುಣಿತ, ಕೀಬೋರ್ಡ್ ನುಡಿಸುವಿಕೆ, ಪೈಂಟಿಂಗ್ ಮೊದಲಾದವುಗಳು ನಡೆದವು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ. ಹೆಚ್. ಮಾಧವ ಭಟ್, ಸುರೇಶ್ ಶೆಟ್ಟಿ, ಬಾಲಕೃಷ್ಣ ಬೋರ್ಕರ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್ ಉಪಸ್ಥಿತರಿದ್ದರು.
ವಿದ್ಯಾಲಯದ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಸ್ವಾಗತಿಸಿ, ಪ್ರಾಂಶುಪಾಲೆ ಮಾಲತಿ ಡಿ. ವಂದಿಸಿದರು. ರಮ್ಯಲಕ್ಷ್ಮೀ ಪ್ರಿಯಶ್ರೀ ನಿರೂಪಿಸಿದರು. ಶಿಕ್ಷಕಿಯರಾದ ಅನುಪಮಾ, ಮಲ್ಲಿಕಾ, ದಿವ್ಯಾ, ಸುಜಾತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

LEAVE A REPLY

Please enter your comment!
Please enter your name here