ನೆಲ್ಯಾಡಿ: ಸಮರ್ಥ ನಿಧಿ ಲಿಮಿಟೆಡ್‌ನ 17ನೇ ಶಾಖೆ ಶುಭಾರಂಭ

0

ನೆಲ್ಯಾಡಿ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದು ಹಣಕಾಸು ಉದ್ದಿಮೆಯಲ್ಲಿ ಕಳೆದ 10 ವರ್ಷಗಳಿಂದ ತೊಡಗಿಕೊಂಡಿರುವ ಸಮರ್ಥ ನಿಧಿ ಲಿಮಿಟೆಡ್ ಇದರ 17ನೇ ಶಾಖೆ ನೆಲ್ಯಾಡಿಯಲ್ಲಿ ಡಿಯೋನ್ ಸ್ಕ್ವೇರ್‌ನಲ್ಲಿ ಜ.5ರಂದು ಶುಭಾರಂಭಗೊಂಡಿತು.

17 ಶಾಖೆಗಳಲ್ಲಿ 45 ಸಾವಿರ ಗ್ರಾಹಕರು: ನವೀನ್‌ಕುಮಾರ್
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ನವೀನ್‌ಕುಮಾರ್ ಕೆ.ಅವರು, ಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ಸೌಲಭ್ಯ ಒದಗಿಸಲು ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಾನ್ಯತೆ ಪಡೆದುಕೊಂಡು 2014ರಲ್ಲಿ ಪುತ್ತೂರಿನಲ್ಲಿ ಸಮರ್ಥ ನಿಧಿ ಲಿಮಿಟೆಡ್ ಆರಂಭ ಮಾಡಲಾಯಿತು. ಪುತ್ತೂರಿನ ಗ್ರಾಹಕರ ಸಹಕಾರದಿಂದ ಸಂಸ್ಥೆ ಈಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ದ.ಕ. ಹಾಗೂ ಆಸುಪಾಸಿನ 6 ಜಿಲ್ಲೆಗಳಲ್ಲಿ ಒಟ್ಟು 17 ಶಾಖೆಗಳಿವೆ. 45 ಸಾವಿರ ಗ್ರಾಹಕರಿದ್ದು 21 ಸಾವಿರ ಗ್ರಾಹಕರು ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡುತ್ತಿದ್ದಾರೆ. 245 ಉದ್ಯೋಗಿಗಳಿದ್ದಾರೆ. ಎಲ್ಲಾ ಶಾಖೆಗಳಲ್ಲೂ ಆ ಊರಿನವರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.

ಸರಳ,ಸುಲಭ ಸಾಲ ಸೌಲಭ್ಯ:
ಗ್ರಾಹಕರು ಪಿಗ್ನಿ, ಆರ್‌ಡಿ, ಠೇವಣಿ ಮೂಲಕ ಸಂಸ್ಥೆಯಲ್ಲಿ ಹಣ ತೊಡಗಿಸಬಹುದು. ಇದಕ್ಕೆ ಆಕರ್ಷಕ ಬಡ್ಡಿ ದರವನ್ನೂ ನೀಡುತ್ತೇವೆ. ಇದರೊಂದಿಗೆ ಷೇರುದಾರರಿಗೆ ಪ್ರತಿವರ್ಷವೂ ಶೇ.12ಕ್ಕಿಂತ ಮೇಲೆ ಡಿವಿಡೆಂಡ್ ನೀಡುತ್ತಿದ್ದೇವೆ. ರೂ.30 ಸಾವಿರದಿಂದ 2 ಲಕ್ಷದ ತನಕ ಪಿಗ್ನಿ ಮೇಲಿನ ಸಾಲ ನೀಡುತ್ತೇವೆ. ಹಳೆಯ ವಾಹನಗಳಿಗೂ ಸಾಲ ನೀಡುತ್ತೇವೆ. ಸರಳ ದಾಖಲೆಗಳೊಂದಿಗೆ ಸುಲಭ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದರು. ನೆಲ್ಯಾಡಿ ಭಾಗದಲ್ಲಿ ಸಂಸ್ಥೆಗೆ ಈಗಾಗಲೇ 300 ರಿಂದ 400 ಗ್ರಾಹಕರಿದ್ದಾರೆ. ಇವರೆಲ್ಲರೂ ಪುತ್ತೂರು ಶಾಖೆಯಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಈ ಗ್ರಾಹಕರ ಅನುಕೂಲಕ್ಕೆ ಹಾಗೂ ಹೊಸ ಗ್ರಾಹಕರ ಸೇರ್ಪಡೆಗೆ ನೆಲ್ಯಾಡಿಯಲ್ಲಿ ಶಾಖೆ ಆರಂಭಿಸಿದ್ದೇವೆ. ಈ ಶಾಖೆಗೆ 5 ಸಾವಿರ ಗ್ರಾಹಕರ ಸೇರ್ಪಡೆಗೆ ಇಲ್ಲಿನ ಜನತೆ ಸಹಕರಿಸುವುದರೊಂದಿಗೆ ಸಂಸ್ಥೆಯನ್ನು ಬೆಳೆಸಬೇಕೆಂದು ಹೇಳಿದರು.

