ಮಹಿಳಾ ಪ್ರ.ದ.ಕಾಲೇಜಿನ ಅತಿಥಿ ಉಪನ್ಯಾಸಕಿ ಪೂರ್ಣಿಮಾ ರವಿ ನಿರ್ದೇಶನದ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ

0

ಪುತ್ತೂರು:ಯುವ ಸಂಶೋಧಕಿ, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾಗಿರುವ ಪೂರ್ಣಿಮಾ ರವಿ ನಿರ್ದೇಶಿಸಿರುವ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ ಪ್ರತಿಷ್ಠಿತ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ-2024ರಲ್ಲಿ ವಿಶೇಷ ಪ್ರಮಾಣಪತ್ರ(ಸ್ಪೆಷಲ್ ಫೆಸ್ಟಿವಲ್ ಮೆನ್ಶನ್ ಸರ್ಟಿಫಿಕೇಟ್)ಲಭಿಸಿದೆ.


ಏ.30ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರದ ನಿರ್ದೇಶಕಿ ಪೂರ್ಣಿಮಾ ರವಿ ಹಾಗೂ ಕಾರ್ಯಕಾರಿ ನಿರ್ಮಾಪಕ ರವಿನಾರಾಯಣ ಅವರು ಪ್ರಮಾಣಪತ್ರ ಸ್ವೀಕರಿಸಿದರು. ವಿಶ್ವದ ವಿವಿಧ ದೇಶಗಳ ಸುಮಾರು 700 ಚಲನಚಿತ್ರಗಳು ಪ್ರಶಸ್ತಿಗೆ ನಾಮಕರಣಗೊಂಡಿದ್ದವು.
‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಚಿತ್ರದಲ್ಲಿ ಕರ್ನಾಟಕದ 40ಕ್ಕೂ ಹೆಚ್ಚು ದೇವದಾಸಿಯರ ಜೀವನದ ವ್ಯಥೆ, ಕನಸುಗಳು, ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.ಅರ್ಮೇನಿಯಾದ ಚಿತ್ರ ನಿರ್ದೇಶಕ ರೋಮನ್ ಮುಶೆಗ್ಯಾನ್, ಜಪಾನ್‌ನ ನವೋಕಿ ಮತ್ಸುಮುರಾ, ಸ್ಪೇನ್‌ನ ಫ್ರಾನ್ಸಿಸ್ಕೋ ಸ್ಯಾಂಚೆಜ್ ಪಲಾಝೋನ್, ವೆನೆಜುವೆಲಾದ ಆಲ್ರೆಡೊ ಕಾಲ್ಡೆರಾ, ಚೀನಾದ ರಾನ್ ಲಿ, ಅಮೇರಿಕದ ಜೇಕ್ ಬೈರ್ಡ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಜಿ.ಎಲ್.ಭಾರದ್ವಾಜ್ ತೀರ್ಪುಗಾರರ ತಂಡದಲ್ಲಿದ್ದರು.ಡಿ.ಸಿ.ಸಿಂಗ್ ತಂಡದ ಸಮನ್ವಯಕಾರರಾಗಿದ್ದರು.


ಪೂರ್ಣಿಮಾ ರವಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು,ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಕಾಲೇಜಿನ ಇಂಗ್ಲಿಷ್ ಸಹ ಪ್ರಾಧ್ಯಾಪಕರಾದ ಡಾ|ನಯನಾ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.ಪ್ರಸ್ತುತ ಪುತ್ತೂರಿನಲ್ಲಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಈ ಸಾಕ್ಷ್ಯ ಚಲನಚಿತ್ರಕ್ಕೆ ಪೂರ್ಣಿಮಾ ರವಿ ಅವರೇ ಧ್ವನಿ ಮತ್ತು ಉಪಶೀರ್ಷಿಕೆಗಳ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ.ಚಂದ್ರಶೇಖರ ಹೆಗ್ಡೆ(ಸಂಗೀತ ನಿರ್ದೇಶಕ), ರಕ್ಷಿತ್ ರೈ (ಸಂಕಲನ), ನಿಹಾಲ್ ನೂಜಿಬೈಲ್ (ಡಿಒಪಿ), ಸುನೀತಾ ಪ್ರವೀಣ್ (ಗಾಯಕಿ),ಸ್ವರ್ಣಶ್ರೀ ಪಟ್ಟೆ (ಗೀತೆರಚನೆ), ಪ್ರವೀಣ್ ವರ್ಣಕುಟೀರ(ಸೃಜನಾತ್ಮಕ ಸಲಹೆಗಾರ),ಅಲೋಕ್ ನೂಜಿಬೈಲು (ಸೃಜನಾತ್ಮಕ ಪಾಲುದಾರ) ಮತ್ತು ರವಿನಾರಾಯಣ (ಕಾರ್ಯನಿರ್ವಾಹಕ ನಿರ್ಮಾಪಕ)ಚಿತ್ರ ತಂಡದ ಭಾಗವಾಗಿದ್ದಾರೆ.


ಅಂತರ್ರಾಷ್ಟ್ರೀಯ ಪ್ರಶಸ್ತಿ:
‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರ ಅಮೇರಿಕಾದ ‘ಡಾಕ್ಯುಮೆಂಟರಿ ವಿದೌಟ್ ಬಾರ್ಡರ್ಸ್’ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಎಕ್ಸೆಪ್ಷನಲ್ ಮೆರಿಟ್ ಅವಾರ್ಡ್’ ಪ್ರಶಸ್ತಿಗೂ ಆಯ್ಕೆಯಾಗಿದೆ.ಈ ಪ್ರಶಸ್ತಿಯನ್ನು ಇತ್ತೀಚೆಗೆ ಘೋಷಿಸಲಾಯಿತು.

LEAVE A REPLY

Please enter your comment!
Please enter your name here