ಅಂಡರ್ 19ರ ರಾಜ್ಯ ಬಾಲಕಿಯರ ಕ್ರಿಕೆಟ್ ತಂಡದ ಆಯ್ಕೆ ಟ್ರಯಲ್ಸ್-ಸಂಭವನೀಯ ಪಟ್ಟಿಯಲ್ಲಿ ಪುತ್ತೂರಿನ ಏಂಜಲಿಕಾ, ಶ್ರೀಶ, ಅನಘ

0

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಪ್ರಸ್ತುತ ಕಾಲಘಟ್ಟದಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವು ಅದ್ವಿತೀಯ ಸಾಧನೆಯೊಂದಿಗೆ ಮೆರೆಯುತ್ತಿದೆ. ಮಾತ್ರವಲ್ಲ ಮಹಿಳೆಯರ ತಂಡವೂ ಅನೇಕ ಪ್ರತಿಭಾನ್ವಿತರನ್ನು ಒಳಗೊಂಡು ಸಾಧನೆಗೈಯುತ್ತಿದೆ. ದೇವರು ಅನುಗ್ರಹಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅದರಲ್ಲೂ ಮುತ್ತಿನ ನಗರಿ ಪುತ್ತೂರಿನಿಂದ ಮೂವರು ಹುಡುಗಿಯರು ಅಂಡರ್ 19ರ ವಯೋಮಿತಿಯ ರಾಜ್ಯ ಮಹಿಳಾ ತಂಡಕ್ಕೆ ಅರ್ಹತೆ ಪಡೆದರೆ ಅತಿಶಯೋಕ್ತಿಯೇನಲ್ಲ.


ಹೌದು ಅವರೇ ಪುತ್ತೂರಿನ ಕ್ರಿಕೆಟ್ ರತ್ನಗಳು ಏಂಜಲಿಕಾ ಮೆಲಾನಿ ಪಿಂಟೋ, ಶ್ರೀಶ ಆರ್‌ಎಸ್ ಹಾಗೂ ಅನಘ ಕೆ.ಎನ್. ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ(ಕೆಎಸ್‌ಸಿಎ)ಯು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಡರ್ 19 ವಯೋಮಿತಿಯ ರಾಜ್ಯ ಬಾಲಕಿಯರ ಕ್ರಿಕೆಟ್ ತಂಡದ ಅಂತಿಮ 15 ಸದಸ್ಯರ ಬಳಗದ ಆಯ್ಕೆಗಾಗಿ ಸುಮಾರು 50 ಮಂದಿ ಸಂಭವನೀಯ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಂಭವನೀಯ ಪಟ್ಟಿಯಲ್ಲಿ ಪುತ್ತೂರಿನ ಈ ಮೂರು ಮಂದಿ ಕ್ರಿಕೆಟ್ ಪಟುಗಳು ಗುರುತಿಸಿಕೊಂಡಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಬಾಲಕಿಯರ ಕ್ರಿಕೆಟ್ ತಂಡಕ್ಕೆ ಅರ್ಹತೆ ಗಿಟ್ಟಿಸಲು ಅಭ್ಯಾಸ ನಿರತ ಪಂದ್ಯದಲ್ಲಿ ಕಠಿಣ ತರಬೇತಿಯಲ್ಲಿ ನಿರತರಾಗಿದ್ದಾರೆ.


ಮೂವರೂ ಪ್ರತಿಭಾನ್ವಿತರಿವರು:
ಏಂಜಲಿಕಾ ಮೆಲಾನಿ ಪಿಂಟೋರವರು ಎಡಗೈ ಬ್ಯಾಟರ್ ಆಗಿ, ಅನಘ ಕೆ.ಎನ್‌ರವರು ಎಡಗೈ ವೇಗದ ಬೌಲರ್ ಆಗಿ, ಶ್ರೀಶ ಆರ್.ಎಸ್‌ರವರು ಬಲಗೈ ಅಲೌರೌಂಡ್ ಬ್ಯಾಟರ್ ಆಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಬ್ರಹ್ಮಾವರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಅಂಡರ್ 14 ಮತ್ತು ಅಂಡರ್ 17ರ ವಯೋಮಿತಿಯ ಬಾಲಕ-ಬಾಲಕಿಯರ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅಂಡರ್ 17 ವಯೋಮಿತಿಯ ಪಂದ್ಯದಲ್ಲಿ ಏಂಜಲಿಕಾ ಮೆಲಾನಿ ಪಿಂಟೋರವರ ನಾಯಕತ್ವದ ಶ್ರೀಶ ಹಾಗೂ ಅನಘರವರನ್ನೊಳಗೊಂಡ ದಕ್ಷಿಣ ಕನ್ನಡ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಾಧನೆ ಮೆರೆದಿದ್ದರು.


