ವಿಠ್ಠಲ್ ಜೇಸೀಸ್ ಸ್ಕೂಲ್‌ನ ಪುಟಾಣಿ ಪಾಕ ಪ್ರವೀಣೆ ಮನಸ್ವಿ ಆರ್.ಕೆ

0

ಬರಹ: ಸರ್ವಮಂಗಳ ಕೆ. ವಿಟ್ಲ

ಬಾಲ್ಯ ಎನ್ನುವುದು ಪುಟ್ಟ ಗೆಳತಿಯರ ಸಮೂಹದಲ್ಲಿ ಗೊಂಬೆಗಳೊಂದಿಗೆ ಆಡುವ, ಅಮ್ಮ ತಯಾರಿಸಿದ ತಿಂಡಿಗಳನ್ನು ಮೆಲ್ಲುತ್ತಾ ನಲಿದು ಕುಣಿಯುವ ಕಾಲ. ಹೊಸತರ ಹುಡುಕಾಟದೊಡನೆ ಆಸಕ್ತಿ, ಕುತೂಹಲದಿಂದ ಎಲ್ಲವನ್ನೂ ಗಮನಿಸುವ ಸಮಯ. ಆದರೆ ಇಲ್ಲೊಬ್ಬಳು ಪುಟಾಣಿ ವಿಧ ವಿಧದ ತಿಂಡಿಗಳನ್ನು ತಯಾರಿಸಿ, ಹೊಸ ಪ್ರಯೋಗಗಳನ್ನು ಮಾಡುತ್ತಾ, ಮನೆಯವರೆಲ್ಲ ನಾಲಿಗೆಗೆ ಸವಿ ಸವಿ ತಿನಿಸುಗಳನ್ನು ಉಣಬಡಿಸುತ್ತಿದ್ದಾಳೆ…


ಹೌದು… ಪುಟ್ಟ ಲಂಗ ಧರಿಸಿ ಓಡಾಡುವ ಪುಟಾಣಿಯ ಪುಟ್ಟ ಕೈಗಳು ಎಲ್ಲರಿಗೂ ಸಿಹಿಯನ್ನು ಉಣಿಸುತ್ತಿವೆ. ಅವಳೇ ಮನಸ್ವಿ ಆರ್.ಕೆ. ವಿಟ್ಲದ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ. ರಜೆ ಸಿಕ್ಕಿದ್ರೆ ಸಾಕು ಅಂತ ಮಕ್ಕಳೆಲ್ಲಾ ಹೊರಗೆ ಆಡ್ತಿದ್ರೆ ಇವಳ ಆಟದ ತಾಣ ಅಡುಗೆಮನೆ. ಅದೇನೋ ಪಕ್ಕಾ ಲೆಕ್ಕಾಚಾರ ಇವಳದು. ರುಚಿ ರುಚಿಯಾದ ಅಡುಗೆ ಮನೆಯವರಿಗೆ.. ಅಡುಗೆ ಮನೆಯಲ್ಲಿ ದಿನ ಕಳೆಯುವುದು ಈಕೆಯ ಇಷ್ಟವಾದ ಹವ್ಯಾಸ.

