ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದಂದು ಜಾತ್ರಾ ಗದ್ದೆಯಲ್ಲಿ ಮಹಿಳೆಯೊಬ್ಬರ ಮಗುವಿನ ಕೈಯಲ್ಲಿದ್ದ ಕರಿಮಣಿ ಮುತ್ತಿನ ಕೈ ಬಳೆಯನ್ನು ಮಹಿಳೆಯೊಬ್ಬರು ಕತ್ತರಿಸಿ ಎಳೆದು ಕಳವು ಮಾಡಿದ್ದ ಪ್ರಕರಣದ 6 ಮಂದಿ ಆರೋಪಿಗಳ ಪೈಕಿ ಬಾಲಾಪರಾಧಿ ಸಹಿತ ನಾಲ್ವರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಾಲಾಪರಾಧಿಗೆ ಬಾಲನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದರ್ಬೆ ಪಾಂಗಳಾಯಿ ನಿವಾಸಿ ಅರವಿಂದ ಎಂಬವರ ಪತ್ನಿ ಪದ್ಮಿನಿ ಸಿ ಅವರು ರಥೋತ್ಸವದಂದು ರಾತ್ರಿ ರಥ ಬೀದಿ ಗದ್ದೆಯಲ್ಲಿ ಹೋಗುತ್ತಿದ್ದ ವೇಳೆ ಅವರು ಎತ್ತಿಕೊಂಡಿದ್ದ ಒಂದು ವರ್ಷ ಪ್ರಾಯದ ಹೆಣ್ಣು ಮಗುವಿನ ಎಡಕೈಯಲ್ಲಿದ್ದ ಕರಿಮಣಿ ಮುತ್ತಿನ ಕೈ ಬಳೆಯನ್ನು ಮಹಿಳೆಯೊಬ್ಬರು ಕತ್ತರಿಸಿ ಎಳೆದುಕೊಂಡಿರುವುದು ಗಮನಕ್ಕೆ ಬಂದು ತಕ್ಷಣ ಆಕೆಯನ್ನು ಪ್ರಶ್ನಿಸಿದಾಗ ಆಕೆ ಓಡಲು ಯತ್ನಿಸಿದ ವೇಳೆ, ಆಕೆ ಕಳವುಗೈದಿದ್ದ ಬಳೆ ಕೆಳಗೆ ಬಿದ್ದಿತ್ತು.
ಆರೋಪಿ ಮಹಿಳೆಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.ಆಕೆಗೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದರೆಂಬ ಆರೋಪ ವ್ಯಕ್ತವಾಗಿತ್ತು.ಇದನ್ನು ದೂರುದಾರರು ಪ್ರಶ್ನಿಸಿದ್ದರಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.ಆ ಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ದೂರುದಾರರ ಮನೆಗೆ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಾದ ರಾಧಾ, ದತ್ತಾತ್ರೆಯ, ಗಣೇಶ್, ಬೈರನಾಥ್, ವೈಶಾಲಿ ಮತ್ತು ಬಾಲಾಪರಾಧಿಯೊಬ್ಬನನ್ನು ಬಂದಿಸಿದ್ದರು.ಬಂಧಿತ ಆರೋಪಿಗಳ ಪೈಕಿ ಬಾಲಾಪರಾಧಿಗೆ ಬಾಲನ್ಯಾಯಾಲಯದಲ್ಲಿ ಮತ್ತು ಉಳಿದವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.ಆರೋಪಿಗಳ ಪೈಕಿ ಗಣೇಶ್, ಬೈರನಾಥ್, ವೈಶಾಲಿಯವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಬಾಲಾಪರಾಧಿಗೆ ಬಾಲನ್ಯಾಯಾಲಯದಲ್ಲಿ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲ ವಿಶ್ವನಾಥ್ ನಂದಿಲ ಮತ್ತು ನಾಜೀರ ಬೇಗಂ ವಾದಿಸಿದ್ದರು.