ಮಲೇರಿಯ, ಡೆಂಗ್ಯೂ ರೋಗಗಳ ನಿಯಂತ್ರಣ ಕಾರ್ಯಾಗಾರ

0

ಚಿಕಿತ್ಸೆಗಿಂತ ತಡೆಗಟ್ಟುವಿಕೆ ಬಹಳ ಉತ್ತಮ: ಎ.ಸಿ ಜುಬಿನ್ ಮೊಹಪಾತ್ರ

ಪುತ್ತೂರು: ಕಾಯಿಲೆ ಬಂದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಅದನ್ನು ತಡೆಗಟ್ಟಲು ಕಾರ್ಯಪ್ರವೃತರಾಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಎಲ್ಲಾ ಅಧಿಕಾರಿಗಳು ಇಂದಿನಿಂದಲೇ ಪಿಡಿಒ, ಎಎನ್‌ಎಮ್, ಆಶಾ, ಎನ್‌ಜಿಒಗಳನ್ನು ಬಳಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಸಹಾಯಕ ಆಯುಕ್ತರಾದ ಜುಬಿನ್ ಮೋಹಪಾತ್ರ ಹೇಳಿದರು.


ತಾಲೂಕಿನಲ್ಲಿ ಮಲೇರಿಯ ಮತ್ತು ಡೆಂಗ್ಯೂ ರೋಗಗಳ ನಿಯಂತ್ರಣ ಕುರಿತು ತಾಲೂಕು ಪಂಚಾಯತ್, ಆರೋಗ್ಯ ಇಲಾಖೆ ಮತ್ತು ನಗರಸಭೆ ಸಹಯೋಗದೊಂದಿಗೆ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು.10ರಂದು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಡೆಂಗ್ಯೂ, ಮಲೇರಿಯ ರೋಗಗಳ ಹರಡುವಿಕೆ ಬಹಳಷ್ಟು ಏರಿಕೆಯಾಗುತ್ತಿದೆ. ಇದನ್ನು ಬಾರದ ರೀತಿಯಲ್ಲಿ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಅರಿವು ಇಲ್ಲದಂತೆ ಕಂಡು ಬರುತ್ತಿದೆ. ವಿದೇಶದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ಹೋಗುತ್ತಾರೆ. ನಮ್ಮಲ್ಲಿ ಮನೆ ಮದ್ದು ಮಾಡಿ ಬಳಿಕ ಅಲ್ಲಿ ಗುಣಮುಖರಾಗದೆ ಇದ್ದಾಗ ಆಸ್ಪತ್ರೆಗೆ ಹೋಗುತ್ತಾರೆ. ಅಷ್ಟು ಹೊತ್ತಿಗೆ ರೋಗ ಉಲ್ಪಣಗೊಂಡು ಅದನ್ನು ಶಮನ ಮಾಡಲು ವೈದ್ಯರು ತುಂಬಾ ಕಷ್ಟ ಪಡಬೇಕಾಗುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಸಣ್ಣಪುಟ್ಟ ಕಾಯಿಲೆಗಳ ಚಿಕಿತ್ಸೆಗೂ ಆಸ್ಪತ್ರೆಗೆ ಭೇಟಿ ಮಾಡಬೇಕು. ರೋಗ ಬರುವ ಮುಂಚೆ ಅದರ ಬಗ್ಗೆ ಕಾಳಜಿ ವಹಿಸಿ ತಡೆಗಟ್ಟುವುದು ಬಹಳ ಉತ್ತಮ ಎಂದ ಅವರು ಸ್ವಚ್ಛತೆಗೆ ಆದ್ಯತೆ ನೀಡಿ. ಎಲ್ಲೆಂದರಲ್ಲಿ ಕಸ ಬಿಸಾಡದೆ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳು, ಪಿಡಿಒಗಳು, ಎ.ಎನ್.ಎಮ್, ಆಶಾ ಕಾರ್ಯಕರ್ತೆಯರು ಫೀಲ್ಡಿಗೆ ಇಳಿದು ಕೆಲಸ ಮಾಡಬೇಕಾಗಿದೆ. ಎಲ್ಲರೂ ಸೀರಿಯಸ್ ಆಗಿ ರೋಗ ನಿಯಂತ್ರಣದ ಕುರಿತು ಕಾಳಜಿ ವಹಿಸಿ ಎಂದರು.


ಮನೆ ಮನೆಗೆ ತೆರಳಿ ಜಾಗೃತಿ ಕಾರ್ಯಕ್ರಮ:
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಕುಮಾರ್ ಭಂಡಾರಿ ಅವರು ಸ್ವಾಗತಿಸಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂ, ಮಲೇರಿಯ ವ್ಯಾಪಕವಾಗಿ ಹರಡುತ್ತಿದೆ. 8 ಸಾವಿರಕ್ಕೂ ಹೆಚ್ಚು ಪ್ರಕರಣ ಬಂದಿದೆ. 7 ಸಾವು ಆಗಿದೆ. ಹಾಗಾಗಿ ಮುಂದಿನ ಮೂರು ತಿಂಗಳು ಡೆಂಗ್ಯೂ ನಿಯಂತ್ರಣ ಜಾಗೃತಿ ಮಾಡಬೇಕಾಗಿದೆ ಎಂದರು.


