ಪುತ್ತೂರು: ಇಲ್ಲಿನ ಸುದಾನ ವಸತಿಶಾಲೆಯಲ್ಲಿ ಮಾ.22 ರಂದು ಟಿಂಕರ್ ಸ್ಪೇಸ್ ವೈಜ್ಞಾನಿಕ ಮಾದರಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸುದಾನ ವಸತಿ ಶಾಲೆಯಲ್ಲಿ ಟಿಂಕರ್ ಸ್ಪೇಸ್ ಪ್ರಯೋಗಾಲಯವಿದ್ದು ವಿದ್ಯಾರ್ಥಿಗಳು ತಾವೇ ನಿರ್ಮಿಸಿದ ವಿಜ್ಞಾನ ಮಾದರಿಗಳನ್ನು ಕಾರ್ಯಕ್ರಮದಲ್ಲಿ ಪರಿಚಯಿಸಿದರು.

6,7,8 ಮತ್ತು 9ನೇ ತರಗತಿಯ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು, ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ತಂತ್ರಜ್ಞಾನದ ಮೂಲಕ ದೀಪವನ್ನು ಬೆಳಗಿ ಉದ್ಘಾಟಿಸಿ ವಿದ್ಯಾರ್ಥಿಗಳು ವಿಜ್ಞಾನದ ಬಗೆಗಿನ ಆಸಕ್ತಿ ಮತ್ತು ಅರಿವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಟಿಂಕರ್ ಸ್ಪೇಸ್ನ ಸಂಯೋಜಕರಾದ ಅಭಿಲಾಷ್, ಟೆಕ್ನಿಕಲ್ ತರಬೇತುದಾರ ರೋಹಿತ್, ಟೀಂ ನಾಯಕ ವಿನಯ್ ಉಪಸ್ಥಿತರಿದ್ದರು. ಒಟ್ಟು 38 ವೈಜ್ಞಾನಿಕ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದು, ಎಲ್ಲವೂ ಸೆನ್ಸಾರ್ ತಂತ್ರಜ್ಞಾನದ ಮೂಲಕ ಕಾರ್ಯಚರಿಸುವಂತೆ ನಿರ್ಮಾಣಗೊಂಡಿತ್ತು. ಸಮಾಜಕ್ಕೆ ಉಪಯೋಗವಾಗಬಲ್ಲ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ ವಿದ್ಯಾರ್ಥಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವನಿ ವಿಜ್ಞಾನ ಸಂಘದ ಸಂಯೋಜಕಿ ಪ್ರತಿಮಾ ಮತ್ತು ವಿಜ್ಞಾನ ಶಿಕ್ಷಕಿಯರು ಸಹಕರಿಸಿದರು. ವಿಜ್ಞಾನ ಸಂಘದ ಪ್ರತಿನಿಧಿ ಜೆನ್ನಿ (9ನೇ) ಕಾರ್ಯಕ್ರಮವನ್ನು ನಿರೂಪಿಸಿದರು.