ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನಗರ ಭಜನೆಯ ಮಂಗಲೋತ್ಸವ ಫೆ. 22 ರಂದು ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ ನಡೆದು ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಭಜನಾ ಮಂಗಲೋತ್ಸವ ಜರಗಿದ ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಈ ವೇಳೆ ಶ್ರೀ ಸಿದ್ಧಿವಿನಾಯಕ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನೆರವೇರಿತು.
ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಅಧ್ಯಕ್ಷ ಕೃಷ್ಣಪ್ಪ ಕುಲಾಲ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ಅಧ್ಯಕ್ಷ ಜಯಪ್ರಕಾಶ್ ರೈ ತೋಟದಮೂಲೆ, ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಪಾಲ್ಗೊಂಡರು.
ಗುರುವಂದನೆ
ಇದೇ ವೇಳೆ ಶ್ರೀ ಸಿದ್ಧಿವಿನಾಯಕ ಕುಣಿತ ಭಜನಾ ತಂಡಕ್ಕೆ ತರಬೇತು ನೀಡಿದ 6 ಮಂದಿ ತರಬೇತುದಾರರಿಗೆ ಪೋಷಕರ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.
ಮಂದಿರದ ಪುನರ್ ನಿರ್ಮಾಣ ಕಾರ್ಯ
ಮಂದಿರದ ಪುನರ್ ನಿರ್ಮಾಣ ಕಾರ್ಯಗಳು ಭರದಿಂದ ನಡೆಯುತ್ತಿವೆ. ಹಳೆಯ ಕಟ್ಟಡವನ್ನು ಕೆಡವಿ ಹೊಸ ಮಂದಿರದ ನಿರ್ಮಾಣ ಕಾರ್ಯವು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಭಕ್ತಾಭಿಮಾನಿಗಳು ಈ ಕಾರ್ಯದಲ್ಲಿ ಕೈ ಜೋಡಿಸುವಂತೆ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಹೇಳಿದರು.