ಪುತ್ತೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೊಯಮುತ್ತೂರು ಬಿಜೆಪಿ ಅಭ್ಯರ್ಥಿಯಾಗಿರುವ ಅಣ್ಣಾಮಲೈ ಅವರು ಎ.23ಕ್ಕೆ ಪುತ್ತೂರಿಗೆ ಆಗಮಿಸಲಿದ್ದು, ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಣ್ಣಾಮಲೈ ಅವರು ಎ.23ಕ್ಕೆ ಬೆಳಿಗ್ಗೆ ಗಂಟೆ 8.30ಕ್ಕೆ ರೋಡ್ ಶೋ ಕಾರ್ಯಕ್ರಮ ಮುಗಿಸಿ, ಬೆಳಿಗ್ಗೆ 10.30ಕ್ಕೆ ಪುತ್ತೂರು ದರ್ಬೆ ವೃತ್ತದಿಂದ ಬಸ್ ನಿಲ್ದಾಣದ ತನಕ ರೋಡ್ ಶೋ ನಡೆಸಲಿದ್ದಾರೆ. ಪುತ್ತೂರು ಬಸ್ನಿಲ್ದಾಣದ ಬಳಿ ಅವರು ಚುನಾವಣಾ ಮತಯಾಚನೆ ಮತ್ತು ಭಾಷಣ ಮಾಡಲಿದ್ದಾರೆ. ಪುತ್ತೂರಿನ ಎಲ್ಲಾ 221 ಬೂತ್ಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸುಮಾರು ಮಧ್ಯಾಹ್ನ ಗಂಟೆ 12.30ರ ತನಕ ಈ ಕಾರ್ಯಕ್ರಮ ನಡೆಯಲಿದೆ. ಬಳಿಕ ಅವರು ಫರಂಗಿಪೇಟೆಗೆ ತೆರಳಲಿದ್ದಾರೆ ಎಂದವರು ಹೇಳಿದರು.
ಒಂದೇ ದಿನ ಮೂರು ಕಾರ್ಯಕ್ರಮ:
ಎ.23ಕ್ಕೆ ಬೆಳಿಗ್ಗೆ ಅಣ್ಣಾಮಲೈ ಅವರ ರೋಡ್ ಶೋ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಗಂಟೆ 3.30ಕ್ಕೆ ಉಪ್ಪಿನಂಗಡಿಯಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರ ಉಪಸ್ಥಿತಿಯಲ್ಲಿ ರೋಡ್ ಶೋ ನಡೆಯಲಿದೆ. ಸಂಜೆ ಗಂಟೆ 5.30ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಉಪಸ್ಥಿತಿಯಲ್ಲಿ ವಿಟ್ಲದಲ್ಲಿ ರೋಡ್ ಶೋ ನಡೆಯಲಿದೆ. ಪಕ್ಷದ ಎಲ್ಲಾ ಪ್ರಮುಖರು ಮತ್ತು ಅಭ್ಯರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಉಪಾಧ್ಯಕ್ಷ ಜಯರಾಮ ಪೂಜಾರಿ ಉಪಸ್ಥಿತರಿದ್ದರು.
ಎ.21ಕ್ಕೆ ಮನೆ ಮನೆ ಭೇಟಿ ಮಹಾಅಭಿಯಾನ:
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಅಭ್ಯರ್ಥಿಗಳ ಪ್ರವಾಸ ಆಗಿದೆ. ವಿಧಾನಸಭಾ ಪರಿಷತ್ನ ಪ್ರತಾಪ್ಸಿಂಹ ನಾಯಕ್ ಅವರು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು ಮತ್ತು ಸಹಕಾರಿ ಸಂಘದ ನಿರ್ದೇಶಕರೊಂದಿಗೆ 13 ಕಡೆ ಸಭೆ ನಡೆಸಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಎಲ್ಲಾ ಬೂತ್ಗಳಲ್ಲಿ ಈಗಾಗಲೇ ಒಂದು ಬಾರಿ ಎಲ್ಲಾ ಮನೆ ಮನೆ ಭೇಟಿ ನಡೆದಿದೆ. ಎ.21ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ 221 ಬೂತ್ಗಳಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಮನೆ ಮನೆ ಮಹಾ ಅಭಿಯಾನ ನಡೆಯಲಿದೆ.