ಪುತ್ತೂರು: ಹಲವು ಕಾರಣಿಕತೆಗಳನ್ನು ಒಳಗೊಂಡಿರುವ ಭಕ್ತಿಯಿಂದ ಕೈಮುಗಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕೆಯ್ಯೂರು ಗ್ರಾಮದ ತೆಗ್ಗುವಿನಲ್ಲಿ ನೆಲೆಯಾಗಿರುವ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ಮಾ.30 ರಂದು ತೆಗ್ಗು ಶಾಲಾ ಬಳಿ ವೈಭವದಿಂದ ನಡೆಯಿತು. ಸುಮಾರು 300 ವರ್ಷಗಳ ದೀರ್ಘ ಇತಿಹಾಸವಿರುವ ತೆಗ್ಗು ಒತ್ತೆಕೋಲಕ್ಕೆ ಊರಪರವೂರ ನೂರಾರು ಮಂದಿ ಭಕ್ತರು ಆಗಮಿಸಿ ಶ್ರೀ ದೈವದ ಗಂಧಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು.
ಮಾ.30 ರಂದು ಬೆಳಿಗ್ಗೆ ಗಣಪತಿ ಹೋಮ ನಡೆದು ಪ್ರಸಾದ ವಿತರಣೆ ನಡೆಯಿತು. ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 11 ರಿಂದ ಕುಳಿಚ್ಚಾಟು ದೈವದ ನರ್ತನ ಸೇವೆ ನಡೆಯಿತು. ಮಾ.31 ರ ಪ್ರಾತಃಕಾಲಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆ ಬಳಿಕ ಶ್ರೀ ಗುಳಿಗ ದೈವ ಕೋಲ ನಡೆಯಿತು. ಭಕ್ತಾಧಿಗಳನ್ನು ಬಾಬು ಮಾಸ್ತರ್ ತೆಗ್ಗು ಮತ್ತು ಕುಟುಂಬಸ್ಥರು ಮತ್ತು ಊರಪರವೂರ ಹತ್ತು ಸಮಸ್ತರು ಬರಮಾಡಿಕೊಂಡು ಪ್ರಸಾದ ನೀಡಿ ಸತ್ಕರಿಸಿದರು.
ತುಳು ನಾಟಕ, ನೃತ್ಯ ವೈಭವನ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.30 ರಂದು ಸಂಜೆ ಊರಪರವೂರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿದುಷಿ ರಶ್ಮಿ ದಿಲೀಪ್ ರೈ, ಬೃಂದಾವನ ನಾಟ್ಯಾಲಯ ಕುಂಬ್ರ ಇದರ ಶಿಷ್ಯವೃಂದದವರಿಂದ ನೃತ್ಯ ಕಾರ್ಯಕ್ರಮ ಹಾಗೆ ರಾತ್ರಿ ರಾಜ್ಯಪ್ರಶಸ್ತಿ ಪುರಸ್ಕೃತ ನೃತ್ಯತಂಡ ಮಂಜು ಬ್ರದರ್ಸ್ ಸುಳ್ಯ ಇವರಿಂದ ನೃತ್ಯ ಕಾರ್ಯಕ್ರಮ ಮನರಂಜಿಸಿತು. ಮಧ್ಯರಾತ್ರಿ ವೇಳೆ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ` ಮುರಳಿ ಈ ಪಿರ ಬರೊಲಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ನೂರಾರು ಭಕ್ತರು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಖುಷಿಪಟ್ಟರು.