ಸಾಮೆತ್ತಡ್ಕ ವಾಳೆ ಚಾಂಪಿಯನ್, ಗುಂಡ್ಯಡ್ಕ ವಾಳೆ ರನ್ನರ್ಸ್
ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಆಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ಸಿ) ವತಿಯಿಂದ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜ.7 ರಂದು ಒಗ್ಗಟ್ಟಿಗಾಗಿ ಕ್ರೀಡೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋ ಸ್ಮರಣಾರ್ಥ ಜರಗಿದ 31ನೇ ವರ್ಷದ ಅಂತರ್-ವಾಳೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಸಾಮೆತ್ತಡ್ಕ ವಾಳೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಗುಂಡ್ಯಡ್ಕ ವಾಳೆಯು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಸೆಮಿಫೈನಲಿನಲ್ಲಿ ಫೈನಲ್ ವಿಜೇತ ಸಾಮೆತ್ತಡ್ಕ ವಾಳೆಯೊಂದಿಗೆ ಸೋತ ದರ್ಬೆ ವಾಳೆಯು ತೃತೀಯ, ರನ್ನರ್ಸ್ ಪ್ರಶಸ್ತಿ ಪಡೆದ ಗುಂಡ್ಯಡ್ಕ ವಾಳೆಯೊಂದಿಗೆ ಸೋತ ಕಲ್ಲಾರೆ ವಾಳೆಯು ಚತುರ್ಥ ಸ್ಥಾನ ಪಡೆಯಿತು. ಉತ್ತಮ ಬ್ಯಾಟರ್ ಆಗಿ ಸಾಮೆತ್ತಡ್ಕ ತಂಡ ಪ್ರೀತಂ ಮಸ್ಕರೇನ್ಹಸ್, ಉತ್ತಮ ಬೌಲರ್ ಆಗಿ ಸಾಮೆತ್ತಡ್ಕ ತಂಡದ ಪ್ರನಿಲ್ ಮಸ್ಕರೇನ್ಹಸ್, ಉತ್ತಮ ಅಲೌರೌಂಡರ್ ಆಗಿ ಗುಂಡ್ಯಡ್ಕ ತಂಡದ ಮೆಲ್ವಿನ್ರವರು ಪಡೆದುಕೊಂಡರು. ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ 19 ವಾಳೆಗಳ ಪೈಕಿ 17 ವಾಳೆಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಬಲ್ನಾಡು, ಮಿತ್ತೂರು, ಪದವು, ಪಾಂಗ್ಲಾಯಿ, ಪರ್ಲಡ್ಕ, ನಿತ್ಯಾಧರ್, ಪುತ್ತೂರು, ರೋಟರಿಪುರ, ಸೈಂಟ್ ತೆರೆಜಾ ಸಾಲ್ಮರ, ಶಿಂಗಾಣಿ, ಸಂಟ್ಯಾರ್, ಹಾರಾಡಿ ವಾಳೆ ತಂಡಗಳು ನಾಕೌಟ್ ಹಂತದಲ್ಲಿಯೇ ನಿರ್ಗಮಿಸಿದ್ದವು. ಕಳೆದ ವರ್ಷ ಕಲ್ಲಾರೆ ವಾಳೆ ವಿಜಯಿಯಾಗಿದ್ದು, ಸಂಟ್ಯಾರ್ ವಾಳೆ ರನ್ನರ್ಸ್ ಪ್ರಶಸ್ತಿಯನ್ನು ಪಡೆದಿತ್ತು.
ಫೈನಲ್
9 ರನ್ಗಳ ಜಯ:
ಸಂಜೆ ನಡೆದ ಸಾಮೆತ್ತಡ್ಕ ಹಾಗೂ ಗುಂಡ್ಯಡ್ಕ ವಾಳೆ ನಡುವಣ ಬಿಗ್ ಫೈನಲ್ ಸಮರದಲ್ಲಿ ಸಾಮೆತ್ತಡ್ಕ ತಂಡವು ಮೊದಲು ಬ್ಯಾಟಿಂಗ್ ಇಳಿದಿತ್ತು. ಸಾಮೆತ್ತಡ್ಕ ತಂಡದ ಪರ ಪ್ರೀತಂ ಮಸ್ಕರೇನ್ಹಸ್ರವರ ಬೀಡುಬೀಸುಗೆಯ ಎರಡು ಸಿಕ್ಸರ್, ಒಂದು ಬೌಂಡರಿ ಒಳಗೊಂಡ 33 ರನ್ ನೆರವಿನೊಂದಿಗೆ ತಂಡವು ನಿಗದಿತ ಆರು ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 45 ಮೊತ್ತವನ್ನು ಪೇರಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಗುಂಡ್ಯಡ್ಕ ತಂಡವು ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದ ದಾಂಡಿಗ ಪ್ರದೀಪ್ರವರು ಏಕೈಕ ಸಿಕ್ಸರ್ನೊಂದಿಗೆ ಅಜೇಯ 14 ರನ್ಗಳೊಂದಿಗೆ ಅಬ್ಬರಿಸಿದ್ದರೂ ಎದುರಾಳಿ ತಂಡದ ಕರಾರುವಾಕ್ ದಾಳಿಗೆ ತತ್ತರಿಸಿ ಕೊನೆಗೆ ಎರಡು ವಿಕೆಟ್ ನಷ್ಟಕ್ಕೆ 37 ರನ್ಗಳನ್ನು ಪೇರಿಸಿ ಒಂಭತ್ತು ರನ್ಗಳೊಂದಿಗೆ ಸೋಲೊಪ್ಪಿಕೊಂಡಿತು.
ಗುಂಡ್ಯಡ್ಕ-ಕಲ್ಲಾರೆ ರೋಚಕ ಸೆಮಿ:
ಈ ಮೊದಲು ನಡೆದ ಸೆಮಿಫೈನಲಿನ ಎ' ಬಣದಲ್ಲಿ ಗುಂಡ್ಯಡ್ಕ ವಾಳೆ(41/3)ಯು ಎದುರಾಳಿ ಕಲ್ಲಾರೆ ವಾಳೆ(38/5)ಯನ್ನು ಹಾಗೂ
ಬಿ’ ಬಣದಲ್ಲಿ ಸಾಮೆತ್ತಡ್ಕ ವಾಳೆ(28/1)ಯು ದರ್ಬೆ ವಾಳೆ(27/4)ಯನ್ನು ಸೋಲಿಸಿ ಅಧಿಕಾರಯುತವಾಗಿ ಫೈನಲ್ ಹಂತಕ್ಕೆ ನೆಗೆದಿತ್ತು. ಇದರಲ್ಲಿ ಕಲ್ಲಾರೆ ಹಾಗೂ ಗುಂಡ್ಯಡ್ಕ ನಡುವಣ ಪಂದ್ಯಾಟದಲ್ಲಿ ಕಲ್ಲಾರೆ ತಂಡಕ್ಕೆ ಫೈನಲ್ ಹಂತಕ್ಕೆ ಮುನ್ನೆಡೆಯಲು ಕೊನೆಯ ಓವರ್ನಲ್ಲಿ ಏಳು ರನ್ಗಳ ಅವಶ್ಯಕತೆ ಇತ್ತು. ತಂಡದ ಪ್ರಮುಖ ಹಿಟ್ಟರ್ ಐವನ್ ಡಿ’ಸಿಲ್ವರವರು ಕ್ರೀಸಿನಲ್ಲಿ ಇದ್ದರೂ ಎದುರಾಳಿ ಗುಂಡ್ಯಡ್ಕ ತಂಡದ ಅಲ್ರೌಂಡರ್ ಪ್ರದೀಪ್ರವರ ಕರಾರುವಾಕ್ ದಾಳಿಯ ಮುಂದೆ ಐವನ್ರವರು ದೊಡ್ಡ ಹೊಡೆತ ಬಾರಿಸಿ ಔಟಾಗಿ, ಆ ಓವರ್ನಲ್ಲಿ ಕೇವಲ ಮೂರು ರನ್ಗಳನ್ನು ಬಿಟ್ಟುಕೊಟ್ಟು ಪ್ರದೀಪ್ರವರು ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಸಾಮೆತ್ತಡ್ಕ ಹಾಗೂ ದರ್ಬೆ ನಡುವಣ ಪಂದ್ಯಾಟವು ಏಕಪಕ್ಷೀಯವಾಗಿ ಸಾಗುತ್ತಾ ಸಾಮೆತ್ತಡ್ಕ ತಂಡವು ಕೇವಲ ನಾಲ್ಕು ಓವರ್ಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪುರುಷರ ವಸತಿನಿಲಯದ ವಾರ್ಡನ್ ವಂ|ರೂಪೇಶ್ ತಾವ್ರೋರವರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಸಿಎಲ್ಸಿ ಅಧ್ಯಕ್ಷ ಎಲ್ಯಾಸ್ ಪಿಂಟೋ, ಕಾರ್ಯದರ್ಶಿ ರುಡೋಲ್ಫ್ ಪಿಂಟೋ ಸಹಿತ ಗಣ್ಯರು ಉಪಸ್ಥಿತರಿದ್ದರು. ಸನ್ಮಾನಿತರ ಸನ್ಮಾನ ಪತ್ರವನ್ನು ಸದಸ್ಯ ವಿನ್ಸೆಂಟ್ ಮಸ್ಕರೇನ್ಹಸ್ ಓದಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ವಿಜೇತರ ಪಟ್ಟಿ ವಾಚಿಸಿದರು. ಪಂದ್ಯಾಟದಲ್ಲಿ ಅಂಪೈರುಗಳಾಗಿ ಸೃಜನ್, ಆಕಾಶ್, ಮೊದಿನ್, ದಿವಿನ್, ಸ್ಕೋರರ್ ಆಗಿ ನಾಸಿರ್, ಆದರ್ಶ್, ವೀಕ್ಷಕ ವಿವರಣೆಗಾರರಾಗಿ ವಿಲಿಯಂ ಪಿಂಟೋ, ಸಿಎಲ್ಸಿ ಸದಸ್ಯ ಜೇಸನ್ ವರ್ಗೀಸ್ರವರು ಸಹಕರಿಸಿದರು. ಹಿರಿಯ ಸದಸ್ಯ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.
ಪೇಟೆ VS ಗ್ರಾಮೀಣ ತಂಡಗಳ ಫೈನಲ್..
ಸಾಮೆತ್ತಡ್ಕ ವಾಳೆಯು 2020, 2021 ಹಾಗೂ 2022ರಲ್ಲಿ ಸತತ ಮೂರು ವರ್ಷ ಪಂದ್ಯಾಕೂಟದ ಚಾಂಪಿಯನ್ ಎನಿಸಿಕೊಂಡು `ಹ್ಯಾಟ್ರಿಕ್’ ಸಾಧನೆಯನ್ನು ಮೆರೆದಿದ್ದು ಕಳೆದ ಬಾರಿ ನಾಲ್ಕನೇ ಸಲ ಸಾಧನೆ ಮಾಡಲು ಅಸಾಧ್ಯವಾಗಿ ಅದು ಸೆಮಿ ಹಂತದಲ್ಲಿಯೇ ಮುಗ್ಗರಿಸಿತ್ತು. ಆದರೆ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ಸಾಧನೆ ಮೆರೆದಿದೆ. ಗ್ರಾಮೀಣ ವಾಳೆ ಎನಿಸಿದ ಗುಂಡ್ಯಡ್ಕ ವಾಳೆಯು ಸಿಎಲ್ಸಿ ಮೊದಲು ಸಂಘಟಿಸಿದ ಅಂಡರ್ ಆರ್ಮ್ ಟೂರ್ನಿಯಲ್ಲಿ ಅನೇಕ ಬಾರಿ ಚಾಂಪಿಯನ್ ಎನಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಓವರ್ ಆರ್ಮ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಸನ್ಮಾನ:
ಬ್ರಹ್ಮಾವರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಅಂಡರ್ 14 ಮತ್ತು ಅಂಡರ್ 17ರ ವಯೋಮಿತಿಯ ಬಾಲಕ-ಬಾಲಕಿಯರ ಲೆದರ್ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅಂಡರ್ 17 ವಯೋಮಿತಿಯ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ ರನ್ನರ್ಸ್ ಪ್ರಶಸ್ತಿ, ಚಿಕ್ಕೋಡಿ ಜಿಲ್ಲೆಯಲ್ಲಿ ಅಂಡರ್ 71ರ ವಯೋಮಿತಿಯ ರಾಜ್ಯ ಮಟ್ಟದ ಟೂರ್ನಿಯಲ್ಲಿ ಅಲೌರೌಂಡ್ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿಎಲ್ಸಿ ಅಧ್ಯಕ್ಷ ಎಲ್ಯಾಸ್ ಪಿಂಟೋ ಹಾಗೂ ಮೋಲಿ ಫೆರ್ನಾಂಡೀಸ್ ದಂಪತಿ ಪುತ್ರಿ ಏಂಜಲಿಕಾ ಮೆಲಾನಿ ಪಿಂಟೋರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
-17 ತಂಡಗಳನ್ನು ಎ’ ಹಾಗೂಬಿ’ ವಿಭಾಗಗಳನ್ನಾಗಿ ಮಾಡಿ ಕ್ರೀಡಾಂಗಣದಲ್ಲಿನ ಎರಡು ಅಂಕಣಗಳಲ್ಲಿ ಏಕಕಾಲದಲ್ಲಿ ಆಡಿಸಲಾಯಿತು.
-ಆಗಮಿಸಿದ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
-ಪಂದ್ಯಾಟವು ಬೆಳಿಗ್ಗೆ ಸರಿಯಾಗಿ 9.15 ಕ್ಕೆ ಆರಂಭವಾಗಿ ಸಂಜೆ 5.45ಕ್ಕೆ ಪಂದ್ಯಾಟವು ಸಮಾಪ್ತಿಯನ್ನು ಕಂಡಿತ್ತು.
-ಸಿಎಲ್ಸಿ ಸಂಸ್ಥೆಯ ಸದಸ್ಯರು ಸಿಎಲ್ಸಿ ಲೋಗೊನೊಂದಿಗೆ ನೀಲಿ-ಹಳದಿ ಬಣ್ಣದ ಜೆರ್ಸಿಯನ್ನು ಧರಿಸಿ ಕಂಗೊಳಿಸುತ್ತಿದ್ದರು.
-ಸಂಘಟನೆಯ ಸದಸ್ಯರು ಪಂದ್ಯಾಟದ ಬಳಿಕ ಕ್ರೀಡಾಂಗಣವನ್ನು ಮತ್ತು ಕ್ರೀಡಾಂಗಣದ ಸುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಸ್ವಚ್ಚತೆಗೆ ಆದ್ಯತೆಯನ್ನು ನೀಡಿದ್ದರು.