ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರತಿಭಾ ಪುರಸ್ಕಾರ

0

ಉಪ್ಪಿನಂಗಡಿ: ಯಾರಿಗೂ, ಎಲ್ಲಿಯೂ ಉದ್ಯೋಗದ ಕೊರತೆ ಆಗಲಾರದು, ನಮ್ಮಲ್ಲಿ ಕ್ರಿಯಾಶೀಲತೆ, ಪ್ರಾಮಾಣಿಕತೆ ಮತ್ತು ಪ್ರಯತ್ನ ಪಟ್ಟರೆ ಯಾವುದನ್ನೂ ಸಾಧಿಸಲು, ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಜೂ.11ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜು ಪದವಿ ಮುಗಿಯುತ್ತಿದ್ದಂತೆ ಮುಂದೆ ಉದ್ಯೋಗದ ಬಗ್ಗೆ ಚಿಂತಿತರಾಗುತ್ತಾರೆ, ಆದರೆ ನಾವುಗಳು ಮುಂದೆ ಬರಬೇಕು, ಯಾವುದೇ ಕೆಲಸ ಮಾಡುವ ಬಗ್ಗೆ ನಾಚಿಕೆ ಪಡಬಾರದು, ಸಣ್ಣ-ಪುಟ್ಟ ಕೆಲಸವಾದರೂ ಸರಿ ಅದನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಅಲ್ಲಿನ ಸಾಧನೆ ನಮ್ಮ ಕೈ ಹಿಡಿಯುತ್ತದೆ, ಆ ಮೂಲಕ ಮುಂದೆ ಹೋಗುವ ಮೂಲಕ ಯಶಸ್ಶು ಗಳಿಸಬಹುದಾಗಿದೆ ಎಂದ ಅವರು ವಿದ್ಯಾರ್ಥಿಗಳು ನಮ್ಮ ಮಾತೃ ಭಾಷೆ ಕನ್ನಡದ ಜೊತೆಗೆ ಆದಷ್ಟು ಇಂಗ್ಲೀಷ್ ಭಾಷೆ ಕಲಿಯಬೇಕು ಮತ್ತು ಆದಷ್ಟು ಪತ್ರಿಕೆಗಳನ್ನು ಓದಬೇಕು ಈ ಎಲ್ಲಾ ಶ್ರಮಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯತ್ತದೆ ಎಂದರು.

ನಿವೃತ್ತ ಪ್ರಾಚಾರ್ಯ, ಸಾಹಿತಿ ಡಾ. ಪ್ರಭಾಕರ ಶಿಶಿಲ ಮಾತನಾಡಿ ಅಜ್ಞಾನ ಮತ್ತು ಅಸಮಾನತೆಗಳ ವಿರುದ್ಧ ಹೋರಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಬೆಳೆಸಿಕೊಳ್ಳಬೇಕಾಗಿದ್ದು, ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಉನ್ನತವಾದ ಸ್ಥಾನಗಳನ್ನು ಪಡೆಯುವಲ್ಲಿ ಸಫಲರಾಗಬಹುದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ‍್ಯಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ ಹಿಂದೆಲ್ಲಾ ಈ ಕಾಲೇಜಿನಲ್ಲಿ ಸದಾ ಗಲಾಟೆ ನಡೆಯುತ್ತಾ ಜಿಲ್ಲೆಯಲ್ಲೇ ಕಾಲೇಜಿಗೆ ಕೆಟ್ಟ ಹೆಸರು ಇತ್ತು. ಆದರೆ ಇದೀಗ ಬದಲಾದ ವ್ಯವಸ್ಥೆಯಲ್ಲಿ ಕಾಲೇಜು ಪಠ್ಯ, ಕ್ರೀಡೆ, ಸಾಂಸ್ಕೃತಿಕವಾಗಿಯೂ ಮುಂಚೂಣಿಯಲ್ಲಿದ್ದು ಜಿಲ್ಲೆಯಲ್ಲೇ ಹೆಸರಾಂತ ಕಾಲೇಜುಗಳಲ್ಲಿ ಒಂದಾಗಿ ರೂಪುಗೊಂಡಿದೆ. ಈ ಬಗ್ಗೆ ಅತೀವ ಖುಷಿ ಆಗುತ್ತಿದೆ ಎಂದರು.
ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಅತ್ರಮಜಲು, ಕಾಲೇಜಿನ ವಿವಿಧ ಸಮಿತಿಯ ಸಂಚಾಲಕರಾದ ದಶರಥ ಕೆ.ಟಿ., ಹುಚ್ಚೇಗೌಡ ಹೆಚ್., ಪ್ರವೀಣ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಡಾ. ರಾಜಾರಾಮ್, ಎ. ಕೃಷ್ಣ ರಾವ್ ಅರ್ತಿಲ, ಅಶ್ರಫ್ ಬಸ್ತಿಕ್ಕಾರ್, ಇಸ್ಮಾಯಿಲ್ ಇಕ್ಬಾಲ್, ಶಾಂಭವಿ ರೈ, ಸವಿತಾ ಹರೀಶ್, ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ, ಅಭಿನಂದನೆ:
ಸಮಾರಂಭದಲ್ಲಿ 2023-24ನೇ ಸಾಲಿನ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ, ರಾಷ್ಟ್ರಮಟ್ಟದ ಕ್ರೀಡಾಪಟು ರೋಹಿತ್, ಡಾಕ್ಟರೇಟ್ ಪದವಿ ಪಡೆದಿರುವ
ಉಪನ್ಯಾಸಕರಾದ ಹರಿಪ್ರಸಾದ್, ದಿವ್ಯಶ್ರೀ ಇವರನ್ನು ಸನ್ಮಾನಿಸಲಾಯಿತು. ಅದಾಗ್ಯೂ ಕ್ರೀಡೆ ಮತ್ತು ಸಾಂಸ್ಕ್ಗೃತಿಕವಾಗಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹೆಸರು ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ಸ್ವಾಗತಿಸಿ, ಉಪನ್ಯಾಸಕ ರವಿರಾಜ ಎಸ್. ವಂದಿಸಿದರು. ಪ್ರಮೋದ್ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here