ನೆಲ್ಯಾಡಿ: ಜು.24ರಂದು ಸಂಜೆ ನೆಲ್ಯಾಡಿ ಭಾಗದಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ನೆಲ್ಯಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೊಂಡಿದ್ದು ಮೆಸ್ಕಾಂಗೆ ರೂ.10ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ನೆಲ್ಯಾಡಿ ವ್ಯಾಪ್ತಿಯ ಗುಂಡ್ಯ, ಸೋಣಂದೂರು, ಪೆರಿಯಶಾಂತಿ, ಬಲ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೇ 2ಡಿಪಿ, 3ಟಿಸಿಗಳು ಹಾನಿಗೊಂಡಿವೆ. ಇದರಿಂದಾಗಿ ಈ ಪ್ರದೇಶದಲ್ಲಿ ಕಳೆದ ರಾತ್ರಿಯಿಂದಲೇ ವಿದ್ಯುತ್ ಸರಬರಾಜಿನಲ್ಲೂ ಅಡಚಣೆ ಉಂಟಾಗಿದೆ. ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿರುವುದರಿಂದ ಮರು ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ಸಿಬ್ಬಂದಿಗಳು ಜು.25ರಂದು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಸಂಪರ್ಕ ನೀಡಿದ್ದಾರೆ. ಘಟನೆಯಿಂದಾಗಿ ಮೆಸ್ಕಾಂಗೆ ರೂ.10ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ನೆಲ್ಯಾಡಿ ಶಾಖಾ ಕಿರಿಯ ಸಹಾಯಕ ಅಭಿಯಂತರ ರಮೇಶ್ ತಿಳಿಸಿದ್ದಾರೆ.
ಕೃಷಿಗೂ ಹಾನಿ:
ಗಾಳಿ ಮಳೆಗೆ ನೆಲ್ಯಾಡಿ ಭಾಗದಲ್ಲಿ ಕೃಷಿಗೂ ಹಾನಿ ಸಂಭವಿಸಿದೆ. ಅಡಿಕೆ ಹಾಗೂ ಇತರೇ ಮರಗಳು ಮುರಿದು ಬಿದ್ದಿರುವುದಾಗಿ ವರದಿಯಾಗಿದೆ. ಕೆಲವು ಕಡೆಗಳಲ್ಲಿ ಮನೆ, ಕೊಟ್ಟಿಗೆಯ ಸಿಮೆಂಟ್ ಶೀಟ್‌ಗಳು ಹಾರಿಹೋಗಿರುವುದಾಗಿ ವರದಿಯಾಗಿದೆ.
ನೇಲಡ್ಕದಲ್ಲಿ 4 ವಿದ್ಯುತ್ ಕಂಬಕ್ಕೆ ಹಾನಿ:
ಮೆಸ್ಕಾಂ ಕೊಕ್ಕಡ ಶಾಖಾ ವ್ಯಾಪ್ತಿಯ ರೆಖ್ಯ ಗ್ರಾಮದ ನೇಲಡ್ಕದಲ್ಲಿ ವಿದ್ಯುತ್ ತಂತಿಯ ಮೇಲೆಯೇ ಮರಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬ ಹಾಗೂ 1 ವಿದ್ಯುತ್ ಪರಿವರ್ತಕ ಹಾನಿಗೊಂಡಿರುವುದಾಗಿ ವರದಿಯಾಗಿದೆ.