ಪುತ್ತೂರು:7 ವರ್ಷದ ಹಿಂದೆ ಗೋಳಿತ್ತೊಟ್ಟುವಿನಲ್ಲಿ ಜೀಪು ಮತ್ತು ಕಂಟೈನರ್ ನಡುವೆ ನಡೆದ ಅಪಘಾತ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕಂಟೈನರ್ ಚಾಲಕ ತಮಿಳುನಾಡು ರಾಜ್ಯದ ತಿರುಚಹಳ್ಳಿ ಗ್ರಾಮದ ಕೂತುರು ನಿವಾಸಿ ಪ್ರಕಾಶ್ ಕೆ ಎಂಬವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ,ದಂಡ ವಿಧಿಸಿ ತೀರ್ಪು ನೀಡಿದೆ.
2016ರ ಸೆ.3ರಂದು ಉಪ್ಪಿನಂಗಡಿ ರಸ್ತೆಯ ಗೋಳಿತ್ತೊಟ್ಟು ಎಂಬಲ್ಲಿ ಜೀಪು ಮತ್ತು ಕಂಟೈನರ್ ನಡುವೆ ಅಪಘಾತ ಸಂಭವಿಸಿತ್ತು.ಅಪಘಾತದ ತೀವ್ರತೆಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಐದಾರು ಮಂದಿ ಗಾಯಗೊಂಡಿದ್ದರು.ಗಂಭೀರ ಗಾಯಗೊಂಡಿದ್ದ ಚಿದಾನಂದ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು.ಉಳಿದವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.ಈ ಘಟನೆಗೆ ಸಂಬಂಧಿಸಿ ಆಗಿನ ಪೊಲೀಸ್ ವೃತ್ತ ನಿರೀಕ್ಷಕ ಕುಲಕರ್ಣಿ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ಕಂಟೈನರ್ ಚಾಲಕ ಪ್ರಕಾಶ್ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್.ಆರ್.ಶಿವಣ್ಣ ಅವರು ಆರೋಪಿಗೆ ರೂ.9 ಸಾವಿರ ದಂಡ ಮತ್ತು 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ಅವರು ವಾದಿಸಿದ್ದರು.