ಉಪ್ಪಿನಂಗಡಿ: ಕರುವೇಲಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ರಾಮದೇವರಿಗೆ ನವಕಲಶಾಭಿಷೇಕ, ಶ್ರೀ ದುರ್ಗಾ ಪೂಜೆ ಮತ್ತು 28ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕುಣಿತ ಭಜನಾ ಸಂಭ್ರಮ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.
ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ದೇವರ ಪ್ರೀತಿಯನ್ನು ಗಳಿಸುವುದೇ ಭಜನೆಯ ಮೂಲ ಉದ್ದೇಶವಾಗಿದೆ. ಭಜನೆಯಿಂದ ಭಕ್ತರನ್ನು ಒಗ್ಗೂಡಿಸಲು ಸಾಧ್ಯ. ಆದ್ದರಿಂದ ಮಕ್ಕಳಲ್ಲಿ ಭಜನೆಯ ಅಭಿರುಚಿ ಮೂಡುವ ಕೆಲಸವನ್ನು ಮಾಡಬೇಕು. ಭಜನೆಯ ಜೊತೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳು ಉತ್ತಮ ಪ್ರಜೆಗಳಾದರೆ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ. ಇದರೊಂದಿಗೆ ಎಲ್ಲಾ ಜಾತಿ- ಮತ, ಧರ್ಮಗಳ ಜನರು ಒಗ್ಗಟ್ಟಿನಿಂದ ಬಾಳಬೇಕು ಎಂದರಲ್ಲದೆ, ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಕ್ಷೇತ್ರದ ಧಾರ್ಮಿಕ ಕೇಂದ್ರಗಳಿಗೆ ಒಟ್ಟು 3.10 ಕೋ. ರೂ. ಅನುದಾನವನ್ನು ನಾನು ನೀಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಭಜನಾ ಮಂದಿರದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಧನ್ಯಕುಮಾರ್ ರೈ, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಭಜನಾ ಮಂದಿರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ತನಿಯಪ್ಪ ಪೂಜಾರಿ ಹೊಸಮನೆ, ಪ್ರಮುಖರಾದ ತನಿಯಪ್ಪ ನಾಯ್ಕ್ ಕರುವೇಲು, ಸುದೇಶ್ ಶೆಟ್ಟಿ ಶಾಂತಿನಗರ, ಸತೀಶ್ ಅಮಾಸೆ, ಶಿವಪ್ರಸಾದ್ ಪಚ್ಚಾಡಿ, ಸುರೇಶ್ ಆಚಾರ್ಯ ಕೆಳಗಿನ ಮನೆ, ಪುರುಷೋತ್ತಮ ಮುಂಗ್ಲಿಮನೆ, ರಮೇಶ್ ಬಾಣಬೆಟ್ಟು, ಶೀನಪ್ಪ ಗೌಡ, ಭಜನಾ ಮಂದಿರದ ಅಧ್ಯಕ್ಷ ಪ್ರಸಾದ್ ಸುಪ್ರಭ, ಕಾರ್ಯದರ್ಶಿ ಲಿಂಗಪ್ಪ ಅಮಾಸೆ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ತಂಡಗಳಿಂದ ಕುಣಿತ ಭಜನಾ ಸಂಭ್ರಮ ನಡೆಯಿತು. ಮನೋಹರ್ ಸ್ವಾಗತಿಸಿದರು. ಪ್ರವೀಣ್ ಹಾಗೂ ಸಂದೀಪ್ ಕುಂಡಾಜೆ ಕಾರ್ಯಕ್ರಮ ನಿರೂಪಿಸಿದರು.