ನೀರಿನ ಸಮಸ್ಯೆ ವಿಚಾರವನ್ನು ಇವತ್ತೇ ಹೇಳಿ ಇಲ್ಲವಾದರೆ ನಿಮ್ಮನ್ನೇ ರೆಸ್ಪಾನ್ಸ್ ಮಾಡಲಾಗುವುದು

0

ಟಾಸ್ಕ್ ಫೋರ್ಸ್ ಸಭೆಯಲ್ಲಿ ಪಿಡಿಒ,ಗ್ರಾಮ ಆಡಳಿತಾಧಿಕಾರಿಗಳಿಗೆ ಶಾಸಕರ ಸೂಚನೆ

ಪುತ್ತೂರು:ನೀರಿನ ಸಮಸ್ಯೆ ಬಂದಾಗ ಮಾತನಾಡುವುದಲ್ಲ.ಅದಕ್ಕೆ ಮೊದಲೇ ತಯಾರಾಗಿರುವುದು ಮುಖ್ಯ.ಎಲ್ಲಾ ಡ್ರೈ ಆದ ಬಳಿಕ ಬೋರ್‌ವೆಲ್ ಹಾಕಲು ಹತ್ತುಹದಿನೈದು ದಿನ ಬೇಕು.ಈ ನಿಟ್ಟಿನಲ್ಲಿ ಎಲ್ಲಾ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳು ನಿಮ್ಮ ನಿಮ್ಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ತೊಂದರೆ ವಿಚಾರವನ್ನು ಹೇಳಬೇಕು.ಇಲ್ಲವಾದಲ್ಲಿ ನಿಮ್ಮನ್ನೇ ರೆಸ್ಪಾನ್ಸ್ ಮಾಡಲಾಗುವುದು ಎಂದು ಶಾಸಕ ಆಶೋಕ್ ಕುಮಾರ್ ರೈ ಅವರು ಎಚ್ಚರಿಕೆ ನೀಡಿದ್ದಾರೆ.


ಮಾ.4ರಂದು ಸಂಜೆ ತಾ.ಪಂ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಪಂಚಾಯಿತಿಗಳ ಪಿಡಿಒಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಅಽಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎಲ್ಲೂ ಬರಬಾರದು ಎಂದು ಶಾಸಕರು ಸೂಚಿಸಿದರು.ಸಭೆಯಲ್ಲಿ ಅಧಿಕಾರಿಗಳಿದ್ದಾರೆ, ಗುತ್ತಿಗೆದಾರರಿದ್ದಾರೆ. ನಿಮ್ಮ ತೊಂದರೆಗಳನ್ನು ಹೇಳಬೇಕು.ಈ ಕುರಿತು ಜಿಲ್ಲಾಧಿಕಾರಿಯವರಲ್ಲಿ, ಜಿ.ಪಂ ಸಿ.ಇಒ ಅವರಲ್ಲೂ ಚರ್ಚಿಸಿದ್ದೇನೆ.ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯೂ ಚರ್ಚಿಸಿದ್ದೇನೆ,ಅವರೇ ಹೇಳಿದಂತೆ ಟಾಸ್ಕ್- ಫೋರ್ಸ್ ಸಮಿತಿಯಲ್ಲಿ ನಿರ್ಣಯ ಮಾಡಿ ನಮಗೆ ಪ್ರಸ್ತಾವನೆ ಕಳುಹಿಸಿ,ಅದಕ್ಕೆ ಅನುದಾನ ಬೇಕಾದರೆ ಈಗಲೇ ಮಂಜೂರು ಮಾಡುವ ಕುರಿತು ತಿಳಿಸಿದ್ದಾರೆ.ಈ ನಿಟ್ಟಿನಲ್ಲಿ ನಾನು ಸಭೆ ಕರೆದಿದ್ದೇನೆ.ಇವತ್ತು ಫೈನಲ್ ಮೀಟಿಂಗ್ ಸಮಸ್ಯೆ ಇದ್ದರೆ ಈಗಲೇ ಹೇಳಬೇಕು ಎಂದು ಶಾಸಕರು ಹೇಳಿದರು.


