ಕಾರ್ಪಾಡಿಯ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ

0

ಪುತ್ತೂರು:ತುಳುನಾಡಿನ ಪುರಾತನ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿಯಿಲ್ಲಿ ವಿರಾಜಮಾನರಾದ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕವು ಎ.27ರಂದು ನೆರವೇರಿತು.


ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ಇಂದ್ರಾದಿ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿಪೀಠ ಪ್ರತಿಷ್ಠೆ, ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನೆರವೇರಿತು.


501 ಕಲಶ, 86 ಬಗೆಯ ದ್ರವ್ಯಗಳಿಂದ ಅಭಿಷೇಕ:
ಶ್ರೀದೇವರಿಗೆ ನಡೆದ ಬ್ರಹ್ಮಕಲಶೋತ್ಸವದಲ್ಲಿ 501 ಕಲಶಾಭಿಷೇಕ ನೆರವೇರಿತು. ವಿಶೇಷವಾಗಿ 86 ಬಗೆಯ ವಿಶೇಷ ಸುವಸ್ತುಗಳನ್ನು ಒಳಗೊಂಡಿರುವ ದ್ರವ್ಯಗಳಿಂದ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು. ಮಧ್ಯಾಹ್ನ ಸುಬ್ರಹ್ಮಣ್ಯ ದೇವರಿಗೆ ವಿಶೇಷವಾಗಿ ಶ್ರೀಗಂದ ಅಲಂಕಾರ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ಬ್ರಹ್ಮಕಲಶೋತ್ಸವದ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಂಡು ಪುನೀತರಾದರು.


ಬೆಳಿಗ್ಗೆ ದೇಲಂಪಾಡಿ ಮಯ್ಯಾಳ ಶ್ರೀಸತ್ಯನಾರಾಯಣ ಭಜನಾ ಮಂಡಳಿ ಹಾಗೂ ಕೊಂಬೆಟ್ಟು ಮರಾಟಿ ಯುವ ವೇದಿಕ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಯಕ್ಷಶ್ರೀ ಹವ್ಯಾಸಿಬಳಗದವರಿಂದ ಯಕ್ಷಗಾನ ತಾಳಮದ್ದಳೆ ನೆರವೇರಿತು.

LEAVE A REPLY

Please enter your comment!
Please enter your name here