ಉಪ್ಪಿನಂಗಡಿ: ಪತಿ ಪತ್ನಿಯರಿಬ್ಬರು ಮಧ್ಯ ರಾತ್ರಿ 12 ಗಂಟೆಯ ಸುಮಾರಿಗೆ ಪಂಚಾಯತ್ ಕಚೇರಿ ಮುಂಭಾಗ ತೆಂಗಿನ ಕಾಯಿ ಒಡೆದು ತಮ್ಮ ಮುಗ್ಧತೆಯ ಭಕ್ತಿಯ ನಡೆಯನ್ನು ಪ್ರದರ್ಶಿಸಿದ್ದು, ಪಂಚಾಯತ್ ಆಡಳಿತಗಾರರನ್ನು ನಾನಾ ತರಹದ ಶಂಕೆ ವ್ಯಕ್ತಪಡಿಸುವಂತೆ ಮಾಡಿ ಗೊಂದಲವನ್ನು ಮೂಡಿಸಿದ ಘಟನೆ 34 ನೇ ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ.
ಕಾರ್ಯನಿಮಿತ್ತ ದೂರದೂರಿಗೆ ತೆರಳಿದ ಗ್ರಾ.ಪಂ. ಸದಸ್ಯರೋರ್ವರು ಗುರುವಾರ ನಸುಕಿನ ಜಾವ 1ಗಂಟೆಯ ಸುಮಾರಿಗೆ ಗ್ರಾ.ಪಂ. ಆವರಣದಲ್ಲಿಟ್ಟಿದ್ದ ತನ್ನ ದ್ವಿಚಕ್ರ ವಾಹನವನ್ನು ಕೊಂಡೊಯ್ಯಲು ಬಂದಾಗ ಅವರಿಗೆ ಗ್ರಾ.ಪಂ. ಗೇಟಿನ ಎದುರು ತೆಂಗಿನ ಕಾಯಿ ಒಡೆದಿರುವುದು ಕಂಡು ಬಂದಿದ್ದು, ನಾನಾ ರೀತಿಯ ಶಂಕೆಗೂ ಇದು ಕಾರಣವಾಯಿತು.
ಗುರುವಾರದಂದು ಪಂಚಾಯತ್ ಕಚೇರಿಯ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಬುಧವಾರ ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಪಂಚಾಯತ್ ಕಚೇರಿ ಗೇಟಿನ ಮುಂಭಾಗದಲ್ಲಿ ದಂಪತಿ ನಿಂತಿರುವುದು. ಸಮೀಪದಲ್ಲಿ ನಿಂತಿದ್ದ ವಾಹನವೊಂದು ಹೋಗುವುದನ್ನು ಕಾಯುತ್ತಿದ್ದ ನಡೆ, ವಾಹನ ಹೋದ ಕೂಡಲೇ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ಗ್ರಾ.ಪಂ. ಪ್ರವೇಶದ್ವಾರದ ಮುಂಭಾಗದಲ್ಲಿ ಒಡೆದು ಹಿಂದಿರುಗುತ್ತಿದ್ದ ಕೃತ್ಯಗಳೆಲ್ಲವೂ ಕಂಡುಬಂದಿತ್ತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರಿಬ್ಬರು ಸ್ಥಳೀಯ ನಿವಾಸಿಗರೆನ್ನುವುದು ದೃಢವಾಯಿತು.
ಪಂಚಾಯತ್ ಕಚೇರಿಯ ಗೇಟಿನ ಬಳಿ ತೆಂಗಿನಕಾಯಿ ಒಡೆಯಬೇಕಾದರೆ ಯಾವುದೋ ವಾಮಾಚಾರದ ನಡೆಯನ್ನು ಮಾಡಿರಬಹುದೆಂಬ ಶಂಕೆ ಪಂಚಾಯತ್ ಆಡಳಿತಗಾರರನ್ನು ಕಾಡಿತು. ಈ ಬಗ್ಗೆ ವ್ಯಾಪಕ ವಿಚಾರಣೆ ನಡೆಸಿ ದೊರೆತ ಉತ್ತರಗಳಿಂದ ತೃಪ್ತರಾಗದೆ ಮತ್ತಷ್ಟು ಮಗದಷ್ಟು ವಿಚಾರಣೆಗಳನ್ನು ನಡೆಸಿದಾಗ ಆ ದಂಪತಿಯ ಮುಗ್ಧತೆಯ ಪರಕಾಷ್ಠತೆ ಇದರಲ್ಲಿ ಗೋಚರಿಸಿತು.
ತಮ್ಮ ಇಷ್ಠಾರ್ಥ ಸಿದ್ಧಿಗಾಗಿ ಮಾಡಿದ ಪೂಜೆಗೆ ಒಳಪಡಿಸಿದ್ದ ತೆಂಗಿನ ಕಾಯಿಯನ್ನು ಮೂರು ಮಾರ್ಗ ಸೇರುವಲ್ಲಿ ಒಡೆಯಿರಿ ಎಂದು ಪೂಜೆ ನಡೆಸಿದವರು ಸೂಚನೆ ನೀಡಿದ್ದರಂತೆ. ಹಾಗೆ ಆ ದಂಪತಿ ಪಂಚಾಯತ್ ಗೆ ಹೋಗುವ ದಾರಿಯನ್ನು ಒಂದು ರಸ್ತೆ ಎಂದು ಪರಿಗಣಿಸಿ ಪಕ್ಕದ ಹೆದ್ದಾರಿ ಮತ್ತು ಹಳೇ ಸೇತುವೆಯ ಸಂಪರ್ಕ ರಸ್ತೆ ಸೇರಿದರೆ ಮೂರು ಮಾರ್ಗ(ರಸ್ತೆ)ವಾಗುತ್ತದೆ ಎಂದು ಭಾವಿಸಿ ಆ ಗ್ರಾ.ಪಂ. ಗೇಟಿನ ಎದುರೇ ತೆಂಗಿನ ಕಾಯಿ ಒಡೆದು ಕೃತಾರ್ಥತೆಯ ಭಾವದೊಂದಿಗೆ ಮನೆಗೆ ನಿರ್ಗಮಿಸಿದ್ದರು.
ದಂಪತಿಯ ಈ ಮೂರು ರಸ್ತೆಯ ಭಾವಿಸುವಿಕೆಯಿಂದ ವಾಮಾಚಾರದ ಶಂಕೆ ಉದ್ಭವಿಸಿ ಪಂಚಾಯತ್ ಆಡಳಿತಗಾರರನ್ನು ದಿನವಿಡೀ ಸತ್ಯ ಶೋಧನೆಗೆ ತೊಡಗುವಂತೆ ಮಾಡಿತ್ತು. ಪೂಜೆ ಮಾಡಿದ ಪುರೋಹಿತರಿಂದ ತೊಡಗಿ ದಂಪತಿಗೆ ಪರಿಚಯಸ್ಥರೆಲ್ಲರೂ ಒಂದಲ್ಲ ಒಂದು ಬಗೆಯ ವಿಚಾರಣೆಗೆ ಒಳಪಟ್ಟು ಹೈರಾಣವಾಗಿ ಹೋದರು.