ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ- ಪ್ರಮುಖ ಆರೋಪಿಯ ಸಹಿತ ಕೇರಳ ಮೂಲದ ಮೂವರು ಪೊಲೀಸ್ ವಶಕ್ಕೆ?

0

ವಿಟ್ಲ: ಅಡ್ಯನಡ್ಕದಲ್ಲಿ ನಡೆದ ಕರ್ಣಾಟಕ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಆರೋಪಿಗಳ ಬಗೆಗಿನ ಕೆಲವೊಂದು ಮಹತ್ತರವಾದ ಮಾಹಿತಿಯನ್ನು ಕಲೆ ಹಾಕಿ ಪ್ರಕರಣದ ಪ್ರಮುಖ ಸೂತ್ರದಾರನ ಸಹಿತ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಪೊಲೀಸ್ ವಶಕ್ಕೆ ತೆಗೆದುಕೊಂಡ ಆರೋಪಿಗಳೆಂದು ತಿಳಿದು ಬಂದಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕಿನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ಫೆ.8ರಂದು ಬೆಳಗ್ಗೆ ಬೆಳಕಿಗೆ ಬಂದಿತ್ತು.

ಕಳವು ಕೃತ್ಯದಲ್ಲಿ ಭಾಗಿಯಾದವರೆಲ್ಲರೂ ಕೇರಳ ಮೂಲದವರಾಗಿದ್ದು, ಕಳವು ನಡೆಸಿದ ಬಳಿಕ ಕೇರಳಕ್ಕೆ ಪಲಾಯನ ನಡೆಸಿದ ತಂಡ ಅಲ್ಲಿಂದ ಎಲ್ಲರೂ ಬೇರ್ಪಟ್ಟು ಬೇರೆ ಬೇರೆ ಕಡೆಗಳಿಗೆ ತೆರಳಿದ್ದರೆನ್ನಲಾಗಿದೆ.

ಬ್ಯಾಂಕ್ ನ ಹಿಂಭಾಗ ಪೊದೆಗಳಿಂದ ಆವೃತವಾಗಿದ್ದು, ಈ ದಾರಿಯಾಗಿ ಬಂದ ಕಳ್ಳರು ಬ್ಯಾಂಕ್ ನ ಹಿಂಭಾಗದ ಕಿಟಕಿಯ 8 ಸರಳುಗಳನ್ನು ಕಬ್ಬಿಣ ತುಂಡರಿಸುವ ಗರಗಸ ಬಳಸಿ ತುಂಡರಿಸಿ ಬಳಿಕ ಒಳಗೆ ನುಸುಳಿದ್ದರು. ಬಳಿಕ ಕಪಾಟಿನಲ್ಲಿರಿಸಲಾಗಿದ್ದ ನಗದನ್ನು ದೋಚಿದ್ದಾರೆ. ಗ್ರಾಹಕರ ವೈಯಕ್ತಿಕ ಲಾಕರ್ ಗಳ ಪೈಕಿ ನಾಲ್ಕನ್ನು ತೆರೆಯುವಲ್ಲಿ ತಂಡ ಯಶಸ್ವಿಯಾಗಿದೆ. ಉಳಿದಂತೆ ಅಡವಿರಿಸಿದ ಚಿನ್ನಾಭರಣವಿದ್ದ ಸೇಫ್ ಲಾಕರ್ ನ ಬಾಗಿಲನ್ನು ಗ್ಯಾಸ್ ಕಟ್ಟರು ಬಳಸಿ ತುಂಡರಿಸುವ ಪ್ರಯತ್ನ ನಡೆದಿದೆಯಾದರೂ ಅದು ವಿಫಲವಾಗಿತ್ತು.
ವೈಯ್ಯಕ್ತಿಕ ಸೇಫ್ ಲಾಕರ್ ಪೈಕಿ ನಾಲ್ಕನ್ನು ತೆರೆಯಲಾಗಿತ್ತಾದರೂ ಈ ಪೈಕಿ ಎರಡರಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ವೇಳೆ ಆರೋಪಿಗಳ ಸುಳಿವು ಲಭಿಸಿದ್ದು, ಈ ನಿಟ್ಟಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಇನ್ನಷ್ಟೆ ಬಹಿರಂಗಪಡಿಸಬೇಕಾಗಿದೆ.

LEAVE A REPLY

Please enter your comment!
Please enter your name here