ರಾಜ್ಯ/ಭಾರತ ತಂಡದಲ್ಲಿ ಗುರುತಿಸಿಕೊಳ್ಳಲಿ:
ಬಹಳ ವರ್ಷಗಳ ಹಿಂದೆ ದಿ.ಗಣಪತಿ ನಾಯಕ್‌ರವರು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಹಾಗೂ ವೇಗದ ಬೌಲರ್ ಜೂಲನ್ ಗೋಸ್ವಾಮಿರವರನ್ನೊಳಗೊಂಡ ರೈಲ್ವೇಸ್ ತಂಡವು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಆಡಿರುವುದನ್ನು ನೆನಪಿಸಿಕೊಳ್ಳಬಹುದು. ಹೊರ ರಾಜ್ಯದ ಕ್ರಿಕೆಟಿಗರು ಪುತ್ತೂರಿಗೆ ಬಂದು ಆಡಿರುವುದು ಬಿಟ್ರೆ ಪುತ್ತೂರಿನವರೇ ರಾಜ್ಯ ತಂಡದಲ್ಲಿ ಅಥವಾ ಭಾರತ ತಂಡದ ಭಾಗವಾದಾಗ ಪುತ್ತೂರಿಗೆ ಬಹಳ ಹೆಮ್ಮೆ ಎನಿಸುತ್ತದೆ. ಈ ನಿಟ್ಟಿನಲ್ಲಿ ಈ ಮೂವರು ಬಾಲಕಿಯರಾದ ಕೊಂಬೆಟ್ಟು ಎಲ್ಯಾಸ್ ಪಿಂಟೋ(ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ) ಹಾಗೂ ಮೋಲಿ ಫೆರ್ನಾಂಡೀಸ್‌ರವರ ಪುತ್ರಿ ಏಂಜಲಿಕಾ ಮೆಲಾನಿ, ಎಪಿಎಂಸಿ ನಿವಾಸಿ ರವಿಚಂದ್ರ ಹಾಗೂ ಶ್ವೇತರವರ ಪುತ್ರಿ ಶ್ರೀಶ ಆರ್‌ ಎಸ್ ಹಾಗೂ ಮರೀಲು ನಿವಾಸಿ ನವೀನ್ ಕುಮಾರ್ ಹಾಗೂ ಕವಿತಾ ಡಿ.ರವರ ಪುತ್ರಿ ಅನಘ ಕೆ.ಎನ್‌ರವರು ತಮ್ಮ ಸಾಧನೆಯ ಮೂಲಕ ರಾಜ್ಯ ಹಾಗೂ ಭಾರತ ತಂಡದ ಕದ ತಟ್ಟಲಿ ಎಂಬುದೇ ಹಾರೈಕೆಯಾಗಿದೆ.


ಅಪ್ಪನೇ ಕೋಚ್..
ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿರುವ ಏಂಜಲಿಕಾ ಮೆಲಾನಿ ಪಿಂಟೋರವರ ಸಾಧನೆಯ ಹಿಂದೆ ತನ್ನ ಅಪ್ಪ ಎಲ್ಯಾಸ್ ಪಿಂಟೋರವರೇ ಬಾಲ್ಯದ ಕೋಚ್ ಆಗಿರುವುದು ವಿಶೇಷವೇ. ತನ್ನ ಪುತ್ರಿಯಲ್ಲದೆ ಪುತ್ರ ಕ್ರಿಸ್ ಏಂಜೆಲೋ ಕೂಡ ಓರ್ವ ಪ್ರತಿಭಾನ್ವಿತ ಎಡಗೈ ಬ್ಯಾಟರ್ ಆಗಿದ್ದು ಜೊತೆಗೆ ಶ್ರೀಶ ಆರ್‌ ಎಸ್ , ಅನಘ ಕೆ.ಎನ್‌ರವರಿಗೂ ಕೋಚ್ ಆಗಿದ್ದಾರೆ. ಯಾಕೆಂದರೆ ಎಲ್ಯಾಸ್ ಪಿಂಟೋರವರು ತನ್ನ ಕಾಲೇಜು ದಿನಗಳಲ್ಲಿ ಅಲೌರೌಂಡ್ ಆಟದಿಂದ ಯೂನಿಯನ್ ಕ್ರಿಕೆಟರ‍್ಸ್‌ನಿಂದ ಕೆಎಸ್‌ಸಿಎ ಮಂಗಳೂರು ವಲಯವನ್ನು ಪ್ರತಿನಿಧಿಸಿದ್ದು ಅಲ್ಲದೆ ಕೆಎಸ್‌ಸಿಎ ನಡೆಸುವ ಡಿವಿಷನ್ ಲೀಗ್, ಸೂಪರ್ ಡಿವಿಷನ್ ಕ್ರಿಕೆಟ್‌ನಲ್ಲಿ ಆಡಿದ್ದರು.

ಶಾಸಕ ಅಶೋಕ್ ರೈಯವರಿಂದ ಅಭಿನಂದನೆ..
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಿರತರಾಗಿರುವ ಏಂಜಲಿಕಾ ಮೆಲಾನಿ, ಶ್ರೀಶ ಆರ್‌ ಎಸ್ ಹಾಗೂ ಅನಘ ಕೆ.ಎನ್‌ರವರನ್ನು ಭೇಟಿಯಾದ ಶಾಸಕ ಅಶೋಕ್ ಕುಮಾರ್ ರೈಯವರು ಈ ಮೂವರು ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿದ್ದಾರೆ ಮಾತ್ರವಲ್ಲ ಶೀಘ್ರ ರಾಜ್ಯ, ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಪುತ್ತೂರಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here