ಡಿ.6: ಕಡೇಶಿವಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ

0

ಕಡೇಶಿವಾಲಯ : ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಡಿ. 6ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ನಡೆಯಲಿದೆ.

ಕಡೇಶಿವಾಲಯ ಗ್ರಾ.ಪಂ ಅಧ್ಯಕ್ಷೆ ಭಾರತಿ ಎಸ್ ರಾವ್ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಕಡೇಶಿವಾಲಯ ಶಾಲಾ ಏಳನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಸಮ್ಮೇಳನದ ಸರ್ವಾಧ್ಯಕ್ಷೆಯಾಗಲಿದ್ದಾರೆ. ಹಿಂದಿನ ಸಮ್ಮೇಳನಾಧ್ಯಕ್ಷೆ ಓಜಾಲ ಶಾಲಾ ವಿದ್ಯಾರ್ಥಿನಿ ಶ್ರುತಿಕಾ ಬಾಕಿಮಾರು ಕಾರ್ಯಕ್ರಮ ಉದ್ಘಾಟಿಸುವರು. ಮಕ್ಕಳ ಸ್ವರಚಿತ ಕೃತಿಗಳನ್ನು ಕವಿ ವಿಶ್ವನಾಥ ಕುಲಾಲ್ ಮಿತ್ತೂರು ಬಿಡುಗಡೆಗೊಳಿಸಲಿದ್ದಾರೆ. ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿನಿ ಆರಾಧ್ಯ ರೈ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕುರುಂಬ್ಲಾಜೆ ಕಿಟ್ಟಣ್ಣ ಶೆಟ್ಟಿ ಹೇಳಿದರು.ಅವರು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕದಿಂದ ಪದವಿಪೂರ್ವ ಕಾಲೇಜು ತನಕದ ಸುಮಾರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಾದ ಚಿತ್ತ ಚಿತ್ತಾರ, ಕಿರುನಾಟಕ, ಸಾಹಿತ್ಯ ಸ್ವರಚನೆ, ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಶಿಕ್ಷಕರು ಮತ್ತು ಹೆತ್ತವರು ಭಾಗವಹಿಸಲಿದ್ದು ಒಟ್ಟು ಸಮಾರು 1500ಜನರು ಆಗಮಿಸುವ ನಿರೀಕ್ಷೆಯಿದೆ. ಗ್ರಾಮ ಪಂಚಾಯತು, ಗ್ರಾಮದ ಸಂಘ-ಸಂಸ್ಥೆಗಳು ಮತ್ತು ಗ್ರಾಮಸ್ಥರನ್ನು ಸಮ್ಮೇಳನದ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ದಿನವಿಡೀ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸ್ವಾಗತ, ನಿರೂಪಣೆ, ಧನ್ಯವಾದ ಮತ್ತು ಅಧ್ಯಕ್ಷಾದಿ ವೇದಿಕೆಯ ಕಾರ್ಯಕ್ರಮಗಳನ್ನು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೇ ನಿರ್ವಹಿಸಲಿರುವರು ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹರಿಶ್ಚಂದ್ರ ಎಂ. ತಿಳಿಸಿದರು.

ಸ್ವಾಗತ ಸಮಿತಿಯಲ್ಲಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಅಧ್ಯಕ್ಷರಾಗಿದ್ದು ಬಂಟ್ವಾಳ ತಾಲೂಕು ಶಿಕ್ಷಣ ಲಾಖೆಯ ಪೂರ್ಣ ಸಹಯೋಗವಿದೆ. ಉಪಾಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಗಿರಿಯಪ್ಪ ಗೌಡ ಶಾಂತಿಲ, ಜೊತೆ ಕಾರ್ಯದರ್ಶಿಯಾಗಿ ಮಮತಾ ಪೆರ್ಲಾಪು ಇವರನ್ನೊಳಗೊಂಡಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರ ತರುವ ಯೋಜನೆಯನ್ನು ರೂಪಿಸಿದೆ ಎಂದು ಕೋಶಾಧಿಕಾರಿ ಮಾಧವ ರೈ ಭಂಡಸಾಲೆ ಹೇಳಿದರು.

ಬಂಟ್ವಾಳ ತಾಲೂಕಿನ ತಮ್ಮ ಶಾಲೆಯಿಂದ ಭಾಗವಹಿಸುವ ಒಟ್ಟು ಮಕ್ಕಳ ಸಂಖ್ಯೆಯನ್ನು ಸಮ್ಮೇಳನಕ್ಕೆ ನಾಲ್ಕು ದಿನ ಮೊದಲು 9731444259 ಅಥವಾ 9741365132 ಸಂಖ್ಯೆಗೆ ಕರೆ ಅಥವಾ ಸಂದೇಶದ ಮೂಲಕ ತಿಳಿಸಬೇಕು ಎಂದು ತಾಲೂಕಿನ ಅನುದಾನಿತ, ಅನುದಾನ ರಹಿತ ಮತ್ತು ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರನ್ನು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ ಕೆ. ವಿನಂತಿಸಿದ್ದಾರೆ.


ಮಕ್ಕಳ ಕಲಾ ಲೋಕದ ಉಪಾಧ್ಯಕ್ಷ ಶಿವರಾಮ ಭಟ್ ನೆಡ್ಲೆ, ಕಾರ್ಯದರ್ಶಿ ಪುಷ್ಪಾ ಎಚ್, ಸ್ವಾಗತ ಸಮಿತಿಯ ವಿದ್ಯಾಧರ ರೈ ಹಾಗೂ ಶರತ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here