ಸರಕಾರ ಮಧ್ಯೆ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವಂತೆ ಅರುಣ್ ಶಹಾಪುರ ಆಗ್ರಹ
ಪುತ್ತೂರು: ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಹೊರಪಠ್ಯ (ಔಟ್ ಆಫ್ ಸಿಲಬೆಸ್) ಪ್ರಶ್ನೆಗಳೇ ಹೆಚ್ಚಾಗಿ ವಿದ್ಯಾರ್ಥಿಗಳು,ಪೋಷಕರು ಆತಂಕಗೊಳಗಾಗಿದ್ದಾರೆ, ಉಪನ್ಯಾಸಕರು ಅಸಹಾಯಕರಾಗಿದ್ದಾರೆ, ಶೈಕ್ಷಣಿಕ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಬೆಳಗಾವಿ ಕ್ಷೇತ್ರದ ಮಾಜಿ ಸದಸ್ಯರಾದ ಅರುಣ್ ಶಹಾಪುರ ಆಗ್ರಹಿಸಿದ್ದಾರೆ.
ಪುತ್ತೂರು ವಿವೇಕಾನಂದ ವಿದ್ಯಾಲಾಯಕ್ಕೆ ಆಗಮಿಸಿದ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಚುನಾವಣೆಯ ಒತ್ತಡದಲ್ಲಿರುವ ಪಕ್ಷಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಸ್ಥಿತಿಯಲ್ಲಿಲ್ಲ. ಸರಕಾರ ಸತ್ತಂತಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಕನಿಷ್ಠ ಪಕ್ಷ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ನಡೆದಿಲ್ಲ. ಮತ್ತೊಂದು ಕಡೆ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಅವರನ್ನು ತಕ್ಷಣ ಆ ಹುದ್ದೆಯಿಂದ ಅಮಾನತು ಮಾಡಬೇಕು. ಈ ದೊಡ್ಡ ಪ್ರಮಾದದ ಹಿಂದಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜ್ಯದ ಉನ್ನತ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ತಯಾರಿಸಿದ ಹೆಚ್ಚುವರಿ ಪ್ರಶ್ನೆ ಪತ್ರಿಕೆಗಳ ಬಳಸಿರುವ ಸಾಧ್ಯತೆ:
ಎನ್ಸಿಇಆರ್ಟಿ ಮತ್ತು ಪಿಯು ಮಂಡಳಿ ನಿಯಮ ಪ್ರಕಾರ ಸಿಇಟಿ ಪರೀಕ್ಷೆ ನಡೆಯಬೇಕು. ಈ ಬಾರಿ 4 ವಿಷಯಗಳಲ್ಲಿ ಕೂಡ ಸುಮಾರು ಶೇ.25ರಷ್ಟು ಸಿಲಬಸ್ನಿಂದ ಹೊರತಾದ ಪ್ರಶ್ನೆಗಳು ಬಂದಿದೆ. ಹಿಂದಿನ ವರ್ಷಗಳಲ್ಲಿ ಪೂರ್ತಿ ಸಿಲಬಸ್ ಅನ್ವಯಗೊಂಡಿದ್ದರೆ, ಈ ಬಾರಿ ಸಿಲಬಸ್ ಕಡಿತಗೊಳಿಸಲಾಗಿತ್ತು. ಆದರೆ ಪ್ರಶ್ನೆಗಳು ಮಾತ್ರ ಪೂರ್ತಿ ಸಿಲಬಸ್ನಿಂದ ಆರಿಸಿಕೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ತಯಾರಿಸಿದ ಉಪನ್ಯಾಸಕರಿಗೆ ಸಿಲಬಸ್ ಕಡಿತಗೊಳಿಸಿರುವುದು ಗೊತ್ತಿದ್ದರೂ, ಸಿಲಬಸ್ನಿಂದ ಹೊರತಾದ ಪ್ರಶ್ನೆಗಳನ್ನು ಅವರು ಬರೆಯಲು ಹೇಗೆ ಸಾಧ್ಯ? ಇದನ್ನು ಗಮನಿಸಿದಾಗ ಕಳೆದ ವರ್ಷದ ಪರೀಕ್ಷೆಯಲ್ಲಿ ತಯಾರಿಸಿದ ಹೆಚ್ಚುವರಿ ಪ್ರಶ್ನಾ ಪತ್ರಿಕೆಗಳನ್ನು ಈ ಬಾರಿ ಬಳಸಲಾಗಿದೆಯ ಎಂಬ ಗುಮಾನಿ ಬರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ., ಉಪ್ಪಿನಂಗಡಿ ಇಂದ್ರಪ್ರಸ್ಥ ಶಿಕ್ಷಣ ಸಂಸ್ಥೆಯ ಸಂಚಾಲಕ ಯು.ಜಿ.ರಾಧಾ, ಪುತ್ತೂರು ನರೇಂದ್ರ ಕಾಲೇಜಿನ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ರಮೇಶ್ ಕೆ. ಉಪಸ್ಥಿತರಿದ್ದರು.