ತಂದೆ ತಾಯಿಯ ಕನಸು ನನಸು ಮಾಡಲು ಮಕ್ಕಳು ಪ್ರಯತ್ನಿಸಬೇಕು-ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಬೆಳ್ಳಿಹಬ್ಬದ ಸರಣಿ ಕಾರ್ಯಕ್ರಮದಲ್ಲಿ ಬಿಇಒ ಲೋಕೇಶ್ ಎಸ್.ಆರ್

0

ಪುತ್ತೂರು: ಪ್ರತಿಯೊಬ್ಬ ತಂದೆ ತಾಯಿಗೆ ತನ್ನ ಮಕ್ಕಳ ಬಗ್ಗೆ ಕನಸಿದೆ. ಈ ಕನಸನ್ನು ನನಸು ಮಾಡಲು ಮಕ್ಕಳು ಕಷ್ಟಪಟ್ಟು ಓದಿ ಒಳ್ಳೆಯ ಫಲಿತಾಂಶ ಪಡೆದು ಉತ್ತಮ ಉದ್ಯೋಗ ಪಡೆಯುವಲ್ಲಿ ಪ್ರಯತ್ನ ಪಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಹೇಳಿದರು.

ಎಸ್.ಆರ್.ಕೆ. ಲ್ಯಾಡರ್ಸ್ನ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ 4ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಜ.20ರಂದು ನೆಲ್ಲಿಕಟ್ಟೆ ಡಾ.ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ನಡೆದ ಸೈಬರ್ ಕ್ರೈಂ ಹಾಗೂ ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ತಾಯಂದಿರ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮೊಬೈಲ್ ವಿದ್ಯಾರ್ಥಿಗಳ ದೊಡ್ಡ ಶತ್ರು. ಪೋಷಕರು ತಮ್ಮ ಮಕ್ಕಳಿಗೆ ಇಂತಹ ಆಧುನಿಕ ತಂತ್ರಜ್ಞಾನ ನೀಡುವಾಗ ಎಚ್ಚರ ವಹಿಸಬೇಕು ಎಂದ ಅವರು ಮಕ್ಕಳು ತಂದೆ ತಾಯಿಯರ ಕನಸು ಈಡೇರಿಸಬೇಕೆಂದರು. ಡಾ.ಶಿವರಾಮ ಕಾರಂತ ಪ್ರೌಢಶಾಲೆ ಕಳೆದ ಬಾರಿ ಒಳ್ಳೆಯ ಫಲಿತಾಂಶ ಪಡೆದಿದೆ ಎಂದು ಶ್ಲಾಘಿಸಿದರು. ಸಾಮಾಜಿಕ ಕಳಕಳಿ ಹೊಂದಿರುವ ಎಸ್.ಆರ್.ಕೆ. ಲ್ಯಾಡರ‍್ಸ್ ಮಾಲಕ ಕೇಶವ ಎ. ಅವರು ಬೆಳ್ಳಿಹಬ್ಬ ಪ್ರಯುಕ್ತ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿರುವುದನ್ನು ಶ್ಲಾಘಿಸಿದರು.

ಎಸ್.ಆರ್.ಕೆ. ಲ್ಯಾಡರ‍್ಸ್ ಮಾಲಕ ಕೇಶವ ಎ. ಮಾತನಾಡಿ, 1990ರಲ್ಲಿ ಆರಂಭಗೊಂಡ ನಮ್ಮ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆ ಹಲವು ಕೃಷಿ ಉಪಕರಣಗಳನ್ನು ತಯಾರಿಸುವ ಮೂಲಕ ಕರ್ನಾಟಕ, ಕೇರಳ, ಗೋವಾ, ತಮಿಳುನಾಡುಗಳಲ್ಲಿ ವ್ಯವಹಾರ ಹೊಂದಿದೆ. ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ ಬೆಳ್ಳಿಹಬ್ಬ ಸಂಭ್ರಮದಲ್ಲಿದೆ. ಆದಾಯದಲ್ಲಿ ಸಾಮಾಜಿಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಹತ್ತು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪಾಲ್ಗೊಂಡಿದ್ದರು. ತಾಲೂಕು ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ.ಅರ್ಚನಾ ಕಾವೇರಿ ಆರೋಗ್ಯ ಕುರಿತು, ಸಿಸಿಐ ಅಧಿಕಾರಿ ಪ್ರಣೀತಾ ಕೆ.ಎಸ್. ಸೈಬರ್ ಕ್ರೈಂ ಕುರಿತು ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here