ವಿಟ್ಲ: ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಫೆ.18 ಹಾಗೂ ಫೆ.19ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ ಹಾಗೂ ಇಪ್ಪತ್ತನಾಲ್ಕನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ತುಳು ಸಾಹಿತ್ಯ ಸಮ್ಮೇಳನ:
ಸಂಸ್ಥಾನದಲ್ಲಿ ಫೆ.18ರಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ತುಳು ಭಾಷೆ ಸಂಸ್ಕೃತಿಯ ಜಾಗೃತಿಗಾಗಿ ಇಪ್ಪತ್ತ ನಾಲ್ಕನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಮೆರವಣಿಗೆ ಹೊರಡಲಿದೆ. ಬಳಿಕ ನಡೆಯುವ ಸಾಹಿತ್ಯ ಸಮ್ಮೇಳನವನ್ನು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಯಕ್ಷಗಾನ ಕಲಾವಿದರು, ಸಾಹಿತಿ, ತಜ್ಞ ವೈದ್ಯರಾಗಿರುವ ಡಾ| ಭಾಸ್ಕರಾನಂದ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕರಾಗಿರುವ ಭಾಗೀರಥಿ ಮುರುಳ್ಯ, ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುಗುಳಿ ತಿರುಮಲೇಶ್ವರ ಭಟ್, ಕನ್ಯಾನ ಶ್ರೀ ದತ್ತಕೃಪಾ ಪೈನಾನ್ಸ್ ಕಾರ್ಪೊರೇಶನ್ ನ ಮಾಲಕರಾದ ಶ್ರೀಧರ ಕೆ.ಶೆಟ್ಟಿ ಗುಬ್ಯ ಮೇಗಿನಗುತ್ತು ಭಾಗವಹಿಸಲಿದ್ದಾರೆ.
ವಿಚಾರಗೋಷ್ಠಿ:
ಬಳಿಕ ನಡೆಯುವ ವಿಚಾರಗೋಷ್ಠಿಯಲ್ಲಿ ‘ರಾಮಾಯಣದ ಪೊರ್ಲು-ತಿರ್ಲ್’ ವಿಚಾರವಾಗಿ ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ರಾಜಶ್ರೀ ಶೆಟ್ಟಿ, ‘ರಾಮಾಯಣೊಡು ದೆಂಗ್ ನ ಮಾನವೀಯ ಮೌಲ್ಯ’ ವಿಚಾರವಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಶಕುಮಾರ ಎಂ.ಕೆ., ‘ಜಾನಪದ ಪಿಂದರಿಕೆಡ್ ರಾಮಾಯಣೊ’ ವಿಚಾರವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಡಾ.ರವೀಶ್ ಪಡುಮಲೆ ವಿಚಾರ ಮಂಡಿಸಲಿದ್ದಾರೆ.
ಚಿಟ್ಕ – ಕಬಿಕೂಟ:
ಮಧ್ಯಾಹ್ನ 1 ಗಂಟೆಯಿಂದ ಚಿಟ್ಕ – ಕಬಿಕೂಟ ನಡೆಯಲಿದೆ. ಬಳಿಕ ಕಬಿತೆ- ಪದ- ಚಿತ್ರೊ ನಡೆಯಲಿದೆ. ಇದರಲ್ಲಿ ಕದ್ರಿ ನವನೀತ ಶೆಟ್ಟಿ, ರಾಜಶ್ರೀ ಟಿ.ರೈ ಪೆರ್ಲ, ವಸಂತಿ ಎ.ವಿಟ್ಲ, ಟಿ.ಸುಬ್ರಹ್ಮಣ್ಯ ಒಡಿಯೂರು, ವಿಜಯ ಶೆಟ್ಟಿ ಸಾಲೆತ್ತೂರು ಮೊದಲಾದವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ – ತುಳುಸಿರಿ ಮಾನಾದಿಗೆ:
ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಲಿದ್ದಾರೆ. ತಜ್ಞ ವೈದ್ಯರಾದ ಡಾ| ಭಾಸ್ಕರಾನಂದ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೆಂದ್ರದ ಸಂಯೋಜಕರಾದ ಡಾ. ಮಾಧವ ಎಂ.ಕೆ., ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ, ವಿಠಲ್ ಕನ್ಸ್ ಸ್ಟ್ರೆಕ್ಷನ್ ನ ಸುರೇಶ್ ಬನಾರಿ ಮೊದಲಾದವರು ಮುಖ್ಯ ಅತಿಥಿಗಳಾದಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ಮಹಾಭಲ ಭಟ್ ಕಾಡೂರು, ವೆಂಕಪ್ಪ ರೈ ಕುರ್ಲೆತ್ತಿ ಮಾರ್, ಮೋನಪ್ಪ ಪೂಜಾರಿ ಕೆರೆಮಾರ್ ಕಾವು, ಸಾಹಿತ್ಯ ಕ್ಷೇತ್ರದ ಸಾದನೆಗಾಗಿ ಚಂದ್ರಹಾಸ ಕಣಂತೂರು, ಭಾಸ್ಕರ ರೈ ಕುಕ್ಕುವಳ್ಳಿ, ರವಿರಾಜ್ ಶೆಟ್ಟಿ ಒಡಿಯೂರು, ಸಮಾಜಸೇವೆಗಾಗಿ ಕಮಲಾಕ್ಷ ಬಜಿಲಕೇರಿ ಮಂಗಳೂರು, ವಸಂತ ಉರ್ವ ಸ್ಟೋರ್, ತುಳು ರಂಗಭೂಮಿಯಲ್ಲಿ ಮಾಡಿದ ಸಾಧನೆಗಾಗಿ ಡಿ. ಶಶಿಧರ ಆಳ್ವ ದಾಸರಗುಡ್ಡೆ, ಅರುಣ್ ಶೆಟ್ಟಿ ಮುಳಿಹಿತ್ಲು, ನಾಟಿವೈದ್ಯೆ ಭಾಗೀರಥಿ ಕೊಡಿಯಾಲ, ಸಂಘಟಕ ಸೋಮಪ್ಪ ನಾಯ್ಕ್ ಕಡಬರವರಿಗೆ ತುಳುಸಿರಿ ಮಾನಾದಿಗೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಪಾವಂಜೆ ಮೇಳದವರಿಂದ ‘ಅಯೋಧ್ಯಾ ದೀಪ ಯಕ್ಷಗಾನ ಬಯಲಾಟ ನಡೆಯಲಿದೆ.
ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ:
ಫೆ.19 ರಂದು ಬೆಳಗ್ಗೆ ಗಂಟೆ 9.30ಕ್ಕೆ ವೇ|ಮೂ ಚಂದ್ರಶೇಖರ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಳ್ಳಲಿದೆ. ಬಳಿಕ ಗಂಟೆ 10.30ರಿಂದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಾಧ್ವೀ ಶ್ರೀ ಮಾತಾನಂದಮಯೀರವರು ದಿವ್ಯ ಸಾನಿಧ್ಯ ಕರುಣಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಅಯೋಧ್ಯಾ ಶ್ರೀ ರಾಮಜನ್ಮಭೂಮಿಯ ಕರಸೇವಕರನ್ನು ಗೌರವಿಸಲಾಗುವುದು. ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ 7 ಗಂಟೆಯಿಂದ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥೋತ್ಸವ ನಡೆಯಲಿದೆ.
ಫೆ.16: ಹೊರೆಕಾಣಿಕೆ ಸಮರ್ಪಣೆ
ಒಡಿಯೂರು ಸಂಸ್ಥಾನದಲ್ಲಿ ಫೆ.18-19 ರಂದು ನಡೆಯಲಿರುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಪ್ರಯುಕ್ತ ಫೆ.16ರಂದು ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳು ಸೇರಿದಂತೆ ದ.ಕ. ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾಧಿಗಳು ಸಂಗ್ರಹಿಸಿದ ಹಸಿರುವಾಣಿಯ ವಾಹನಗಳು ಆ ದಿನ ಮಧ್ಯಾಹ್ನ ಕನ್ಯಾನ ತಲುಪಲಿದ್ದು, ಎಲ್ಲಾಭಾಗಗಳಿಂದ ಬಂದ ವಾಹನಗಳು ಕನ್ಯಾನದಲ್ಲಿ ಜೊತೆಯಾಗಿ ಅಲ್ಲಿಂದ ಮೆರವಣಿಗೆ ಮೂಲಕ ಕ್ಷೇತ್ರ ತಲುಪಲಿದೆ.