ಉಪ್ಪಿನಂಗಡಿ: ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಅಲ್ಲಿರುವ ತ್ಯಾಜ್ಯವನ್ನು ತೆಗೆಯಬೇಕೆಂದು ವಿದ್ಯಾರ್ಥಿಯೋರ್ವನಿಗೆ ಖಾಸಗಿ ವ್ಯಕ್ತಿಯೋರ್ವರು ತೊಂದರೆ ನೀಡಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಬಿಳಿಯೂರು ಗ್ರಾಮದ ನಡುಮನೆಯ ವಾಸಪ್ಪ ನಾಯ್ಕ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮಗ ಕಾರ್ತಿಕ್ ಬಿಳಿಯೂರು ಸರಕಾರಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದು, ಕೆಲ ದಿನಗಳಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ, ತಾನು ಶಾಲೆಗೆ ಹೋಗುವ ದಾರಿ ಮಧ್ಯದ ಕೋಡ್ಲೆ ನಿವಾಸಿ ಗಂಗಾವತಿ ಭಟ್ ಎಂಬವರು ಈ ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಪರಿಸರದಲ್ಲಿನ ತ್ಯಾಜ್ಯವನ್ನು ತೆಗೆದು ಬಳಿಕವೇ ದಾರಿಯನ್ನು ಬಳಸಬೇಕೆಂದು ತಾಕೀತು ಮಾಡಿದ್ದಾರೆಂದು ತಿಳಿಸಿರುತ್ತಾನೆ. ಇದರಿಂದ ನನಗೆ ಅವಮಾನವಾಗಿದ್ದು, ನಾನು ಶಾಲೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾನೆ. ಈ ಬಗ್ಗೆ ಜ.5ರಂದು ನಾನು ಈ ಬಗ್ಗೆ ಗಂಗಾವತಿ ಭಟ್ ಅವರಲ್ಲಿ ವಿಚಾರಿಸಿದ್ದು, ಅದಕ್ಕೆ ಅವರು ನನ್ನನ್ನು ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ನೀವು ನಡೆದುಕೊಂಡು ಹೋಗುವ ದಾರಿ ನಮ್ಮದೆಂದು ತಿಳಿಸಿದ್ದಾರೆ. ಅಲ್ಲಿ ನಡೆದುಕೊಂಡು ಹೋಗಬೇಕಾದರೆ ಅವರು ಹೇಳಿದ ಹಾಗೆ ದಾರಿಯಲ್ಲಿದ್ದ ತ್ಯಾಜ್ಯವನ್ನು ತೆಗೆಯಬೇಕು ಎಂದು ನನ್ನಲ್ಲಿಯೂ ತಾಕೀತು ಮಾಡಿದ್ದಾರೆ. ತಲೆತಲಾಂತರದಿಂದ ನಾವು ಬಳಸುತ್ತಿದ್ದ ಕಾಲು ದಾರಿಯಲ್ಲಿ ನಮ್ಮ ಸಂಚಾರವನ್ನು ನಿರ್ಬಂಧಿಸುವ, ತ್ಯಾಜ್ಯ ತೆಗೆಯಲು ಹೇಳುವ ಮೂಲಕ ನನ್ನ ಮಗನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.