ಉಪ್ಪಿನಂಗಡಿ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಅಗತ್ಯ. ಮಳೆಗಾಲದ ಸಂದರ್ಭ ಸರಕಾರಗಳು, ಸರಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸುವುದು ಸಾಮಾನ್ಯ. ಆದರೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಾಗಿ 34 ನೆಕ್ಕಿಲಾಡಿಗೆ ಸೊಳ್ಳೆ ಉತ್ಪಾದನಾ ಕೇಂದ್ರವೊಂದು ಈ ಮಳೆಗಾಲದಲ್ಲಿ ಕೊಡುಗೆಯಾಗಿ ಸಿಕ್ಕಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
34 ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇಲ್ಲಿರುವ ಜಾಗವೊಂದು ಬೃಹತ್ ಕೆರೆಯಂತಾಗಿದ್ದು, ಈಗ ಅಲ್ಲಿ ಮಲೀನ ನೀರು ಶೇಖರಗೊಂಡು ಸೊಳ್ಳೆ ಉತ್ಪಾದನಾ ತಾಣವಾಗಿ ಬದಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಜಾಗ ತಗ್ಗು ಪ್ರದೇಶದಲ್ಲಿದ್ದು, ಅಲ್ಲಿಂದ ನೀರು ಮುಂದಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವವರು ಹಾಕಿದ ಮೋರಿ ಎತ್ತರದ ಪ್ರದೇಶದಲ್ಲಿದೆ. ಆದ್ದರಿಂದ ಮಳೆಗಾಲದ ಸಂದರ್ಭ ಇಲ್ಲಿ ನೀರು ನಿಲ್ಲುವಂತಾಗಿದೆ. ಈ ನೀರು ಈಗ ಕಪ್ಪಡರಿ ಮಲೀನವಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ವಾಸನೆಯನ್ನು ಹರಡುತ್ತಿದೆ. ನಿಂತ ನೀರಿನಲ್ಲಿ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುವ ಸೊಳ್ಳೆಗಳ ಲಾರ್ವಗಳು ಹುಟ್ಟಿಕೊಳ್ಳಲು ಅವಕಾಶವನ್ನೊದಗಿಸುತ್ತಿದೆ. ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಸರಕಾರಿ ಸಂಬಂಧಿತ ಸಂಸ್ಥೆಗಳು ಯಾಕೆ ಈ ಬಗ್ಗೆ ಮೌನವಾಗಿದ್ದಾರೆ. ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿಯೆನ್ನುವುದು ಭಿತ್ತಿ ಪತ್ರ ಹಂಚುವುದಕ್ಕೆ, ಜಾಥಾಕ್ಕೆ ಮಾತ್ರ ಸೀಮಿತವೇ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುವಂತಾಗಿದೆ. ಇನ್ನಾದರೂ ಸಂಬಂಧಿತ ಇಲಾಖೆ, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪರಿಸರದ ಜನರ ಆರೋಗ್ಯ ಕಾಪಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಪಕ್ಕದಲ್ಲಿರುವ ಜಾಗ. ಇದು ರಾಷ್ಟ್ರೀಯ ಹೆದ್ದಾರಿಗೆ ಭೂ ಸ್ವಾಧೀನವಾಗಿದೆಯಾ ಗೊತ್ತಿಲ್ಲ. ಈ ಜಾಗ ತಗ್ಗು ಪ್ರದೇಶದಲ್ಲಿದ್ದು, ಇಲ್ಲಿಂದ ಮುಂದಕ್ಕೆ ಚತುಷ್ಪಥ ಹೆದ್ದಾರಿ ಕಾಮಗಾರಿ ಸಂದರ್ಭ ಹಾಕಿರುವ ಮೋರಿ ಎತ್ತರದ ಪ್ರದೇಶದಲ್ಲಿದೆ. ಆದ್ದರಿಂದ ಈ ಮೋರಿಯಲ್ಲಿ ನೀರು ಹೋಗಲು ಸಾಧ್ಯವಾಗದೇ ಈಗ ಇಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ತಾಣವಾಗಿ ಪರಿಸರದ ಜನತೆಯಲ್ಲಿ ಸಾಂಕ್ರಾಮಿಕ ರೋಗದ ಆತಂಕಕ್ಕೆ ತಂದೊಡ್ಡಿದೆ. ಈಗಾಗಲೇ ಊರಿನಲ್ಲಿ ಡೆಂಗ್ಯೂ ಭೀತಿ ಇದೆ. ಅದೇ ಪರಿಸರದಲ್ಲಿ ನಾಲ್ಕು ಮಂದಿಗೆ ಈಗಾಗಲೇ ಡೆಂಗ್ಯೂ ಬಂದಿದೆ ಎಂಬ ಮಾಹಿತಿಯೂ ಇದೆ. ಇಲ್ಲಿ ಆಗಿರುವ ಸಮಸ್ಯೆಗೆ ಯಾರು ಹೊಣೆ. ಆದ್ದರಿಂದ ಸಂಬಂಧಪಟ್ಟವರು ತಕ್ಷಣ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.
ಅಸ್ಕರ್ ಅಲಿ
ಮಾಜಿ ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.
ನಮಗೆ ಸಂಬಂಧವಿಲ್ಲ: ನಂದಕುಮಾರ್
34 ನೆಕ್ಕಿಲಾಡಿಯಲ್ಲಿ ಈಗ ನೀರು ನಿಂತಿರುವ ಜಾಗವು ರಾಷ್ಟ್ರೀಯ ಹೆದ್ದಾರಿಗಾಗಿ ಭೂ ಸ್ವಾಧೀನವಾಗಿಲ್ಲ. ಅಲ್ಲೇ ಭೂ ಸ್ವಾಧೀನವಾದ ಜಾಗದಲ್ಲಿ ನಾವು ಮೋರಿಯನ್ನು ಹಾಕಿ ಚರಂಡಿಯನ್ನು ನಿರ್ಮಿಸಿದ್ದೇವೆ. ಅಲ್ಲಿ ನೀರು ನಿಂತು ಸಮಸ್ಯೆ ಇಲ್ಲ. ನಮ್ಮ ಚರಂಡಿಯು ಸರಿಯಾಗಿಯೇ ಇದೆ. ಈಗ ನೀರು ನಿಂತಿರುವ ಜಾಗವು ತಗ್ಗು ಪ್ರದೇಶವಾಗಿದ್ದು, ಅದಕ್ಕೆ ಮಣ್ಣು ಹಾಕಿ ಎತ್ತರಿಸಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗಲು ಸಾಧ್ಯ. ಅದನ್ನು ಆ ಜಾಗದವರು ಮಾಡಬೇಕು. ಈ ಜಾಗಕ್ಕೂ ಅಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಕೆಎನ್ಆರ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ.
ನಂದಕುಮಾರ್
ಪಿಆರ್ಒ, ಕೆಎನ್ಆರ್ ಸಂಸ್ಥೆ