ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘ ಸಾಮಾನ್ಯ ಸಭೆ – ರೂ.2.92ಲಕ್ಷ ಲಾಭ, ಶೇ.25 ಡಿವಿಡೆಂಡ್, ಲೀ. ಹಾಲಿಗೆ 36ಪೈಸೆ ಬೋನಸ್

0

ಪುತ್ತೂರು: ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.2,92,338.43 ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 36 ಪೈಸೆಯಂತೆ ಬೋನಸ್ ವಿತರಿಸುವುದಾಗಿ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಆ.17ರಂದು ಸಂಘದ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ಸಾಲಿನಲ್ಲಿ 180 ಸದಸ್ಯರಿಂದ ರೂ.41,900 ಪಾಲು ಬಂಡವಾಳ ಹೊಂದಿರುತ್ತದೆ. 115 ಸದಸ್ಯರಿಂದ ಪ್ರತಿ ದಿನ 1,035ಲೀಟರ್ ಒಟ್ಟು 3,77,776.40 ಲೀಟರ್ ಹಾಲು ಸಂಗ್ರಹವಾಗಿದೆ. ಸ್ಥಳೀಯವಾಗಿ 8,688.50 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟವಾಗಿದ್ದು ರೂ.4,0,457 ಆದಾಯ ಬಂದಿರುತ್ತದೆ. ರೂ.78,919.07ಗಳ ಮಾದರಿ ಹಾಲು ಮಾರಾಟವಾಗಿದೆ. 4907 ಚೀಲ ಪಶು ಆಹಾರ ಹಾಗೂ 1735 ಕೆ.ಜಿ ಲವಣ ಮಿಶ್ರಣ, 310 ಕೆ.ಜಿ ಸಮೃದ್ಧ ಲವಣ ಮಿಶ್ರಣ ಮಾರಾಟವಾಗಿದ್ದು ಒಟ್ಟು ರೂ.13,10,996.04 ಆದಾಯ ಬಂದಿದೆ. ಇತರ ಆದಾಯಗಳು ರೂ.3,77,948.39 ಸೇರಿದಂತೆ ಒಟ್ಟು ರೂ.16,90,334.43 ಆದಾಯ ಬಂದಿರುತ್ತದೆ. ಇದರಲ್ಲಿ ಸಿಬಂದಿ ವೇತರ ಇತರ ಎಲ್ಲಾ ವೆಚ್ಚಗಳನ್ನು ಕಳೆದು ರೂ.2,92,338.43 ನಿವ್ವಳ ಲಾಭ ಗಳಿಸಿದೆ. ಸಂಘವು ಗಳಿಸಿದ ಲಾಬಾಂಶವನ್ನು ಉಪ ನಿಬಂಧನೆಯAತೆ ವಿಂಗಡಿಸಲಾಗಿದೆ ಎಂದರು.

ದ.ಕ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ಮಾತನಾಡಿ, ಹೈನುಗಾರರಿಗೆ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳು, ಹಸುಗಳ ಪಾಲನೆ, ಪೋಷಣೆಯ ಬಗ್ಗೆ ಮಾಹಿತಿ ನೀಡಿದರು.

ಪ್ರೋತ್ಸಾಹ ಬಹುಮಾನಕ್ಕೆ ರೂ.20,000 ಬಜೆಟ್:
ಕೆಲವು ಸಹಕಾರಿ ಸಂಘಗಳಲ್ಲಿ ಸದಸ್ಯರಿಗೆ ಪ್ರಯಾಣ ಭತ್ಯೆ, ಬಹುಮಾನ, ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತಿದ್ದು ಈ ಸಂಘದಲ್ಲಿಯೂ ನೀಡಬೇಕು ಎಂದು ಸದಸ್ಯರು ಅಭಿಪ್ರಾಯ ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಈ ವರ್ಷದ ಬಜೆಟ್‌ನಲ್ಲಿ ರೂ.20,000 ಪ್ರೋತ್ಸಾಹಕ ಬಹುಮಾನಕ್ಕೆ ನಿಗಧಿಪಡಿಸಲು ಮಹಾಸಭೆಯು ಒಪ್ಪಿಗೆ ಸೂಚಿಸಿದೆ. ಮುಂದಿನ ಮಹಾಸಭೆಗೆ ಹಾಜರಾಗುವ ಸದಸ್ಯರಿಗೆ ಮಾತ್ರ ಬಹುಮಾನ ನೀಡುವುದಾಗಿ ತೀರ್ಮಾನಿಸಲಾಯಿತು.