ಸಮಾಜಕ್ಕೆ, ಜನರಿಗೆ ಪ್ರಯೋಜನ ಸಿಗಲಿ: ರೆ.ಫಾ.ವರ್ಗೀಸ್ ಕೈಪನಡ್ಕ
ಅತಿಥಿಯಾಗಿದ್ದ ನೆಲ್ಯಾಡಿ ಬೆಥನಿ ಜ್ಞಾನೋದಯ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ವರ್ಗೀಸ್ ಕೈಪನಡ್ಕ ಅವರು ಮಾತನಾಡಿ, ನೆಲ್ಯಾಡಿ ಪೇಟೆಯೂ ಬೆಳೆಯುತ್ತಿದ್ದು ಹೊಸ ಹೊಸ ಉದ್ದಿಮೆಗಳು ಬರುತ್ತಿವೆ. 6 ಜಿಲ್ಲೆಗಳಿಗೆ ವ್ಯಾಪಿಸಿರುವ ಸಮರ್ಥ ನಿಧಿ ಲಿಮಿಟೆಡ್ ನೆಲ್ಯಾಡಿಯಲ್ಲಿ 17ನೇ ಶಾಖೆ ಆರಂಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಇದರಿಂದ ಸಂಸ್ಥೆಯ ನೆಲ್ಯಾಡಿ ಭಾಗದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ನೆಲ್ಯಾಡಿ ಗ್ರಾಮವೂ ಅಭಿವೃದ್ಧಿಯಾಗಲಿದೆ. ನೆಲ್ಯಾಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದರೂ ಜನಸಾಮಾನ್ಯರಿಗೆ ಸಕಾಲದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರುವುದು ಸಮರ್ಥ ನಿಧಿಯಂತ ಹಣಕಾಸು ಸಂಸ್ಥೆಗಳು. ಸಮರ್ಥ ನಿಧಿ ಸಂಸ್ಥೆಯಿಂದ ಸಮಾಜಕ್ಕೆ ಹಾಗೂ ಜನರಿಗೆ ಹೆಚ್ಚಿನ ಪ್ರಯೋಜನ ಸಿಗಲಿ ಎಂದರು.

ಇನ್ನೂ ಹೆಚ್ಚಿನ ಶಾಖೆ ತೆರೆಯಲಿ: ಡಾ.ಶಿಶಿರ
ಇನ್ನೋರ್ವ ಅತಿಥಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರು ಮಾತನಾಡಿ, ನೆಲ್ಯಾಡಿ ಪೇಟೆಯೂ ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತಿದೆ. ಇಲ್ಲಿನ ಜನರ ಅನುಕೂಲಕ್ಕಾಗಿ ಹಾಗೂ ಈ ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮರ್ಥನಿಧಿ ಲಿಮಿಟೆಡ್ ಆರಂಭಗೊಂಡಿದೆ. ವಾಹನ ಖರೀದಿ ಸೇರಿದಂತೆ ಜನರ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಸಂಸ್ಥೆಯಿಂದ ಜನರಿಗೆ ಪ್ರಯೋಜನ ಸಿಗಲಿ. ಈ ಸಂಸ್ಥೆಯು ಸ್ಥಳೀಯ ಯುವಕರಿಗೇ ಕೆಲಸ ಕೊಡುತ್ತಿರುವುದೂ ಉತ್ತಮ ಬೆಳವಣಿಗೆಯಾಗಿದೆ. ಇನ್ನೂ ಹೆಚ್ಚಿನ ಶಾಖೆ ತೆರೆಯುವ ಮೂಲಕ ಬೆಳೆಯಲಿ ಎಂದರು.

ಸಮರ್ಥವಾಗಿ ಬೆಳೆಯಲಿ: ಕುಶಾಲಪ್ಪ ನಾಯ್ಕ್
ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ ಅವರು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಭಾಷೆಯ ಸಮಸ್ಯೆಯಿಂದಾಗಿ ಜನಸಾಮಾನ್ಯರಿಗೆ ವ್ಯವಹರಿಸುವುದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರುವುದು ಸಹಕಾರಿ ಹಾಗೂ ಹಣಕಾಸು ಸಂಸ್ಥೆಗಳು. ನೆಲ್ಯಾಡಿಯಲ್ಲಿ ಸಾಕಷ್ಟು ಹಣಕಾಸು ಸಂಸ್ಥೆಗಳಿವೆ. ಇವೆಲ್ಲದರ ಮಧ್ಯೆ ಸಮರ್ಥ ನಿಧಿ ಲಿಮಿಟೆಡ್ ಸಂಸ್ಥೆಯೂ ಸಮರ್ಥವಾಗಿ ಬೆಳೆಯಲಿ ಎಂದರು.

