ಪುತ್ತೂರು:ದರ್ಬೆಯಲ್ಲಿರುವ ಪ್ರತಿಷ್ಠಿತ ಗೃಹೋಪಯೋಗಿ ವಸ್ತುಗಳ ಮಳಿಗೆಗೆ ಸೇರಿದ ಗೋದಾಮಿನಲ್ಲಿ ಏ.2ರಂದು ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.ಬೆಂಕಿಯ ಜ್ವಾಲೆಗೆ ಗೋದಾಮಿನ ಒಳಗಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರೋನಿಕ್ಸ್ ಸೊತ್ತುಗಳು ನಾಶವಾಗಿದೆ.
ಸಚಿನ್ ಟ್ರೇಡಿಂಗ್ ಸೆಂಟರ್‌ನ ಆವರಣದೊಳಗೆ ಇರುವ ಹರ್ಷ ಗೋದಾಮಿನಲ್ಲಿ ಫ್ರಿಡ್ಜ್, ವಾಷಿಂಗ್‌ಮೆಷಿನ್, ಹವಾನಿಯಂತ್ರಕ ಉಪಕರಣ, ವಾಟರ್‌ಕೂಲರ್‌ನ್ನು ದಾಸ್ತಾನು ಮಾಡಲಾಗಿತ್ತು. ಏ.2ರಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಗೋದಾಮಿನ ಒಳಗಡೆಯಿಂದ ಬೆಂಕಿ ಕಾಣಿಸಿಕೊಂಡ ತಕ್ಷಣ ಸಚಿನ್ ಸಂಸ್ಥೆಯಿಂದ ಅಗ್ನಿಶಾಮಕದಳಕ್ಕೆ ಕರೆ ಮಾಡಲಾಗಿತ್ತು.ತಕ್ಷಣ ಪುತ್ತೂರು ಅಗ್ನಿ ಶಾಮಕದಳದವರು ಬಂದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು.ಆದರೆ ಕೆಲ ಹೊತ್ತಿನಲ್ಲೇ ಬೆಂಕಿಯ ಜ್ವಾಲೆ ಮತ್ತಷ್ಟು ಮೇಲೇರಿತಲ್ಲದೆ ಒಳಗಿನಿಂದ ಫ್ರಿಡ್ಜ್‌ನ ಗ್ಯಾಸ್ ಸಿಲಿಂಡರ್ ಒಡೆದು ಬೆಂಕಿಯ ಜ್ವಾಲೆ ಮತ್ತಷ್ಟು ಮೇಲೇರಿತು. ಈ ನಡುವೆ ಬಂಟ್ವಾಳ ಮತ್ತು ಸುಳ್ಯದಿಂದಲೂ ಅಗ್ನಿ ಶಾಮಕದಳದ ಜಲವಾಹನ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿತು.ಸುಮಾರು ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ಶಮನಗೊಳಿಸಲಾಯಿತು.ಘಟನೆಯಿಂದ ಸುಮಾರು ರೂ.೨ ಕೋಟಿಯಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.ಅದೇ ರೀತಿ ಬೆಂಕಿಯಿಂದಾಗಿ ಗೋದಾಮು ಕಟ್ಟಡಕ್ಕೂ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.ಒಟ್ಟು ಘಟನೆಯ ಕುರಿತು ಪೊಲೀಸರು ಮಹಜರು ಮಾಡಿದ ಬಳಿಕವಷ್ಟೆ ಪೂರ್ಣ ಮಾಹಿತಿ ಲಭಿಸಬೇಕಾಗಿದೆ.ದುರ್ಘಟನೆ ಬಗ್ಗೆ ಸಂಸ್ಥೆಯ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.ಘಟನೆಯ ಕುರಿತು ಮಾಹಿತಿ ಪಡೆಯಲೆಂದು ಸಚಿನ್ ಟ್ರೇಡಿಂಗ್ ಸೆಂಟರ್ ಮಾಲಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರ ಫೋನ್ ಸಂಪರ್ಕ ಸಾಧ್ಯವಾಗಿಲ್ಲ.