ಡೆಂಗ್ಯೂಗೆ ಚಿಕಿತ್ಸೆಯಿಲ್ಲ. ವ್ಯಾಕ್ಸೀನೂ ಇಲ್ಲ:
ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ನವೀನ್‌ಚಂದ್ರ ಕುಲಾಲ್ ಅವರು ಪವರ್‌ಪಾಯಿಂಟ್ ಮೂಲಕ ಡೆಂಗ್ಯೂ ಕಾಯಿಲೆ ಹೇಗೆ ಬರುತ್ತದೆ ಹಾಗೂ ಅದರ ನಿಯಂತ್ರಣದ ಬಗ್ಗೆ ಮಾತನಾಡಿದರು. 2019ರಲ್ಲಿ 1539 ಡೆಂಗ್ಯೂ ಕೇಸ್ ಇತ್ತು. ಈಗ ಮತ್ತೊಮ್ಮೆ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದೆ. ಒಂದು ಕಡೆ 10 ಡೆಂಗ್ಯೂ ಕೇಸ್ ಬಂದಿದೆ ಎಂದಾದರೆ ಅದರ ಅರ್ಥ 200 ಮಂದಿಗೂ ಬಂದಿದೆ ಎಂದು ನಾವು ಅರಿಯಬೇಕು. ಒಂದು ವಾರ್ಡ್‌ನಲ್ಲಿ 5ಕ್ಕಿಂತ ಹೆಚ್ಚು ಜನರಿಗೆ ಡೆಂಗ್ಯೂ ಬಂದಿದೆ ಎಂದರೆ ಪೂರ್ಣ ವಾರ್ಡ್‌ನ್ನು ಡೆಂಗ್ಯೂ ಪೀಡಿತ ಎಂದು ಘೋಷಣೆ ಮಾಡಬೇಕು ಎಂದ ಅವರು ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಕೇಸ್ ಆಗುತ್ತಾ ಇದೆ. ಒಬ್ಬ ವ್ಯಕ್ತಿಗೆ ಒಂದು ಬಾರಿ ಡೆಂಗ್ಯೂ ಬಂದು ಹೋಗಿ ಮತ್ತೊಮ್ಮೆ ಜ್ವರ ಬಂದರೆ ತೊಂದರೆ ಆಗುತ್ತದೆ. ಮಕ್ಕಳಲ್ಲಿ ಸಣ್ಣ ಸಣ್ಣ ಗುಳ್ಳೆಗಳಿದ್ದರೆ ಸೂಕ್ಷ್ಮವಾಗಿ ಪರಿಶೀಲಿಸಿ. ಹೆಚ್ಚು ವಿಶ್ರಾಂತಿ ಪಡೆಯಿರಿ. ಸೊಳ್ಳೆಗಳನ್ನು ನಿಯಂತ್ರಿಸಿ ಎಂದ ಅವರು ಪ್ರಪಂಚದಲ್ಲಿ 3,300 ರೀತಿಯ ಸೊಳ್ಳೆಗಳಿವೆ. ಎಲ್ಲಾ ಸೊಳ್ಳೆಗಳು ಡೆಂಗ್ಯೂ ಹರಡುವುದಿಲ್ಲ. ಈಡಿಸ್ ಸೊಳ್ಳೆಯಿಂದ ಮಾತ್ರ ಡೆಂಗ್ಯೂ ಬರುತ್ತದೆ. ಅದರಲ್ಲೂ ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳಿಗೆ ಪೋಷಕಾಂಶಕ್ಕಾಗಿ ಮನುಷ್ಯನಿಗೆ ಕಚ್ಚಿ ರಕ್ತ ಹೀರುತ್ತದೆ. ಆಗ ಡೆಂಗ್ಯೂ ಹರಡುತ್ತದೆ. ಡೆಂಗ್ಯೂಗೆ ಯಾವುದೇ ಚಿಕಿತ್ಸೆ ಇಲ್ಲ. ಕೋವಿಡ್‌ನ ಹಾಗೆ ಇದಕ್ಕೆ ವ್ಯಾಕ್ಸೀನ್ ಕೂಡಾ ಇಲ್ಲ. ಔಟ್‌ಡೋರ್ ಫಾಗಿಂಗ್ ತಾತ್ಕಾಲಿಕ ಮಾತ್ರ. ಹಾಗಾಗಿ ಸೊಳ್ಳೆಗಳ ಮೊಟ್ಟೆಗಳ ನಾಶ ಮಾಡಬೇಕು. ವಾರದಲ್ಲಿ ಒಂದು ದಿನವಾದರೂ ಲಾರ್ವಾ ನಾಶ ದಿನ ಎಂದು ಕಾರ್ಯಕ್ರಮ ಹಮ್ಮಿಕೊಳ್ಳಿ. ಮೈಗೆ ತೆಂಗಿನ ಎಣ್ಣೆ ಹಚ್ಚಿ, ಆದಷ್ಟು ಮುಚ್ಚಿದ ಬಟ್ಟೆಯನ್ನೇ ಬಳಸಿಕೊಳ್ಳಿ. ಗ್ರಾ.ಪಂ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಬಹುದು. ಆ ಮೂಲಕ ಡೆಂಗ್ಯೂ ನಿಯಂತ್ರಣ ಮಾಡಬೇಕೆಂದು ಹೇಳಿದರು.


