ನಮ್ಮ ದೇಶದ ಬೆನ್ನೆಲುಬು ದೇಶದ ಗಡಿ ಕಾಯುವ ಯೋಧ ಮತ್ತು ಅನ್ನದಾತ.ನಮ್ಮ ದೇಶ ಪರಸ್ಪರ ವಿಶ್ವಾಸ, ನಂಬಿಕೆ, ತ್ಯಾಗ, ಸಮರ್ಪಣಾ ಭಾವದ ಮೂಲಕ ಬೆಳೆದು ಬಂದಿದೆ.ನಮ್ಮ ದೇಶದ ಹಲವಾರು ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಪಣವಾಗಿಟ್ಟು ಹೋರಾಡಿದ ನಿದರ್ಶನ ನಮ್ಮ ಕಣ್ಣ ಮುಂದಿದೆ.ಕೊರೆಯುವ ಚಳಿ,ಸುಡುವ ಬಿಸಿಲಿನ ಮಧ್ಯೆ ದೇಶದ ವಿಚಾರವನ್ನು ಮುಂದಿಟ್ಟು ರಾಷ್ಟ್ರ ರಕ್ಷಣೆಯೊಂದರ ಧ್ಯೇಯೋದ್ದೇಶದೊಂದಿಗೆ ನಮ್ಮ ಸೈನಿಕರ ಕಾರ್ಯಕ್ಕೆ ಬೆಲೆ ಕಟ್ಟಲು ಅಸಾಧ್ಯ. ಕಳೆದೊಂದು ದಶಕಗಳ ಹಿಂದಿಗೆ ನಮ್ಮ ತಾಯಿ ಶಾರದೆಯ ನೆಲ ಜಮ್ಮು ಕಾಶ್ಮೀರವನ್ನು ತೆಗೆದುಕೊಳ್ಳುವುದಾದರೆ ನಿತ್ಯ ನಿರಂತರ ರಕ್ತಪಾತದ ಕೇಂದ್ರ ಬಿಂದುವಾಗಿ ಅಟ್ಟಹಾಸ ಮೆರೆಯುತ್ತಿದ್ದ ಉಗ್ರರ ಚಟುವಟಿಕೆ, ಅಕ್ರಮ ನುಸುಳುವಿಕೆಗೆ 371 ನೇ ವಿಧಿಯನ್ನು ಹಿಂಪಡೆಯುವ ಮೂಲಕ ಕೇಂದ್ರ ಸರಕಾರ ಉಗ್ರರ ಹುಟ್ಟಡಗಿಸಿರುವುದು ಗಮನಾರ್ಹ ಸಂಗತಿ.ಇದರ ಪರಿಣಾಮ ಬಹುದೊಡ್ಡ ಕೈಗಾರಿಕೆ,ಉದ್ಯಮಗಳು ಜಮ್ಮು ಕಾಶ್ಮೀರದ ಕಡೆಗೆ ಬಂಡವಾಳ ಹೂಡಲು, ಉದ್ಯಮ ಆರಂಭಿಸಲು ಉತ್ಸುಕತೆ ತೋರಿರುವುದು ಕೂಡ ಉತ್ತಮ ಬೆಳವಣಿಗೆ.
ನಮಗಾಗಿ, ನಮ್ಮ ದೇಶಕ್ಕಾಗಿ,ನಮ್ಮ ನೆಲಕ್ಕಾಗಿ ವ್ಯಕ್ತಿಯೊಬ್ಬ ರಾತ್ರಿ ಹಗಲೆನ್ನದೆ ಶತ್ರು ರಾಷ್ಟ್ರದ ವೈರಿಗಳೊಡನೆ ಸೆಣಸಾಡುತ್ತಾ,ಹೊಟ್ಟೆಗೆ ಸಮಯಕ್ಕೆ ಸರಿಯಾಗಿ ಅನ್ನ ಆಹಾರ ಸಿಗದಿದ್ದರೂ ತಮ್ಮ ಬಂಧು ಬಳಗ ಸಂಸಾರದ ಪರಿವೆಯೇ ಇಲ್ಲದೆ ನಮ್ಮ ದೇಶಕ್ಕಾಗಿ ಹಪಹಪಿಸುತ್ತಾ ಕೊನೆಗೊಂದು ದಿನ ಹುತಾತ್ಮನಾಗುವ ಸನ್ನಿವೇಶದಲ್ಲಿ ಬದುಕುವವನೇ ನಮ್ಮ ಗಡಿ ಕಾಯುವ ಯೋಧ ಅರ್ಥಾತ್ ಸೈನಿಕ.
