ಪುತ್ತೂರು: ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಮನೆತನದವರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ಜಠಾಧಾರಿ ದೈವದ ಮಹಿಮೆ ಮತ್ತು ಇತರ ದೈವಗಳ ನೇಮೋತ್ಸವ ದಶಂಬರ 26ರಂದು ಕೆಲ್ಲಾಡಿ ಜಠಾಧಾರಿ ದೈವಸ್ಥಾನದಲ್ಲಿ ಜರಗಿತು. ಕಾರ್ಯಕ್ರಮದ ಅಂಗವಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದವರಿಂದ ‘ಭೀಷ್ಮ ಸೇನಾಧಿಪತ್ಯ – ಭೀಷ್ಮಾರ್ಜುನ’ ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು.
ವಿಶೇಷ ಆಚರಣೆ – ಉತ್ಸವ:
ತುಳುನಾಡಿನ ದೈವಾರಾಧನೆಯಲ್ಲಿ ಒಂದು ವಿಶಿಷ್ಟವಾದ ಆಚರಣೆ ಶ್ರೀ ಜಠಾಧಾರಿ ದೈವದ ಮಹಿಮೆ. ಶಿವಗಣಗಳಲ್ಲಿ ಪ್ರಧಾನವಾಗಿ, ನಾಗರೂಪಿನಿಂದ ತನ್ನ ಕಾರಣೀಕವನ್ನು ತೋರಿಸುವ ಜಠಾಧಾರಿ ದೈವ ನಂಬಿದ ಭಕ್ತರನ್ನು ಸಂರಕ್ಷಿಸಿ, ಸಂಪತ್ತು, ಸಂತಾನ ಮತ್ತು ಸ್ವಾಸ್ಥ್ಯ ಲಾಭಗಳಿಗೆ ಕಾರಣವಾಗುವುದೆಂಬ ವಿಶ್ವಾಸ ತುಳುವರದು. ಸರ್ಪಾಕೃತಿಯ ಶಿರೋಭೂಷಣ, ಬೆಳ್ಳಿಯ ತಲೆಪಟ್ಟಿ, ಭುಜಕೀರ್ತಿ, ಎದೆಪದಕಗಳನ್ನು ಧರಿಸಿ ಮೈಯೆಲ್ಲಾ ಭಸ್ಮ ಧಾರಣೆಯೊಂದಿಗೆ ಕೈಯಲ್ಲಿ ತ್ರಿಶೂಲ – ಅಗ್ನಿ ಪಾತ್ರೆಗಳನ್ನು ಧರಿಸಿ ಕೊಡಿಯಡಿಯಲ್ಲಿ ನರ್ತಿಸುವ ಜಠಾಧಾರಿ ಉಳಿದ ದೈವ ಶಕ್ತಿಗಳಿಂದ ಭಿನ್ನವಾಗಿ ತೋರುತ್ತದೆ. ಆದ್ದರಿಂದಲೇ ಇದರ ನೇಮೋತ್ಸವವನ್ನು ‘ಮಹಿಮೆ’ ಎಂದು ಕರೆಯುವುದು ವಾಡಿಕೆ.
ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಪ್ರಸಿದ್ಧ ಬಾಲ್ಯೊಟ್ಟು ಗುತ್ತು ಮನೆತನಕ್ಕೆ ಸೇರಿದ ಬಾಲ್ಯೊಟ್ಟು, ಕುಕ್ಕುವಳ್ಳಿ, ಕೆಲ್ಲಾಡಿ ಮತ್ತು ಅಂಗರಾಜೆ ಕುಟುಂಬಿಕರು ಹಿರಿಯರ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಜಠಾಧಾರಿ ದೈವದ ಸಾನ ಸಾನಿಧ್ಯ ಕೆಲ್ಲಾಡಿಯಲ್ಲಿದೆ. ಕುಟುಂಬದವರೆಲ್ಲ ಒಟ್ಟು ಸೇರಿ ಎರಡು ವರ್ಷಕ್ಕೊಮ್ಮೆ ದೈವದ ಮೈಮೆ ನೇಮೋತ್ಸವ ನಡೆಸುತ್ತಾರೆ. ಆದರೆ ಈ ಬಾರಿ ಕಾಲಾದಿ ಉತ್ಸವ ನಡೆದಿದ್ದರೂ ಕೆಲ್ಲಾಡಿಯ ಸುಗುಣ ರೈ ಮತ್ತು ನುಳಿಯಾಲು ಸಂಜೀವ ರೈ ದಂಪತಿ ಹಾಗೂ ಮಕ್ಕಳ ಸೇವಾ ರೂಪವಾಗಿ ದಶಂಬರ 26ರಂದು ವಿಶೇಷ ಮಹಿಮೆ ಉತ್ಸವ ಜರಗಿತು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಭಂಡಾರ ಹೊರಟು ಕೆಲ್ಲಾಡಿ ದೈವ ಸಾನಿಧ್ಯಕ್ಕೆ ಬಂದು ರಾತ್ರಿ ಗಗ್ಗರಸೇವೆಯೊಂದಿಗೆ ಮುಂಜಾನೆಯವರೆಗೆ ಜಠಾಧಾರಿ ದೈವದ ನರ್ತನ ಸೇವೆ ನಡೆಯಿತು.
‘ಭೀಷ್ಮಪರ್ವ’ ತಾಳಮದ್ದಳೆ:
ಉತ್ಸವದ ಅಂಗವಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ‘ಭೀಷ್ಮ ಸೇನಾಧಿಪತ್ಯ – ಭೀಷ್ಮಾರ್ಜುನ’ ಯಕ್ಷಗಾನ ತಾಳಮದ್ದಳೆ ಜರಗಿತು. ಎನ್. ಸಂಜೀವ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಭಾಸ್ಕರ ಶೆಟ್ಟಿ ಸಾಲ್ಮರ, ಪ್ರದೀಪ ಕುಮಾರ್ ರೈ ಕೇಕನಾಜೆ, ನರಸಿಂಹ ಬಂಡಾರಿ ಅರ್ಥಧಾರಿಗಳಾಗಿ ಭಾಗವಹಿಸಿದರು. ಹಿಮ್ಮೇಳದಲ್ಲಿ ದಾಮೋದರ, ಸತೀಶ್, ಶಾಮ ಭಟ್ ಅವರ ಭಾಗವತಿಕೆ ಹಾಗೂ ಪ್ರಮೋದ, ವರ್ಷಿತ್ ಮತ್ತು ಸುಂದರ ಚೆಂಡೆ – ಮದ್ದಳೆಗಳಲ್ಲಿ ಸಹಕರಿಸಿದರು.
ಬಾಲ್ಯೊಟ್ಟು ಗುತ್ತು ನಾರಾಯಣ ರೈ ಕೆಲ್ಲಾಡಿ ಸ್ವಾಗತಿಸಿದರು. ಕೆ.ಪ್ರಶಾಂತ ರೈ ಕಲಾವಿದರನ್ನು ಪರಿಚಯಿಸಿ, ವಂದಿಸಿದರು. ಕೆಲ್ಲಾಡಿ ಬಾಲಕೃಷ್ಣ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಅಂಗರಾಜೆ ಕಿಟ್ಟಣ್ಣ ರೈ, ಚಂದ್ರಶೇಖರ ರೈ ಬಾಲ್ಯೊಟ್ಟು ಮತ್ತು ಕುಟುಂಬದ ಹಿರಿಯರು ಉಪಸ್ಥಿತರಿದ್ದರು.
ಸಾರ್ವಜನಿಕ ಅನ್ನಸಂತರ್ಪಣೆ, ಪ್ರಸಾದ ವಿತರಣೆ ಯೊಂದಿಗೆ ಮರುದಿನ ಧೂಮಾವತಿ, ವರ್ಣರ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಿತು.