ಪ್ರಾಥಮಿಕ, ಪ್ರೌಢ ಶಾಲಾ ಪಠ್ಯದಲ್ಲಿ ಕೃಷಿ ಪಾಠಕ್ಕೆ ಆದ್ಯತೆ ನೀಡಿ- ಸಂಪತ್ ಸಾಮ್ರಾಜ್ಯ
ಸರಕಾರದಿಂದ ಸಿಗುವ ಮಾಹಿತಿ ನೀಡುವ ಕಾರ್ಯ – ವಿಜಯ ಕುಮಾರ್ ಕೋರಂಗ
ಪುತ್ತೂರು: ಈ ಭಾಗದ ಜನರು ಭತ್ತದ ಕೃಷಿಗಿಂತಲೂ ಹೆಚ್ಚಾಗಿ ಅಡಿಕೆ ಕೃಷಿಗೆ ಅವಲಂಭಿತರಾಗಿದ್ದಾರೆ. ಆದರೆ ಯಾವ ಕೃಷಿ ಮಾಡಿದವನು ಕೂಡಾ ಆರಾಮದಾಯಕ ಜೀವನ ನಡೆಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರದಿಂದ ಕೃಷಿಗೆ ಅನೇಕ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಕೃಷಿ ಇಲಾಖೆಯ ಸೌಲಭ್ಯ ಪಡೆಯಲು ಅರ್ಜಿ ಕೊಟ್ಟರು ಸಿಗದಿದ್ದರೆ ನಮ್ಮ ಕಚೇರಿಯನ್ನು ಸಂಪರ್ಕಿಸಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ತಾಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ದರ್ಬೆ ರೈತ ಸಂಪರ್ಕ ಕೇಂದ್ರದಲ್ಲಿ ಜ.8ರಂದು ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಪ್ರಗತಿಪರ ಕೃಷಿಕ ಮಹಿಳೆಯರಿಬ್ಬರಿಗೆ ಸನ್ಮಾನ ನೆರವೇರಿಸಿ, ಸೌಲಭ್ಯ ವಿತರಣೆ ಮಾಡಿ ಮಾತನಾಡಿದರು. ಈ ಭಾಗದಲ್ಲಿ ಜನರು ಹೆಚ್ಚಾಗಿ ಅಡಿಕೆ ಕೃಷಿಗೆ ಅವಲಂಭಿತರಾಗಿದ್ದಾರೆ. ಇವತ್ತು ಕೃಷಿಯ ಜೊತೆಗೆ ಇಂಡಸ್ಟ್ರೀಯು ಮುಂದುವರಿಯುತ್ತಿದೆ. ಆದರೆ ಕೊನೆಗೆ ಏನಾದರೂ ತಿನ್ನಬೇಕಾದರೆ ಕೃಷಿಯೇ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೃಷಿಕರ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಆಗಬಾರದು. ಸರಕಾರದ ಯೋಜನೆ ಸವಲತ್ತು ಪಡೆದುಕೊಳ್ಳಿ. ಕೃಷಿಯನ್ನು ಭದ್ರತೆ ಮಾಡುವ ಕೆಲಸ ಆಗಬೇಕು. ನಡುವೆ ತರಕಾರಿಯನ್ನು ಬೆಳೆಸಿ. ಈ ಕುರಿತು ಇಲಾಖೆಯಿಂದ ಆಗಾಗ ಜಾಗೃತಿ ಕಾರ್ಯಗಾರ ನಡೆಯಬೇಕೆಂದರು.
ಹವಮಾನ ಆದಾರಿತ ವಿಮೆ ಶೇ.60 ರಾಜ್ಯದ್ದು
ಇವತ್ತು ಕೃಷಿಕರನ್ನು ಹವಮಾನ ವಿಮೆ ಬದುಕು ನೀಡಿದೆ. ಆದರೆ ಕೆಲವು ಪಕ್ಷದವರು ಇದು ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿ ಶೇ.20 ಮಾತ್ರ ಕೇಂದ್ರದ್ದು, ಶೇ.60 ರಾಜ್ಯದ್ದು, ಉಳಿದದ್ದು ಕೃಷಿಕರದ್ದು ಈ ಕುರಿತು ರೈತರು ತಿಳಿದುಕೊಳ್ಳಬೇಕು. ರಾಜ್ಯ ಸರಕಾರ ಅನುಮತಿ ಕೊಟ್ಟರೆ ಮಾತ್ರ ಹವಮಾನ ಆಧಾರಿತ ವಿಮೆ ಬರುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪ್ರಾಥಮಿಕ, ಪ್ರೌಢ ಶಾಲಾ ಪಠ್ಯದಲ್ಲಿ ಕೃಷಿ ಪಾಠಕ್ಕೆ ಆದ್ಯತೆ ನೀಡಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಂಪತ್ ಸಾಮ್ರಾಜ್ಯ ಅವರು ಮಾತನಾಡಿ ಹಿಂದೆ ಸಿದ್ಧರಾಮಯ್ಯ ಸರಕಾರ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ ಅದು ಬಳಿಕ ಕಡಿತಗೊಂಡಿದೆ. 1 ಹೆಕ್ಟೇರ್ಗೆ ರೂ. 25ಸಾವಿರ ಕೊಡಬೇಕು. ಎಸ್ಸಿ ಎಸ್ಟಿ ಸೌಲಭ್ಯದ ಗುರಿ ಆಗದೆ ಇದ್ದಾಗ ಅದನ್ನು ಸಾಮಾನ್ಯ ವಿಭಾಗಕ್ಕೆ ಕೊಡಬೇಕು, ಭತ್ತ ಖರೀದಿ ಕೇಂದ್ರಗಳು ಬೆಳೆ ಕೊಯ್ಲು ಮುಂದೆ ಆಗಬೇಕು. ನಾಟಿ ಮಾಡುವಾಗಲೇ ಬೆಂಬಲ ಬೆಲೆ ಸಿಗಬೇಕೆಂದು ಮನವಿ ಮಾಡಿದ ಅವರು ಪ್ರಮುಖವಾಗಿ ಮಕ್ಕಳಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಠ್ಯದಲ್ಲಿ ಕೃಷಿ ಪಾಠ ನೀಡುವಂತೆ ಸದನದಲ್ಲಿ ಧ್ವನಿ ಎತ್ತಬೇಕೆಂದು ಶಾಸಕರನ್ನು ಮನವಿ ಮಾಡಿದರು.
ಸರಕಾರದಿಂದ ಸಿಗುವ ಮಾಹಿತಿ ನೀಡುವ ಕಾರ್ಯ:
ಕೃಷಿಕ ಸಮಾಜದ ಪುತ್ತೂರು ತಾಲೂಕು ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅವರು ಮಾತನಾಡಿ ಕಳೆದ 4 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಡಿಲು ಬಿದ್ದ ಗದ್ದೆಯ ಉಲುಮೆಗೆ ಪ್ರೋತ್ಸಾಹ ನೀಡಿದ್ದೇವು. ತಾಲೂಕಿನಲ್ಲಿ ಸುಮಾರು 120 ಎಕ್ರೆ ಹಡಿಲು ಬಿದ್ದ ಗದ್ದೆ ಕೃಷಿ ನಡೆದಿದೆ. ಆಗ ಅದಕ್ಕಾಗಿ ಕೃಷಿಕ ಸಮಾಜದಿಂದ ಪ್ರೋತ್ಸಾಹ ಧನ ನೀಡಿದ್ದೆವು. ದುರದೃಷ್ಟಕರ ಸಂಗತಿ ಎಂದರೆ ಇದೀಗ ಮತ್ತೆ ಭತ್ತದ ಕೃಷಿಗೆ ಹಿನ್ನಡೆಯಾಗಿದೆ. ಅದೇ ರೀತಿ ಕೃಷಿ ಸಮಾಜಕ್ಕೆ ನಿವೇಶನ ಕುರಿತು ಅವರು ಶಾಸಕರಲ್ಲಿ ಮನವಿ ಮಾಡಿದರು. ನಿವೇಶನ ದೊರೆತೆರೆ ಕೃಷಿಕ ಸಮಾಜದಿಂದ ಅನುದಾನ ಬಳಕೆ ಮಾಡಬಹುದು. ಮುಂದೆ ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯದ ಕುರಿತು ಹೆಚ್ಚಿನ ಮಾಹಿತಿ ನೀಡಬಹುದು ಎಂದರು.
