ಪುತ್ತೂರು:ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನೆಹರುನಗರದ ವಿವೇಕಾನಂದ ಕಾಲೇಜಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಏ.20ರಂದು ಕಾಲೇಜಿನ ವಿವೇಕಾನಂದ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ವಿದ್ಯಾರ್ಥಿನಿ ಪ್ರಮುಖ್ ಅಮೃತಾಂಬರವರು, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ರಕ್ಷಣೆ ಇಲ್ಲ.ಹಾಡಹಗಲೇ ಕತ್ತು ಕೊಯ್ದು ಕೊಲೆ ಮಾಡುವುದಾದರೆ ನಮಗೆ ರಕ್ಷಣೆ ಎಲ್ಲಿದೆ.ನಮಗೆ ರಕ್ಷಣೆ ಇಲ್ಲದ ಸರಕಾರವನ್ನು ರಚನೆ ಮಾಡುವುದಾದರೂ ಯಾಕೆ ಎಂದು ಪ್ರಶ್ನಿಸಿದರು.ಪ್ರೀತಿಗಾಗಿ ನೇಹಾಳ ಹತ್ಯೆಯಲ್ಲ.ಅದು ಲವ್ ಜಿಹಾದ್ ಎಂದ ಅವರು,ಈ ಹಿಂದೆ ನಡೆದ ಹಲವು ಹತ್ಯೆಗಳಿಗೂ ನ್ಯಾಯ ದೊರೆತಿಲ್ಲ.ಸರಕಾರ ಹೀನಾಯವಾಗಿ ನಡೆದುಕೊಳ್ಳುತ್ತಿದೆ.ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುತ್ತಿದ್ದರೆ ಇಂತಹ ಕೃತ್ಯಗಳು ಮರುಕಳಿಸುತ್ತಿರಲಿಲ್ಲ.ಇದೇ ಕಾರಣದಿಂದಾಗಿ ಹೆಣ್ಣುಮಕ್ಕಳ ಶವ ಸೂಟ್‌ಕೇಸ್, ಫ್ರಿಡ್ಜ್, ಚರಂಡಿಯಲ್ಲಿ ಪತ್ತೆಯಾಗುತ್ತಿದೆ.ಶಿಕ್ಷೆಯ ಕಠಿಣತೆ ಹೆಚ್ಚಾದಾಗ ಮಾತ್ರ ಇಂಥ ಕೃತ್ಯಗಳಿಗೆ ಕಡಿವಾಣ ಸಾಧ್ಯ ಎಂದರಲ್ಲದೆ, ನೇಹಾ ಹತ್ಯಾ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದರು.
ಮಂಗಳೂರು ವಿಭಾಗ ಸಂಘಟನೆ ಕಾರ್ಯದರ್ಶಿ ಶ್ರೀರಾಮ್ ಮಾತನಾಡಿ, ವಿದ್ಯಾರ್ಥಿನಿ ನೇಹಾಳಿಗೆ ಜೀವನದಲ್ಲಿ ಸಾಕಷ್ಟು ಕನಸು ಇದ್ದಿರಬಹುದು.ಪ್ರೀತಿ ನಿರಾಕರಿಸಿಸಳು ಎಂಬ ಕಾರಣಕ್ಕೆ ಹತ್ಯೆ ನಡೆಸಿದ್ದು ಈ ಕೃತ್ಯವನ್ನು ನಾವೆಲ್ಲರೂ ಖಂಡಿಸಬೇಕು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೋರಾಟಕ್ಕಾಗಿ ಇರುವಂತಹ ಸಂಘಟನೆ.ಯಾವ ಕೇಸಿಗೂ ಹಿಂಜರಿಯುವುದಿಲ್ಲ.ನೇಹಾ ಹತ್ಯೆ ಖಂಡಿಸಿ ಎಬಿವಿಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದರು.ಇದೇ ಘಟನೆ ಖಂಡಿಸಿ ಗೃಹ ಸಚಿವರ ಮನೆ ಮುಂದೆ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಾಗಿದೆ. ಇಂತಹ ಯಾವುದೇ ಕೇಸಿಗೆ ಎಬಿವಿಪಿ ಹೆದರುವುದಿಲ್ಲ.ಹಾಡಹಗಲೇ ಇಂತಹ ಕೃತ್ಯಗಳು ನಡೆಯುವುದಾದರೆ ಕಾನೂನು, ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ಪ್ರತಿಭಟನೆ ನಡೆಸುವುದನ್ನು ಹತ್ತಿಕ್ಕುವುದನ್ನು ಬಿಟ್ಟು ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.ಕಾಲೇಜಿನ ಸಾವಿರಾರು ಮಂದಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಕಾಲೇಜು ಆವರಣದಿಂದ ವಿವೇಕಾನಂದ ಪ್ರತಿಮೆ ತನಕ ಸಾಗಿ ಅಲ್ಲಿ ಪ್ರತಿಭಟನೆ ನಡೆಸಲು ಮುಂದಾದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೊರಗಡೆ ಪ್ರತಿಭಟನೆ ನಡೆಸುವಂತಿಲ್ಲ ಎಂದರು.ನಾವು ವಿದ್ಯಾರ್ಥಿನಿಗೆ ನ್ಯಾಯಕ್ಕಾಗಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿ ಬಳಿಕ ಸಾಂಕೇತಿಕ ಪ್ರತಿಭಟನೆ ನಡೆಯಿತು.