ನೆಲ್ಯಾಡಿ: ಮೇಲ್ಸೇತುವೆ ನಿರ್ಮಾಣ ವಿಚಾರ-ಪೊಲೀಸ್, ಹೆದ್ದಾರಿ ಇಲಾಖಾಧಿಕಾರಿಗಳ ಸಭೆ

0

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಸ್ಥಗಿತಗೊಂಡಿರುವ ಮೇಲ್ಸೇತುವೆ ಕಾಮಗಾರಿ ಪುನರಾರಂಭಿಸುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಜೂ.ರಂದು ನೆಲ್ಯಾಡಿ ಶಬರೀಶ ಕಲಾಮಂದಿರದಲ್ಲಿ ನಡೆಯಿತು.


ಸಭೆಗೆ ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ವಿವೇಕಾನಂದ ಮಠಪತಿ ಅವರು, ನೆಲ್ಯಾಡಿ ಪೇಟೆಯಲ್ಲಿ ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ಮನವಿಯಂತೆ ಸಲ್ಲಿಸಿರುವ ಎರಡೂ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ. ಪೆರಿಯಶಾಂತಿಯಿಂದ ಬಿ.ಸಿ.ರೋಡ್ ತನಕದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಕಂಪನಿಯವರು ಈ ವರ್ಷದ ಡಿಸೆಂಬರ್ ತಿಂಗಳ ಒಳಗೆ ಮುಗಿಸಿಕೊಡಬೇಕಾಗಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಇದಕ್ಕೆ ನೆಲ್ಯಾಡಿಯ ವರ್ತಕರು, ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರಾದ ಕೆಎನ್‌ಆರ್ ಸಂಸ್ಥೆ ಹಾಗೂ ನೆಲ್ಯಾಡಿಯ ವರ್ತಕರು, ನಾಗರಿಕರು ಜೊತೆಯಾಗಿ ದ.ಕ. ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಕ್ಯಾ| ಬ್ರಿಜೇಶ್ ಚೌಟರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌ಐ ಅವಿನಾಶ್ ಎಚ್. ಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್, ಕೆಎನ್‌ಆರ್ ಕಂಪನಿಯ ಮಹೇಂದ್ರ ಸಿಂಗ್, ರಘುನಾಥ ರೆಡ್ಡಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಪದಾಧಿಕಾರಿಗಳು, ನೆಲ್ಯಾಡಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು, ವರ್ತಕರು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here