ಅಂದು ಜಮ್ಮ ಕಾಶ್ಮೀರದ ಲಡಾಖ್ ಜಿಲ್ಲೆಯಲ್ಲಿನ ಕಾರ್ಗಿಲ್ ನಲ್ಲಿ ಪಾಕ್ ಸೇನೆ ಅಕ್ರಮವಾಗಿ ನುಸುಳಿ ದೂರದ ಬೆಟ್ಟದಲ್ಲಿ ಬಂಕರ್ ನಿರ್ಮಿಸಲು ಶಸ್ತ್ರಸಜ್ಜಿತರಾಗಿ ಹೊಂಚು ಹಾಕುತ್ತಿದ್ದದ್ದನ್ನು ಕಂಡ ಕುರಿಗಾಹಿ ಹುಡುಗನೊಬ್ಬ ಭಾರತೀಯ ಸೇನೆಗೆ ಸುದ್ದಿ ರವಾನಿಸುತ್ತಾನೆ.ಅದು 1999 ರ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಸುಮಾರು 60 ದಿನಗಳ ಕಾಲ ಭಾರತ-ಪಾಕ್ ನಡುವೆ ನಿರಂತರ ಯುದ್ದದಲ್ಲಿ ಭಾರತದ ಪ್ರಕಾರ 527 ಭಾರತೀಯ ಸೈನಿಕರು ಹುತಾತ್ಮರಾದರೆ,1363 ಮಂದಿ ಸೈನಿಕರು ಗಾಯಗೊಂಡು ಕಾರ್ಗಿಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿ ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿದ ಕಾರ್ಯಾಚರಣೆಗೆ ಹೆಸರು “ಆಪರೇಷನ್ ವಿಜಯ” ಈ ಯುದ್ದದಲ್ಲಿ ಭಾರತ ಗೆಲುವು ಸಾಧಿಸಿದ ದಿನವಾದ ಜುಲೈ-26 ನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ.ಅಪಾರ ಸಾವು ನೋವನ್ನು ಕಂಡ ಈ ಯುದ್ಧದ ವಿಜಯಕ್ಕೀಗ ಸಂಭ್ರಮೋತ್ಸವ.
ಜತೆಗೆ ಯುದ್ಧದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಸೇರಿದಂತೆ ಇನ್ನಿತರ ನೆರವು ನೀಡಿದ ಇಸ್ರೇಲ್ ರಾಷ್ಟ್ರದ ಸಹಕಾರವು ಕೂಡ ಅವಿಸ್ಮರಣೀಯದ ಜೊತೆಗೆ ಆ ರಾಷ್ಟ್ರದೊಡನೆ ಭಾರತ ಇಂದಿಗೂ ತನ್ನ ಬಾಂಧವ್ಯವನ್ನು ಗಟ್ಟಿಯಾಗಿ ವೃದ್ದಿಸಿಕೊಂಡಿದೆ.ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ ಶಸ್ತ್ರಾಸ್ತ್ರ ಸಂಘರ್ಷವಾಗಿರುವುದಲ್ಲದೆ ಅಂದಿನಿಂದ ಇಂದಿನವರೆಗೂ ಪಾಕ್ ತನ್ನ ಪುಂಡಾಟವನ್ನು ನಿಲ್ಲಿಸಿಲ್ಲ.ಅಕ್ರಮ ನುಸುಳುವಿಕೆ,ಗಡಿ ಭಾಗದಲ್ಲಿ ಗುಂಡಿನ ಮೊರೆತ ಕಾಲು ಕೆರೆದು ಜಗಳ ಕಾಯುವ ತನ್ನ ಮಾನಸಿಕತೆಗೆ ಪ್ರಸ್ತುತ ನಮ್ಮ ಸೈನಿಕರು ದಿಟ್ಟ ಉತ್ತರವನ್ನು ನೀಡುತ್ತಾ ಬಂದಿದ್ದಾರೆ.
ಆಪರೇಷನ್ ವಿಜಯ್ ಕಾರ್ಯಾಚರಣೆಯಲ್ಲಿ ಅಂಗಾಂಗಗಳನ್ನು ಕಳೆದುಕೊಂಡ ಭಾರತೀಯ ಸೈನಿಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದರಿಂದ ಜೊತೆಗೆ ಯುದ್ಧರಂಗದಲ್ಲಿ ಸೆಣಸಾಡಿದ ಒಬ್ಬೊಬ್ಬ ಯೋಧನ ಕಥಯೂ ರೋಚಕತೆಯಿಂದ ಕೂಡಿದೆ.ನಮ್ಮ ವ್ಯವಸ್ಥೆಯು ಮಡಿದ ಕೆಲ ವೀರಯೋಧರಿಗೆ ದೊರಕಬೇಕಾದ ಸರಕಾರಿ ಸವಲತ್ತುಗಳಲ್ಲಿ,ನೆರವಿನ ಹಸ್ತದಲ್ಲಿಯೂ ಲೋಪ ಎಸಗಿದ ಘಟನೆಗಳು ಅಚ್ಚಹಸುರಾಗಿರುವ ಮಧ್ಯೆ ತಮ್ಮ ಜೀವದ ಹಂಗು ತೊರೆದು ದೇಶದ ರಕ್ಷಣೆಗಿಳಿದ ಹಲವಾರು ಸೈನಿಕರು “ಶೌರ್ಯ ಪ್ರಶಸ್ತಿ” ಗೂ ಭಾಜನರಾಗಿದ್ದಾರೆ.