ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ದೊಡ್ಡ ತಪ್ಪಲೆ ಬಳಿ ಜು.31ರಂದು ಸಂಜೆ ಮತ್ತೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಜು.30ರಂದು ಮಧ್ಯಾಹ್ನ ದೊಡ್ಡತಪ್ಪಲೆ ಬಳಿ ಗುಡ್ಡ ಕುಸಿತಗೊಂಡ ಪರಿಣಾಮ ನಾಲ್ಕೈದು ವಾಹನಗಳು ಸಿಲುಕಿಕೊಂಡು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಹೆದ್ದಾರಿ ಪ್ರಾಧಿಕಾರದವರು ನಿರಂತರ ಕಾರ್ಯಾಚರಣೆ ನಡೆಸಿ ಮಣ್ಣು ತೆರವುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಜು.31ರಂದು ಬೆಳಗ್ಗಿನಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿತ್ತು.
ಆದರೆ ಸಂಜೆ ವೇಳೆಗೆ ಮತ್ತೆ ಗುಡ್ಡ ಕುಸಿತಗೊಂಡು ಮಣ್ಣು ರಸ್ತೆಗೆ ಜರಿದು ಬಿದ್ದಿದೆ. ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಲಾರಿಯೊಂದು ಮಣ್ಣಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಸ್ಥಗಿತಗೊಂಡಿದ್ದು ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುವ ವಾಹನ ಚಾಲಕರು ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ ನೀಡಲಾಗುತ್ತಿದೆ.