ಹಳ್ಳಿಯ ಯುವಕನ ದೊಡ್ಡ ಸಾಧನೆ: ಚೇತನ್
ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್‌ಕುಮಾರ್ ಅವರು ಮಾತನಾಡಿ, ಹಳ್ಳಿಯಲ್ಲಿ ಹುಟ್ಟಿಬೆಳೆದ ನವೀನ್‌ಕುಮಾರ್ ಅವರು ಪುತ್ತೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಸಮರ್ಥ ನಿಧಿ ಲಿಮಿಟೆಡ್ ಎಂಬ ಹಣಕಾಸು ಸಂಸ್ಥೆಯನ್ನು ಆರಂಭಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸಿರುವುದು ಅವರು ಮಾಡಿದ ದೊಡ್ಡ ಸಾಧನೆಯಾಗಿದೆ. ನೆಲ್ಯಾಡಿ ವೇಗವಾಗಿ ಬೆಳೆಯುತ್ತಿರುವ ಪೇಟೆ. ತಾಲೂಕು ಕೇಂದ್ರ ಆಗುವ ಎಲ್ಲಾ ಸಾಧ್ಯತೆಗಳಿದ್ದರೂ ವಂಚಿತವಾಯಿತು. ೨೫ ವರ್ಷ ಹಿಂದೆ ನೆಲ್ಯಾಡಿಯಲ್ಲಿ ಕೆನರಾ, ಕಾರ್ಪೋರೇಷನ್ ಬ್ಯಾಂಕ್ ಹಾಗೂ ಕೆಲವೊಂದು ಖಾಸಗಿ ಹಣಕಾಸು ಸಂಸ್ಥೆಗಳು ಮಾತ್ರ ಇತ್ತು. ಆದರೆ ಈಗ ನೆಲ್ಯಾಡಿಯಲ್ಲಿ ೧೫ಕ್ಕಿಂತಲೂ ಹೆಚ್ಚು ಹಣಕಾಸು ಸಂಸ್ಥೆಗಳಿದ್ದು ನೆಲ್ಯಾಡಿ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ ಎಂದರು. ಜನರಿಗೆ ಸುಲಭ ಹಾಗೂ ಸರಳವಾಗಿ ಆರ್ಥಿಕ ವ್ಯವಸ್ಥೆ ಒದಗಿಸಿಕೊಡುವುದು ಖಾಸಗಿ ಹಣಕಾಸು ಸಂಸ್ಥೆಗಳು. ಈ ನಿಟ್ಟಿನಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡಿರುವ ಸಮರ್ಥ ನಿಧಿ ಲಿಮಿಟೆಡ್‌ನಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಉತ್ತಮ, ಹೆಚ್ಚಿನ ಸೇವೆ ಸಿಗಲಿ ಎಂದರು.

ಡಿಯೋನ್ ಸ್ಕ್ವೇರ್ ಕಟ್ಟಡ ಮೇನೇಜರ್ ಜೋಸೆಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಬೆಥನಿ ಐಟಿಐ ಪ್ರಾಂಶುಪಾಲ ಸಜಿ ಕೆ.ತೋಮಸ್, ಉಪನ್ಯಾಸಕ ಶಿವಾನಂದ, ಮನೋಜ್ ನೆಲ್ಯಾಡಿ, ವಾಸು ದಡ್ಡು ವಳಾಲು, ರಾಕೇಶ್ ನೆಲ್ಯಾಡಿ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀವೆಂಕಟೇಶ್, ರಮತಾಸೋಮಯ್ಯ, ಬಾಲಕೃಷ್ಣ ಎಸ್., ವಿಭಾಗ ವ್ಯವಸ್ಥಾಪಕರಾದ ಪ್ರಮೋದ್ ಅಂಚನ್, ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಪ್ರವೀಣ್ ಎಸ್., ಶಾಖಾ ಪ್ರಬಂಧಕರಾದ ಹರಿಪ್ರಸಾದ್ ಸುಳ್ಯ, ಗಂಗಾಧರ ಮಂಗಳೂರು, ಸ್ವರೂಪ್ ಪುತ್ತೂರು, ಆನಂದ ಬೇಲೂರು, ರಂಗಸ್ವಾಮಿ ಹಾಸನ, ಕಿರಣ್ ಸಕಲೇಶಪುರ, ಯೋಗೀಶ್ ಕಡಬ ಸೇರಿದಂತೆ ವಿವಿಧ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಶಾಖಾ ಪ್ರಬಂಧಕ ಉಮೇಶ್ ಕೆ.ಸ್ವಾಗತಿಸಿದರು. ಕಡಬ ಶಾಖೆಯ ಮೋಹನ್ ಕೋಡಿಂಬಾಳ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆಲ್ಯಾಡಿಯ ಶಾಖೆಯ ವ್ಯವಸ್ಥಾಪಕರಾದ ಮೋಹನ ಅರ್ವೆ, ಸಿಬ್ಬಂದಿಗಳಾದ ಕೌಶಿಕ್, ಚರಣ್‌ರಾಜ್, ಕೀರ್ತನ್, ಶರತ್, ಹರೀಶ್ ಅವರು ಸಹಕರಿಸಿದರು.

LEAVE A REPLY

Please enter your comment!
Please enter your name here