ಕಾರ್ಯದರ್ಶಿಯವರಿಗೆ ಅದ್ದೂರಿ ಬೀಳ್ಕೊಡುಗೆ:
ಸಂಘದಲ್ಲಿ 37 ವರ್ಷಗಳಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿನ್ನಪ್ಪ ಸಾಲ್ಯಾನ್‌ರವರು ಸೆ.30ಕ್ಕೆ ನಿವೃತ್ತರಾಗಲಿದ್ದು ಅವರ ಬೀಳ್ಕೊಡುಗೆ ನಡೆಸುವ ಬಗ್ಗೆ ಅಧ್ಯಕ್ಷರು ಸಭೆಯಲ್ಲಿ ಅಭಿಪ್ರಾಯ ಕೇಳಿದಾಗ ಬೀಳ್ಕೊಡುಗೆಯು ಅದ್ದೂರಿಯಾಗಿ ನಡೆಯಬೇಕು. ಈ ಬಗ್ಗೆ ಆಡಳಿತ ಮಂಡಳಿ ಕೈಗೊಳ್ಳುವ ತೀರ್ಮಾಣಕ್ಕೆ ನಾವು ಸಹಕರಿಸುವುದಾಗಿ ಸಭೆಯಲ್ಲಿ ಸದಸ್ಯರು ತಿಳಿಸಿದರು.

ಸಾಲದ ಸಬ್ಸಿಡಿ ಬರುತ್ತಿಲ್ಲ:
ಹೈನುಗಾರಿಕೆಯ ಅಭಿವೃದ್ಧಿಗೆ ಸಹಾಯಧನದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಬ್ಯಾಂಕ್‌ಗಳು ಹೇಳುತ್ತಿವೆ. ಬ್ಯಾಂಕ್‌ಗಳು ಹೈನುಗಾರರಿಗೆ ಸಾಲವನ್ನು ನೀಡುತ್ತಿದೆ. ಆದರೆ ಸಾಲ ಪಡೆದ ಬಳಿಕ ಹೈನುಗಾರರಿಗೆ ಸಹಾಯಧನದ ಸೌಲಭ್ಯಗಳು ದೊರೆಯುತ್ತಿಲ್ಲ. ಬ್ಯಾಂಕ್‌ಗಳಲ್ಲಿ ವಿಚಾರಿದರೆ ಅವರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಹಲವು ಮಂದಿ ಹೈನುಗಾರರು ಈ ಸಮಸ್ಯೆಯಲ್ಲಿದ್ದಾರೆ. ಸಹಾಯಧನವನ್ನು ನೀಡುವಂತೆ ಒಕ್ಕೂಟ ಹಾಗೂ ಮಹಾಮಂಡಲಗಳು ಸಹಕಾರದ ಒತ್ತಡ ಹಾಕಬೇಕು. ಇದರಿಂದ ಎಲ್ಲಾ ಹೈನುಗಾರರಿಗೂ ಈ ಯೋಜನೆಯ ಪ್ರಯೋಜನೆ ದೊರೆಯಲಿದೆ ಎಂದು ನಿರ್ದೇಶಕ ಜಯಗುರು ಆಚಾರ್ ತಿಳಿಸಿದರು. ಯಾವ ಯೋಜನೆಯಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂಬುದರ ಬಗ್ಗೆ ವಿಮರ್ಷೆ ನಡೆಸುವುದಾಗಿ ದ.ಕ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ತಿಳಿಸಿದರು.

