ಆದೇಶದ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗಿದೆ : ನ್ಯಾಯವಾದಿ ಪ್ರದೀಪ್ ಕುಮಾರ್
ಕಡಬ: ಚುನಾವಣೆ ಸಂದರ್ಭದಲ್ಲಿ ರೈತರ ಪರವಾನಿಗೆ ಇರುವ ಬಂದೂಕುಗಳನ್ನು ಠೇವಣಿ ಇಡುವುದರ ವಿರುದ್ಧ ಕಾನೂನು ಹೋರಾಟ ನಡೆಸುವ ಸಲುವಾಗಿ ಕೃಷಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಕಾನೂನು ಮಾಹಿತಿ ನೀಡಿದ ನ್ಯಾಯವಾದಿ ಕೊಲ್ಲಮೊಗ್ರದ ಪ್ರದೀಪ್ ಕುಮಾರ್ ಕೆ.ಎಲ್.ಅವರು ಬಂದೂಕುಗಳನ್ನು ಠೇವಣಿ ಇಡುವ ಆದೇಶದ ವಿರುದ್ದ ಕಾನೂನು ಹೋರಾಟ ಅನಿವಾರ್ಯವಾಗಿದೆ. ಈಗಾಗಲೇ ಹಲವಾರು ಮಂದಿ ಕೃಷಿಕರು ವೈಯಕ್ತಿಕವಾಗಿ ಕಾನೂನು ಹೋರಾಟ ನಡೆಸಿ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿ ಪಡೆದಿದ್ದಾರೆ. ಬಂದೂಕು ಠೇವಣಿ ಇಡುವಂತೆ ಕೃಷಿಕರನ್ನು ಬಲವಂತಪಡಿಸಬಾರದು ಎಂದು ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕೇರಳ ರಾಜ್ಯದಲ್ಲಿ ಬಂದೂಕುಗಳನ್ನು ಠೇವಣಿ ಇಡುವ ನಿಯಮವಿಲ್ಲ, ಅದೇ ರೀತಿ ಕರ್ನಾಟಕದಲ್ಲಿಯೂ ಆದೇಶ ಹೊರಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕಾನೂನು ಹೋರಾಟ ಮಾಡಬೇಕಿದೆ. ಆ ರೀತಿ ಆದೇಶವಾದರೆ ಮಾತ್ರ ಕೃಷಿಕರು ಪ್ರತೀ ಚುನಾವಣೆಯ ವೇಳೆಯೂ ಎದುರಿಸುವ ತೊಂದರೆಯಿಂದ ಪಾರಾಗಬಹುದು ಎಂದು ಹೇಳಿದರು. ಸಭೆಯಲ್ಲಿ ರೈತರು ಸೂಕ್ತ ಸಲಹೆ ಸೂಚನೆ ನೀಡಿದರು.
ರೈತ ಮುಖಂಡ ವಿಕ್ಟರ್ ಮಾರ್ಟಿಸ್ ಹೊಸಮಠ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಕುಂತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜೇಮ್ಸ್ ಥಾಮಸ್ ವಿ.ಎಂ., ಸವಣೂರಿನ ನಾಟಿ ವೈದ್ಯ ವಾಸುದೇವ ಇಡ್ಯಾಡಿ, ಪ್ರಮುಖರಾದ ವರ್ಗೀಸ್ ತೋಮಸ್ ಎಂಜಿರ, ಸಂತೋಷ್ ಉಳಿಪು, ಚಂದ್ರಶೇಖರ ಗೌಡ ಕೋಡಿಬೈಲು, ಬಾಲಕೃಷ್ಣ ಭಟ್ ಮೂಜೂರುಕಟ್ಟ, ಶಿವಪ್ರಕಾಶ್ ನೆಲ್ಯಾಡಿ, ರಜಾಕ್ ಅಡ್ಡಗದ್ದೆ, ಉಮ್ಮರ್ ಮುಳಾರ್, ಕರುಣಾಕರ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಹೈಕೋರ್ಟ್ ಮೊರೆ ಹೋಗಲು ನಿರ್ಧಾರ:
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್. ಅವರ ಮೂಲಕ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿ ಪಡೆಯಲು ಮತ್ತು ವಿಚಾರಕ್ಕೆ ಶಾಶ್ವತ ಪರಿಹಾರ ಪಡೆಯಲು ಸಭೆಯಲ್ಲಿ ಭಾಗವಹಿಸಿದ 33 ಮಂದಿ ಕೃಷಿಕರು ವೈಯಕ್ತಿಕ ನೆಲೆಯಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿ ಅಗತ್ಯ ದಾಖಲೆಗಳನ್ನು ನ್ಯಾಯವಾದಿಗೆ ಹಸ್ತಾಂತರಿಸಿ ವಕಾಲತಿಗೆ ಸಹಿ ಹಾಕಿದರು. ಅರ್ಜಿಯು ಹೈಕೋರ್ಟ್ನಲ್ಲಿ ಶೀಘ್ರ ವಿಚಾರಣೆಗೆ ಬರುವ ರೀತಿಯಲ್ಲಿ ಪ್ರಯತ್ನಿಸುವುದಾಗಿ ಪ್ರದೀಪ್ ಕುಮಾರ್ ಭರವಸೆ ನೀಡಿದರು.