ಕಿವಿಹಣ್ಣು ಸಹಿತ ಯಾವುದೇ ಟಾನಿಕ್ ಡೆಂಗ್ಯೂವನ್ನು ತಡೆಯುವುದಿಲ್ಲ:
ಡೆಂಗ್ಯೂ ಬಂದರೆ ನಿಮ್ಮ ಆಹಾರದಲ್ಲಿ ವ್ಯತ್ಯಾಸ ಮಾಡಬೇಡಿ. ಮಾಂಸಹಾರಿ, ಎಣ್ಣೆ ಕಡಿಮೆ ಮಾಡಿ. ಕಿವಿಹಣ್ಣು ಡೆಂಗ್ಯೂವಿಗೂ ಯಾವುದೇ ಕನೆಕ್ಷನ್ ಇಲ್ಲ. ಪಪ್ಪಾಯಿ ರಸವೂ ಯಾವುದೇ ಪ್ರಯೋಜನ ಬೀರುವುದಿಲ್ಲ. ಯಾವುದೇ ಟಾನಿಕ್ ಮತ್ತು ವಿಟಮೀನ್ ಗುಳಿಗೆಗಳು ಡೆಂಗ್ಯೂ ಬಾರದಂತೆ ತಡೆಯುವುದಿಲ್ಲ ಎಂದು ನವೀನ್‌ಚಂದ್ರ ಹೇಳಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ತಾಲೂಕಿನ ಗ್ರಾ.ಪಂ.ನ ಪಿಡಿಒಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿ ಮನೆಗೆ ಭೇಟಿ ನೀಡಿ ಫೋಟೋ ಕಳಿಸಿ
ಡೆಂಗ್ಯೂ ರೋಗ ಹರಡದಂತೆ ಪಿಡಿಒ, ಎಎನ್‌ಎಮ್, ಆಶಾ ಕಾರ್ಯಕರ್ತೆಯರು, ನಗರಸಭೆ ಆರೋಗ್ಯ ವಿಭಾಗದವರ ಸಹಿತ ಎಲ್ಲರೂ ಮನೆ ಮನೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ. ಇವತ್ತಿನಿಂದ 9 ದಿನ ಫೀಲ್ಡ್ ಮಾಡಿ. ನೀವು ಭೇಟಿ ನೀಡಿದ ಮನೆಯಲ್ಲಿ ಸುರಕ್ಷತೆ ಕ್ರಮ ಕೈಗೊಂಡ ಕುರಿತು ಕನಿಷ್ಟ 5 ಜಿಪಿಎಸ್ ಪೋಟೋ ಕಳಿಸಿ. ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ಪ್ರಯಾಣಿಕರ ತಂಗುದಾಣ, ಪ್ರತಿ ಅಂಗನವಾಡಿಗಳ ಕಡೆ ಮತ್ತು ಸಣ್ಣಪುಟ್ಟ ಹೊಟೇಲ್‌ಗಳ ಕಡೆಯೂ ಭೇಟಿ ನೀಡಿ ಅರಿವು ಮೂಡಿಸಿ.
ಜುಬಿನ್ ಮೋಹಪಾತ್ರ, ಸಹಾಯಕ ಆಯುಕ್ತರು

15ರೂ.ಆಗಲಿ,20 ರೂ.ಆಗಲಿ
ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಗುರಿ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರೂ ಮತ್ತೆ ಮತ್ತೆ ಅವರು ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ. ತಮ್ಮ ಸೂಚನೆಗಳನ್ನು ಪಾಲಿಸದೆ ಇದ್ದಲ್ಲಿ ರೂ.15 ಆಗಲಿ ರೂ.20 ಆಗಲಿ ದಂಡ ಹಾಕಿ. ನಿಮಗೆ ದಂಡ ಹಾಕುವ ಪವರ್ ಕೊಟ್ಟಿದ್ದಾರೆ. ಸರಕಾರವೇ ಇದ್ದನ್ನು ಟ್ರೇಕ್ ಮಾಡುತ್ತಿದೆ ಎಂದು ಸಹಾಯಕ ಕಮೀಷನರ್ ಹೇಳಿದರು.

LEAVE A REPLY

Please enter your comment!
Please enter your name here