ರಾಸುಗಳಿಗೆ ಉಚಿತ ವಿಮೆ:
ಹೈನುಗಾರರು ಎಲ್ಲಾ ಹಸುಗಳಿಗೆ ವಿಮೆ ಮಾಡಬೇಕು. ವಿಮಾ ಮೊತ್ತದ ಶೇ.50ನ್ನು ಒಕ್ಕೂಟ ನೀಡುತ್ತಿದೆ. ಶೇ.25 ಸಂಘ ಹಾಗೂ ಶೇ.25ನ್ನು ಹೈನುಗಾರರು ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಮುಂಡೂರು ಸಂಘದಲ್ಲಿ ರಾಸು ಅಭಿವೃದ್ಧಿ ನಿಧಿಯ ಮೂಲಕ ಹೈನುಗಾರರ ಪಾವತಿಸಬೇಕಾದ ಶೇ.25ರ ಮೊತ್ತವನ್ನು ಸಂಘದ ಮೂಲಕ ಭರಿಸಲಾಗುತ್ತಿದ್ದು, ಹೈನುಗಾರರಿಗೆ ವಿಮೆಯು ಉಚಿತವಾಗಿ ದೊರೆಯಲಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಘಕ್ಕೆ ನೀಡುವಂತೆ ಉಪಾಧ್ಯಕ್ಷ ಉಮೇಶ್ ಗುತ್ತಿನಪಾಲು ತಿಳಿಸಿದರು.
ಸಂಘದ ಮೂಲಕ ಸರಕಾರಕ್ಕೆ ನೀಡುವ ಶಿಕ್ಷಣ ನಿಧಿಯನ್ನು ಸಂಘದ ಮುಖಾಂತರ ಗ್ರಾಮದ ಬಡವರಿಗೆ ವಿನಿಯೋಗಿಸಬೇಕು. ಸಂಘದ ಹಳೆಯ ಸಾಮಾಗ್ರಿಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಆದಾಯ ಬರುವ ನಿಟ್ಟಿನಲ್ಲಿ ನಿಯಮದಂತೆ ನಡೆಸಬೇಕು. ಹೈನುಗಾರರಿಗೆ ನೀಡುವ ಬೋನಸ್‌ನ್ನು ಹೆಚ್ಚಿಸಬೇಕು ಎಂದು ಸದಸ್ಯರು ತಿಳಿಸಿದರು. ರಮೇಶ್ ಗೌಡ ಪಜಿಮಣ್ಣು, ಬಾಲಕೃಷ್ಣ ಗೌಡ ಪಜಿಮಣ್ಣ ಹಾಗೂ ಉಮೇಶ್ ಅಂಬಟ ಮೊದಲಾದವರು ವಿವಿಧ ಅಭಿಪ್ರಾಯಗಳನ್ನು ತಿಳಿಸಿದರು.
ನಿರ್ದೇಶಕರಾದ ಉದಯ ಕುಮಾರ್, ರಮೇಶ್ ಜಿ., ಜಯಗುರು ಆಚಾರ್, ಸೇಸಪ್ಪ ರೈ, ಜಯಾನಂದ ಆಳ್ವ, ರಂಜಿತ್ ಕೆ., ದೇವಕಿ ಎಚ್., ಚೇತನ, ಶಾರದ ಬಿ. ಹಾಗೂ ಗಿರಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ನಿರ್ದೇಶಕ ಜಯಗುರು ಆಚಾರ್ ಹಿಂದಾರು, ಸದಸ್ಯರಾದ ಹೆಗ್ಗಪ್ಪ ರೈ ಪೊನೋನಿ ಹಾಗೂ ಜಗದೀಶ್ ಗೌಡ ಬನಾರಿಯವರನ್ನು ಸನ್ಮಾನಿಸಲಾಯಿತು. ಹಿರಿಯ ಸದಸ್ಯರಾದ ತಿಮ್ಮಪ್ಪ ಗೌಡ ಪಜಿಮಣ್ಣ ಹಾಗೂ ವಾಸುದೇವ ಸಾಲ್ಯಾನ್ ಸನ್ಮಾನಿಸಿದರು. ರಮೇಶ್ ಗೌಡ ಪಜಿಮಣ್ಣು ಹಾಗೂ ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಅಂಬಟ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಉಮೇಶ್ ಜಿ. ಸ್ವಾಗತಿಸಿದರು. ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ ವಂದಿಸಿದರು. ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here