ಪುತ್ತೂರು ಉಪವಿಭಾಗದ ಉಪಕೃಷಿ ನಿರ್ದೇಶಕ ಶಿವಶಂಕರ್ ಹೆಚ್.ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮಲ್ಲಿ ಭತ್ತ ಪ್ರಧಾನವಾದ ಬೆಳೆ. ಅದರೆ ಇತ್ತೀಚೆಗೆ ಭತ್ತದ ಕೃಷಿ ಕಡಿಮೆಯಾಗಿದೆ. ಆದರೆ ಎಷ್ಟೇ ಇಂಡಸ್ಟ್ರೀಯಲ್ ಇದ್ದರೂ ಉದ್ಯೋಗ ಅವಕಾಶ ಕೊಡುವುದು ಕೃಷಿ ಮಾತ್ರ. ಅದೆ ರೀತಿ ಎಷ್ಟೇ ಬೇರೆ ಸೆಕ್ಟರ್ ಬೆಳವಣಿಗೆಯಾದರೂ ಉನ್ನಲು ಆಹಾರ ಬೇಕೆ ಬೇಕು. ನಮ್ಮಲ್ಲಿ ರೈತ ಸಂಪರ್ಕ ಕೇಂದ್ರ ಮೂರು ಇದೆ. ಸಿಬ್ಬಂದಿಗಳ ಕೊರತೆ ಇದೆ. ಆದರೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿಕರಿಗೆ ಯಾವುದೇ ತೊಂದರೆ ಇದ್ದಲ್ಲಿ ನನಗೆ ಕರೆ ಮಾಡಿ. ಇದರ ಜೊತೆಗೆ ಗ್ರಾಮಾಂತರಿಂದ ಪೇಟೆಗೆ ಬಂದವರು ರೈತ ಸಂಪರ್ಕ ಕೇಂದ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. ಇವತ್ತು ಸುಮಾರು ರೂ. 19 ಸೌಲಭ್ಯ ಮೌಲ್ಯದ ಸೌಲಭ್ಯ ಸಬ್ಸಿಡಿ ಆಧಾರದಲ್ಲಿ ಕೇವಲ ರೂ. 5ಸಾವಿರಕ್ಕೆ ಸಿಗುತ್ತದೆ. 30ಲೆಂತ್ ಪೈಪ್, 5 ಸ್ಪ್ರಿಂಕ್ ಲೇಯರ್ ಕೊಡಲಾಗುತ್ತದೆ. 134 ಮಂದಿ ಸಾಮಾನ್ಯ, 8 ಮಂದಿ ಎಸ್ಸಿ, 5 ಮಂದಿ ಎಸ್ಟಿಗೆ ಸೌಲಭ್ಯ ವಿತರಣೆ ನಡೆಯಲಿದೆ ಎಂದರು.
ಭತ್ತದ ಕೃಷಿ ರೈತ ಮಹಿಳೆಯರಿಬ್ಬರಿಗೆ ಸನ್ಮಾನ:
ಕೆದಂಬಾಡಿ ಗ್ರಾಮದ ಬೀಡು ನಿವಾಸಿ ಹೈನುಗಾರಿಕೆ ಮತ್ತು ಭತ್ತದ ಕಷಿಕರಾದ ವೀಣಾ ಪಿ ಬಲ್ಲಾಳ್, ಕೊಡಿಪ್ಪಾಡಿ ಒಜಾಲ ನಿವಾಸಿ ಭತ್ತದ ಕೃಷಿಕೆ ದಾಜಮ್ಮ ಕೊಡಿಪ್ಪಾಡಿ ಅವರನ್ನು ತಾಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆಯಿಂದ ಸನ್ಮಾನಿಸಲಾಯಿತು. ಸನ್ಮಾನದಲ್ಲಿ ಹೂ, ಹಾರ, ಸನ್ಮಾನಪತ್ರ ಮತ್ತು ನಗದು ವಿತರಿಸಲಾಯಿತು.
ರೈತರಿಂದ ವಿವಿಧ ಬೇಡಿಕೆಗಳನ್ನು ಆಲಿಸಿದ ಶಾಸಕರು:
ಸಭಾ ಕಾರ್ಯಕ್ರಮ ಬಳಿಕ ಶಾಸಕರು ಸಭೆಯಲ್ಲಿ ಭಾಗವಹಿಸಿದ ರೈತರ ವಿವಿಧ ಬೇಡಿಕೆಗಳನ್ನು ಆಲಿಸಿದರು. ಕೋವಿ ಡೆಪೋಸಿಟ್ಗೆ ಹಣ ಪಡೆಯುತ್ತಾರೆಂಬ ಕುರಿತು ರೈತರು ಪ್ರಸ್ತಾಪಿಸಿದಾಗ ಆಶೋಕ್ ಕುಮಾರ್ ರೈ ಅವರು ಕೋವಿ ಡೆಪೋಸಿಟ್ಗೆ ಹಣ ಕಟ್ಟಲು ಇಲ್ಲ. ಈ ಕುರಿತು ಮೊದಲ ಅಧಿವೇಶನದಲ್ಲಿ ಮಾತನಾಡಿದ್ದೇನೆ ಎಂದರು. ನಮಗೆ ತರ್ಪಾಲು ಕೊಡುತ್ತಿಲ್ಲ ಎಂದು ಈಶ್ವರಮಂಗಲ ಜಲಧರ ಕಾಲೋನಿಯವರು ಹೇಳಿದರು. 2 ವರ್ಷದ ಹಿಂದೆ ತರ್ಪಾಲು ಯೋಜನೆ ಸ್ಥಗಿತಗೊಳಿಸಲಾಗಿದೆ. ಈಗ ಹಿಂದಿನ ಸೀನಿಯಾರಿಟಿ ಪ್ರಕಾರ ನೀಡುತ್ತಿದರೆ ಅದನ್ನು ವಿಚಾರಿಸುತ್ತೇನೆ ಎಂದು ಅಧಿಕಾರಿಗಳು ಹೇಳಿದರು.
ಶಾಸಕರು ಮಾತನಾಡಿ ಅವರಿಗೆ ತರ್ಪಾಲು ಕೊಡಿಸುವಂತೆ ವ್ಯವಸ್ಥೆ ಮಾಡಿ ಎಂದರು. ಹೈನುಗಾರಿಕೆಗೆ ಗೋಮಾಲಗಳು ನಸಿಶಿ ಹೋಗುತ್ತಿದೆ ಎಂಬ ಕುರಿತು ಸಭೆಯಲ್ಲಿ ಪ್ರಸ್ತಾಪವಾದ್ದಂತೆ ಶಾಸಕರು ಮಾತನಾಡಿ ವಿದೇಶಿ ಮಾದರಿಯಲ್ಲಿ ಕೊಯಿಲದಲ್ಲಿ ಹೈನುಗಾರಿಕೆ ಮಾಡುವ ಯೋಜನೆ ಇದೆ. ಅದೆ ರೀತಿ ಹೈನುಗಾರಿಕೆಯವರಿಗೆ ಕನಿಷ್ಠ ರೂ. 5 ಜಾಸ್ತಿ ಮಾಡಬೇಕು. ಕಿಂಡಿ ಅಣೆಕಟ್ಟು ಕುರಿತ ಪ್ರಸ್ತಾಪನೆಗೆಗೆ ಸಂಬಂಧಿಸಿ ಕಟಾರದಲ್ಲಿ ಮತ್ತು ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ ಅಣೆಕಟ್ಟು ನಿರ್ಮಾಣ ಆಗಲಿದೆ ಎಂದು ಮಾಹಿತಿ ನೀಡಿದರು.
ಇಲಾಖೆಗಳಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಮ್ಪ್ರಸಾದ್ ಆರೋಪ ಮಾಡಿದರು. ಶಾಸಕರು ನೋಡಿ ಭ್ರಷ್ಟಾಚಾರವನ್ನು ದೇವರು ಬಂದರು ನಿಲ್ಲಿಸಲು ಆಗುವುದಿಲ್ಲ. ಹಾಗಾಗಿ ನಾನು ಭ್ರಷ್ಟ ಆಗದಿದ್ದರೆ ಇನ್ನೊಬ್ಬರನ್ನು ಭ್ರಷ್ಟಚಾರದಿಂದ ನಿಲ್ಲಿಸಬಹುದು ಎಂದರು. ಇದೇ ಸಂದರ್ಭ ಸೌಲಭ್ಯ ವಿತರಣೆ ಸಂದರ್ಭ ಮಹಿಳೆಯೊಬ್ಬರು ನಾನು ಅರ್ಜಿ ಹಾಕಿದ್ದೇನೆ ನನಗೆ ಸೌಲಭ್ಯ ಸಿಗಲಿಲ್ಲ ಎಂದು ಶಾಸಕರ ಬಳಿ ಹೇಳಿಕೊಂಡಾಗ ಅಧಿಕಾರಿಗಳನ್ನು ಕರೆಸಿ ಯಾವ ರೀತಿಯಲ್ಲಿ ಸೌಲಭ್ಯ ಹಂಚಿದ್ದೀರಿ. ಅರ್ಹತೆ ಏನು ಎಂಬ ಕುರಿತು ಮಾಹಿತಿ ಪಡೆದು ಆ ಮಹಿಳೆಗೆ ಯಾವುದಾದರಲ್ಲೊಂದು ಯೋಜನೆಯ ಮೂಲಕ ಸೌಲಭ್ಯ ಕೊಡಿಸಿ. ಅವರು ಇವತ್ತು ಕಾರ್ಯಕ್ರಮಕ್ಕೆ ಅಷ್ಟು ದೂರದಿಂದ ಬಂದಿದ್ದಾರೆ. ಅವರು ಸೌಲಭ್ಯದಿಂದ ವಂಚಿರಾಗಬಾರದು. ಮಹಿಳೆಯಿಂದ ಅವರ ಮಾಹಿತಿ ಪಡೆದುಕೊಂಡು ಸೌಲಭ್ಯ ಕೊಡಿಸಿ ಎಂದರು. ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ್ ಜೈನ್, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಮಂಜುಳಾ, ಸಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೈತಗೀತೆ ಹಾಡಲಾಯಿತು. ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಯಶಸ್ ಮಂಜುನಾಥ್ ಸ್ವಾಗತಿಸಿದರು.ತಾಂತ್ರಿಕ ಅಧಿಕಾರಿ ವಂದನಾ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಆರಂಭದಲ್ಲಿ ಮತ್ತು ಬಳಿಕ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ಹಾಗು ಮೀನುಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ಮಾಹಿತಿ ನೀಡಲಾಯಿತು.
ಕೃಷಿ ಸೌಲಭ್ಯಕ್ಕೆ ದುಡ್ಡು ಕೊಡಬೇಕಾಗಿಲ್ಲ:
ಕೃಷಿ ಸೌಲಭ್ಯ ಪಡೆಯುವಲ್ಲಿ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ದುಡ್ಡು ಕೇಳಿದರೆ ನನ್ನ ಗಮನಕ್ಕೆ ತನ್ನಿ. ಅದೇ ರೀತಿ ದುಡ್ಡು ತೆಗೆದು ಕೊಳ್ಳುವವರನ್ನು ನಾನು ಬಿಡುವುದಿಲ್ಲ. ರೈತರಿಗೆ ಏನು ತಲುಪಬೇಕೋ ಅದನ್ನು ಮುಟ್ಟಿಸುವ ಕೆಲಸ ಆಗಬೇಕು. ಯಾಕೆಂದರೆ ಇವತ್ತು ಕೃಷಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾರೆಂಬ ಆರೋಪ ಇದೆ. ಹಾಗೆಂದು ಕೆಲವು ಅಧಿಕಾರಿಗಳು ಉತ್ತಮ ಕೆಲಸ ಮಾಡುವವರಿದ್ದಾರೆ. ಇತ್ತೀಚೆಗೆ ಪಾಣಾಜೆಯಲ್ಲಿ ಎಲೆಚುಕ್ಕಿ ರೋಗ ಬಂದಿದೆ ಎಂದು ನನಗೆ ಮಾಹಿತಿಯಂತೆ ಸಿಪಿಸಿಆರ್ ಅಧಿಕಾರಿಗಳಿಗೆ ತಿಳಿಸಿದ್ದೆ. ಆ ಅಧಿಕಾರಿಗಳು ಅಲ್ಲಿಗೆ ತೆರಳಿ ಅಡಿಕೆ, ಮಣ್ಣು, ಸೋಗೆಯನ್ನು ಪರಿಶೀಲನೆ ಮಾಡದೆ ಅಥವಾ ಅದರ ಸ್ಯಾಂಪಲ್ ಸಂಶೋಧನೆಗೆ ಕೊಂಡೊಯ್ಯದೆ. ಕೇವಲ ಪೊಟೋ ತೆಗೆದುಕೊಂಡು ಹೋಗಿದ್ದಾರೆ. ಇದು ಆಗಬಾರದು. ರೈತರ ನೋವಿಗೆ ಸ್ಪಂಧಿಸುವ ಕೆಲಸ ಆಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಸಭೆಯಲ್ಲಿ ಹೇಳಿದರು.