16 ಹೊಸ ಕೊಳವೆಬಾವಿ ಕೊರೆಯಲು ಶಿಫಾರಸ್ಸು:
ಪುತ್ತೂರು ವಿಧಾನಸಭಾ ಕ್ಷೇತ್ರದ 16 ಕಡೆ ಹೊಸ ಕೊಳವೆ ಬಾವಿ ಕೊರೆಯಲು ಸಭೆಯಲ್ಲಿ ಶಿಫಾರಸ್ಸು ಮಾಡಿ ನಿರ್ಣಯ ಕೈಗೊಳ್ಳಲಾಯಿತು.ಹಿರೇಬಂಡಾಡಿ ಮತ್ತು ಆರ್ಯಾಪು ಗ್ರಾಮ ಪಂಚಾಯಿತಿಗೆ ತಲಾ 3 ಬೋರ್‌ವೆಲ್, ಅರಿಯಡ್ಕ ಗ್ರಾಮ ಪಂಚಾಯಿತಿಯ ಮಾಣಿಯಡ್ಕ ಪ್ರದೇಶಕ್ಕೆ 1, ಕೋಡಿಂಬಾಡಿಯ ಕೊಡಿಮರದಲ್ಲಿ 1, ಕೆಯ್ಯೂರು ಪಂಚಾಯಿತಿಯ ಬೊಳಿಕ್ಕಲದಲ್ಲಿ 2, ಬನ್ನೂರು ಪಂಚಾಯಿತಿಗೆ 1, ಒಳಮೊಗ್ರು ಪಂಚಾಯಿತಿಗೆ 3 ಮಾಣಿಲ, ವಿಟ್ಲಮುಡ್ನೂರುಗಳಲ್ಲಿ ತಲಾ 1 ಬೋರ್ ಕೊರೆಯುವ ಅವಶ್ಯಕತೆ ಬಗ್ಗೆ ಆಯಾ ಪಿಡಿಒಗಳು ಬೇಡಿಕೆ ಮುಂದಿಟ್ಟರು. ಅದರಂತೆ ಜಿಲ್ಲಾಧಿಕಾರಿಯವರಿಗೆ ಬರೆಯಲು ನಿರ್ಣಯ ಅಂಗೀಕರಿಸಲಾಯಿತು.


ಕೊಯಿಲತಡ್ಕದಲ್ಲಿ ಹೊಸ ಕೊಳವೆಬಾವಿ:
ಒಳಮೊಗ್ರು ಗ್ರಾ.ಪಂಗೆ 3 ಬೋರ್‌ವೆಲ್ ಬೇಕೆಂದು ಪಿಡಿಒ ಪ್ರಸ್ತಾಪಿಸಿದರು.ಅಲ್ಲಿನ ಕೊಯಿಲತ್ತಡ್ಕ ಪ್ರದೇಶದ ಬೋರ್‌ವೆಲ್ ಬತ್ತಿ ಹೋಗಿ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಜನ ದೂರುತ್ತಿದ್ದಾರೆ ಎಂದು ಶಾಸಕರು ಹೇಳಿದರು.ಪರ್ಪುಂಜದ ಬೋರ್‌ವೆಲ್‌ನಿಂದ ಈಗ 3 ದಿನಕ್ಕೊಮ್ಮೆ ಕೊಯಿಲತ್ತಡ್ಕ ಭಾಗಕ್ಕೆ ನೀರು ಹರಿಸುತ್ತಿದ್ದೇವೆ ಎಂದು ಪಿಡಿಒ ಮತ್ತು ಪಂಪ್ ಆಪರೇಟರ್ ಉತ್ತರಿಸಿದರು. ಬೋರ್‌ವೆಲ್ ಬತ್ತಿ ಹೋಗಿ ವರ್ಷ ಕಳೆದಿದೆ.ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ? ನೀವು ಪಂಪ್ ಆಪರೇಟರ್ ಮಾತು ಕೇಳಿ ಸುಮ್ಮನಿದ್ದೀರಾ ಎಂದು ಶಾಸಕರು ಪಿಡಿಒ ಅವರನ್ನು ತರಾಟೆಗೆತ್ತಿಕೊಂಡರಲ್ಲದೆ, ಟ್ಯಾಂಕರ್ ಮೂಲಕ ನೀರು ಕೊಡಬಹುದಲ್ವಾ ಎಂದು ಹೇಳಿ,ಶನಿವಾರದ ಒಳಗೆ ಕೊಯಿಲತಡ್ಕದಲ್ಲಿ ಹೊಸ ಬೋರ್‌ವೆಲ್ ಕೊರೆಯಬೇಕು.ಗ್ರಾಪಂನಲ್ಲಿ ಹಣ ಇಲ್ಲದಿದ್ದರೆ ಹೇಳಿ, ಶಾಸಕರ ನಿಧಿಯಿಂದ ಕೊಡುತ್ತೇನೆ ಎಂದು ಹೇಳಿದರು.ಅಲ್ಲಿ ಜೆಜೆಎಂ ಯೋಜನೆಯ ಕೊಳವೆ ಬಾವಿ ಇಲ್ಲವೇ ಎಂದು ಕೇಳಿದಾಗ, ಈಗ ಪರ್ಪುಂಜದಲ್ಲಿರುವ ಜೆಜೆಎಂ ಕೊಳವೆ ಬಾವಿಯಿಂದಲೇ ಕೊಯಿಲತ್ತಡ್ಕಕ್ಕೆ ನೀರು ನೀಡಲಾಗುತ್ತಿದೆ ಎಂದು ಇಲಾಖೆ ಅಽಕಾರಿಗಳು ಉತ್ತರಿಸಿದರು.