ಅವರ ಪುತ್ರನನ್ನು ಸಂಪರ್ಕಿಸಿದಾಗ‘ತಾನು ಬಾಂಬೆಯಲ್ಲಿ ಮೀಟಿಂಗ್‌ನಲ್ಲಿರುವುದಾಗಿ’ ತಿಳಿಸಿದ್ದಾರೆ.ಹರ್ಷ ಶೋರೂಮ್‌ನ ಮಾಲಕರೂ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ವಿದ್ಯುತ್ ಶಾರ್ಟ್‌ಸರ್ಕ್ಯೂಟ್ !:
ವಿದ್ಯುತ್ ಶಾರ್ಟ್‌ಸಕ್ಯೂರ್ಟ್‌ನಿಂದ ಬೆಂಕಿ ಅವಘಡ ಆಗಿರಬಹುದೆಂದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಮೆಸ್ಕಾಂ ಇಲಾಖೆಯಿಂದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಇಲ್ಲಿ ಈಗಲೇ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ.ವಿದ್ಯುತ್ ಅವಘಡವಾದ ಸಂಸ್ಥೆಯಿಂದ ಮೆಸ್ಕಾಂಗೆ ಮನವಿ ನೀಡಬೇಕು.ಬಳಿಕ ಮಂಗಳೂರುನಿಂದ ವಿದ್ಯುತ್ ಪರಿವೀಕ್ಷಕರು ಆಗಮಿಸಿ ಘಟನೆಯ ಸ್ಥೂಲ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದು ಮೆಸ್ಕಾಂ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಅಗ್ನಿಶಾಮಕದಿಂದ ಮುನ್ನೆಚ್ಚರಿಕೆ ಕ್ರಮ:
ಗೋದಾಮಿನ ಒಳಗಿನಿಂದ ಬೆಂಕಿಯ ಜ್ವಾಲೆ ಸಿಮೆಂಟ್ ಶೀಟ್ ಮೂಲಕ ಹೊರಗೆ ಬರತೊಡಗಿದಾಗ ಎದುರಿನ ರೋಲಿಂಗ್ ಶೆಟರ್‌ಗೆ ಹಗ್ಗ ಕಟ್ಟಿ ತೆರವು ಮಾಡಲಾಯಿತು.ಪಕ್ಕದಲ್ಲೇ ಹೊಟೇಲ್ ಮತ್ತು ಫರ್ನಿಚರ್ ಶೋ ರೂಮ್ ಇರುವ ಹಿನ್ನೆಲೆಯಲ್ಲಿ ಬೆಂಕಿ ಅಲ್ಲಿಗೂ ಹರಡದಂತೆ ಒಂದು ಭಾಗದ ಗೋದಾಮಿನ ಬೆಂಕಿಯನ್ನು ಪೂರ್ಣಹತೋಟಿಗೆ ತಂದ ಬಳಿಕ ಗೋದಾಮಿನ ಮತ್ತೊಂದು ಭಾಗದ ರೋಲಿಂಗ್ ಶೆಟರ್‌ನ್ನು ತೆರವು ಮಾಡಿ ಬೆಂಕಿಯನ್ನು ಶಮನಗೊಳಿಸಲಾಯಿತು.ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಉರಿದ ಎಲೆಕ್ಟ್ರೋನಿಕ್ಸ್ ಸಾಮಾಗ್ರಿಗಳು ಪೂರ್ಣ ಸುಟ್ಟು ಹೋಗಿವೆ.ಅಗ್ನಿ ಶಾಮಕದಳದ ಪ್ರಾದೇಶಿಕ ಅಧಿಕಾರಿ ರಂಗನಾಥ್, ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ ಭರತ್ ಕುಮಾರ್, ಪುತ್ತೂರು ಅಗ್ನಿ ಶಾಮಕದಳ, ಸುಳ್ಯ ಮತ್ತು ಬಂಟ್ವಾಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಂಕಿಯ ಶಮನಗೊಳಿಸುವಲ್ಲಿ ಕಾರ್ಯಾಚರಣೆ ನಡೆಸಿದರು.