ನಾಲ್ಕನೇ ತರಗತಿಯಿಂದ ಅಡುಗೆಮನೆ ಪಯಣ ಶುರುವಾಗಿದೆ ಅನ್ನುತ್ತಾಳೆ ಪುಟ್ಟ ಮನಸ್ವಿ. ತನ್ನ ಪುಟ್ಟ ಪುಟ್ಟ ಕೈಗಳಿಂದ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಈಕೆಯ ವಯಸ್ಸಿಗೆ ಮೀರಿದ ಪ್ರೌಢತೆ, ತುಂಟ ಬಾಲೆಯ ಅಡುಗೆ ಮನೆಯ ಪ್ರಾವೀಣ್ಯತೆಗೆ ಯಾರಾದರೂ ತಲೆದೂಗುವಂತೆ ಮಾಡುತ್ತದೆ. ಓದಿನಲ್ಲೂ ಮನಸ್ವಿ ಸದಾ ಮುಂದು. ಭರತನಾಟ್ಯ, ಸಂಗೀತ, ಕೀಬೋರ್ಡ್, ಡ್ರಾಯಿಂಗ್, ಕ್ರಾಫ್ಟ್ ಮತ್ತು ವಿಶಿಷ್ಟ ವಿಭಿನ್ನ ಮಾಡೆಲ್ ತಯಾರಿಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಈಕೆಯ ಮಾತುಗಳು ಮನಸನ್ನು ಸೆಳೆಯುತ್ತವೆ. ಸಾಕಷ್ಟು ಕಡೆ ಭರತನಾಟ್ಯ, ಕೀಬೋರ್ಡ್ ಕಾರ್ಯಕ್ರಮಗಳನ್ನು ಕೂಡಾ ನೀಡಿರುವ ಈಕೆಗೆ ಅಕ್ಕ ಮಹಿಮಾ ಆರ್. ಕೆ. ಸದಾ ಪ್ರೋತ್ಸಾಹಿಸುತ್ತಾಳೆ.

ಈಕೆಯು ವಿದುಷಿ ಶಾಲಿನಿ ಆತ್ಮಭೂಷಣ್ ಇವರ ಬಳಿ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು, ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾಗಿದ್ದಾಳೆ. ಜೊತೆಗೆ, ಕೀಬೋರ್ಡ್ ಅನ್ನು ಶ್ರೀ ನಟರಾಜ್ ಶರ್ಮ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ. ರಜೆ ಸಿಕ್ಕಾಗ ಮೊಬೈಲ್, ಟಿವಿ ಎಂದು ಕಾಲ ಕಳೆಯದೆ ಹೊಸ ರುಚಿ, ವಿವಿಧ ಕ್ರಾಫ್ಟ್ ತಯಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಈಕೆ ರವಿಶಂಕರ ಕುಳಮರ್ವ ಮತ್ತು ಡಾ. ಮೈತ್ರಿ ಭಟ್ ದಂಪತಿಗಳ ಪುತ್ರಿ. ತಂದೆ ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು. ತಾಯಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಅಂತೆಯೇ, ವಿಟ್ಲದ ಖ್ಯಾತ ಜ್ಯೋತಿಷಿ ಕುಳಮರ್ವ ಸುಬ್ರಹ್ಮಣ್ಯ ಭಟ್ ಅವರ ಮುದ್ದಿನ ಮೊಮ್ಮಗಳು ಈಕೆ.
ಇತ್ತೀಚೆಗೆ ‘ನಮ್ಮ ಟಿವಿ – ನಮ್ಮ ರುಚಿ’ ದಸರಾ ಸ್ಪೆಷಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಸಪಾಕ ತಯಾರಿಸಿ, ಎಲ್ಲರ ಮನ ಗೆದ್ದಿರುವ ಪುಟಾಣಿ ಮನಸ್ವಿಗೆ ಮುಂದೆ ಭವ್ಯ ಭವಿಷ್ಯವಿದೆ ಅನ್ನುತ್ತಾರೆ ನಮ್ಮ ಟಿವಿಯ ನಿರೂಪಕಿ ಹಾಗೂ ಕಾರ್ಯಕ್ರಮ ನಿರ್ವಾಹಕಿ ಸುಕನ್ಯಾ ಅವರು. ಈ ಪುಟ್ಟ ಮನಸ್ವಿಯ ಭವಿಷ್ಯ ಸದಾ ಉಜ್ವಲವಾಗಿರಲಿ ಎಂಬ ಆಶಯದೊಡನೆ ‘ದೊಡ್ಡವಳಾದಾಗ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ ‘ಮೋದಿಯಂತೆ ಪ್ರಧಾನ ಮಂತ್ರಿಯಾಗಬೇಕು ಎನ್ನುವ ಹೊತ್ತಿರುವುದಾಗಿ ತಿಳಿಸಿರುವ ಈಕೆಯ ಕನಸು ನನಸಾಗಲಿ.

LEAVE A REPLY

Please enter your comment!
Please enter your name here