ಜೆಜೆಎಮ್ ಸಮಸ್ಯೆಗಳನ್ನು ಸರಿಪಡಿಸಿಯೇ ಹಸ್ತಾಂತರಿಸಿ:
ಜಲಜೀವನ್ ಮಿಶನ್ ಯೋಜನೆಯ ಅಡಿಯಲ್ಲಿ 2ನೇ ಹಂತದ 32 ಕಾಮಗಾರಿಗಳ ಪೈಕಿ 25 ಪೂರ್ಣಗೊಂಡಿದೆ. 7 ಕಾಮಗಾರಿ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅನೇಕ ಕಡೆ ಸ್ಥಳೀಯ ಪಂಚಾಯಿತಿ ಬೋರ್‌ವೆಲ್ ಸುಸ್ಥಿತಿಯಲ್ಲಿದ್ದಲ್ಲಿ ಅದನ್ನೇ ಜೆಜೆಎಂ ಯೋಜನೆಗೆ ಬಳಸಿಕೊಳ್ಳಲಾಗಿದೆ. ಇಲ್ಲದ ಕಡೆ ಹೊಸ ಬೋರ್‌ವೆಲ್ ಕೊರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ರೂಪ್ಲಾ ನಾಯಕ್ ಪ್ರಸ್ತಾಪಿಸಿದರು.ಜೆಜೆಂ ಯೋಜನೆಯ ಕೆಲ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ದೂರುಗಳಿವೆ. ಕೊಳವೆಬಾವಿಗಳು ಬತ್ತಿ ಹೋಗಿರುವ ದೂರುಗಳೂ ಬಂದಿವೆ. ಇದನ್ನೆಲ್ಲ ಸರಿ ಮಾಡಿಯೇ ಪಂಚಾಯಿತಿಗೆ ಹಸ್ತಾಂತರಿಸಬೇಕು.ಜೆಜೆಎಂ ಸೇರಿದಂತೆ ಯಾವುದೇ ನೀರು ಪೂರೈಕೆ ಕಾಮಗಾರಿ ಕಳಪೆ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.ನರಿಮೊಗರು ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆ, ಕೆದಂಬಾಡಿಯ ಸನ್ಯಾಸಿಗುಡ್ಡೆಯಲ್ಲಿ ಹೊಸ ಟಿಸಿ ಅಳವಡಿಕೆ, ಕೊಡಿಪ್ಪಾಡಿಯ ಕೊಳವೆಬಾವಿ ಮರುಪೂರಣ ಕುರಿತು ಪ್ರಸ್ತಾಪಿಸಲಾಯಿತು. ತಹಸೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ಹನುಮಂತಪ್ಪ ವೆಂಕಟಪ್ಪ ಇಬ್ರಾಹಿಂಪುರ್, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಮಾ.31ರಿಂದ ಮನೆ ಮನೆ ನೀರು ಸಂಪರ್ಕ ಆಗಬೇಕು
ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಯೋಜನೆ ರೂ.113 ಕೋಟಿ ಅನುಷ್ಠಾನಗೊಳ್ಳುತ್ತಿದ್ದು, ಮಾರ್ಚ್ 31ಕ್ಕೆ ಅನುಷ್ಠಾನ ಸಮಿತಿಗೆ ಅಂತಿಮ ದಿನಾಂಕ ನೀಡಲಾಗಿದೆ.
ಅವರಿಗೆ ರೂ.71 ಕೋಟಿ ಈಗ ರಿಲೀಸ್ ಮಾಡಲಾಗಿದೆ.ಇನ್ನು ರೂ.41 ಕೋಟಿ ಮುಂದಿನ 8 ವರ್ಷದಲ್ಲಿ ಅದರ ನಿರ್ವಹಣೆಯಲ್ಲಿ ಜವಾಬ್ದಾರಿಯಲ್ಲಿರುತ್ತದೆ. ಪ್ರತಿ ಮನೆಗೂ ನೀರು ಕೊಡುವ ಜವಾಬ್ದಾರಿ ಅವರದ್ದು, ಮುಂದೆ ಅವರೇ ನೀರಿನ ಕರ ವಸೂಲಿ ಮಾಡುತ್ತಾರೆ.ಉಪ್ಪಿನಂಗಡಿ ಡ್ಯಾಮ್‌ನಲ್ಲೂ ನೀರಿನ ಸಮಸ್ಯೆ ಇಲ್ಲ. ನೀರಿನ ಕೊರತೆ ನಗರದಲ್ಲಿ ಎಲ್ಲಿಯೂ ಆಗದಂತೆ ನೋಡಬೇಕೆಂದು ಶಾಸಕರು ಸೂಚಿಸಿದರು.

LEAVE A REPLY

Please enter your comment!
Please enter your name here