ಕರಾವಳಿ ಕ್ರೈಸ್ತರ ಕುಟುಂಬದ ಹಬ್ಬ-ಮೊಂತಿ ಫೆಸ್ತ್

0

ಮೊಂತಿ ಹಬ್ಬವು ಕುಟುಂಬದ ಒಗ್ಗಟ್ಟು, ಪ್ರೀತಿ, ಗೌರವದ ಪ್ರತೀಕ-ವಂ|ರೂಪೇಶ್ ತಾವ್ರೋ

ಪುತ್ತೂರು:ಕುಟುಂಬದಲ್ಲಿ ಜೀವಿಸುವಾಗ ನಾವು ಪರಸ್ಪರ ವಿಧೇಯತೆ, ಗೌರವವನ್ನು ಅನುಸರಿಸಿದಾಗ ಆ ಕುಟುಂಬವನ್ನು ದೇವರು ಆಶೀರ್ವದಿಸುತ್ತಾನೆ. ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ನಮ್ಮೆಲ್ಲರ ತಾಯಿಯಾಗಿದ್ದಾರೆ. ಮೇರಿ ಮಾತೆಯನ್ನು ಕುಟುಂಬದ ಮಾತೆ ಎಂದು ಪೂಜಿಸಲಾಗುತ್ತಿದ್ದು ಈ ಮೊಂತಿ ಹಬ್ಬವು ಕುಟುಂಬದ ಒಗ್ಗಟ್ಟು, ಪ್ರೀತಿಯ, ಗೌರವದ ಪ್ರತೀಕವಾಗಿದೆ ಎಂದು ವಂ|ರೂಪೇಶ್ ತಾವ್ರೋರವರು ಹೇಳಿದರು.


ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.8ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ‘ಮೊಂತಿ ಫೆಸ್ತ್(ತೆನೆ ಹಬ್ಬ)-ಕುಟುಂಬದ ಹಬ್ಬ’ ಆಚರಣೆಯ ಸಂದರ್ಭ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಅವರು ಹಬ್ಬದ ಸಂದೇಶ ನೀಡಿದರು. ಪ್ರಸ್ತುತ ವಿದ್ಯಾಮಾನದಲ್ಲಿ ಹೆಣ್ಮಕ್ಕಳ ಮೇಲೆ ಅನೇಕ ಶೋಷಣೆಗಳಾಗುತ್ತಿವೆ. ಸ್ತ್ರೀ ಕುಟುಂಬದ ಕಣ್ಣು. ಒಂದು ಕುಟುಂಬದ ಹೆಣ್ಮಗಳು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಹೀಗೆ ಹಲವಾರು ರೀತಿಯಲ್ಲಿ ಸೇವೆಯನ್ನು ಕಾಣಬಹುದಾಗಿದೆ. ಯಾರು ಹೆತ್ತ ತಾಯಿಯನ್ನು ಗೌರವದಿಂದ ನೋಡುವುದಿಲ್ಲವೋ ಆತನ ಕುಟುಂಬ ವಿನಾಶದತ್ತ ಸಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಕುಟುಂಬದಲ್ಲಿ ಹಿರಿಯರ ಬೆರೆಯುವಿಕೆಯನ್ನು ದೂರಗೊಳಿಸಿದ್ದರಿಂದ ಗಂಡ-ಹೆಂಡತಿ ನಡುವೆ ವಿಚ್ಚೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದ ಅವರು ಭೂಮಿ ನಮಗೆ ತಾಯಿ ಇದ್ದಾಗೆ. ಈ ಭೂಮಿಯಲ್ಲಿ ನಮಗೆ ಸಿಗುವ ಬೆಳೆಯು ನಮ್ಮ ಜೀವನದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮೇರಿ ಮಾತೆಯು ಸಾಧಾರಣ ಸ್ತ್ರೀ ಆಗಿರದೆ ದೇವರ ಅಪ್ಪಣೆಯಂತೆ ಯೇಸು ಕ್ರಿಸ್ತರನ್ನು ತನ್ನ ಪುತ್ರನಾಗಿ ಜನಿಸಲು ಸಂಪೂರ್ಣ ಒಪ್ಪಿಗೆ ಸೂಚಿಸಿ ದೇವರ ಆಜ್ಞೆಯನ್ನು ಪಾಲಿಸಿದ ಮೇರಿ ಮಾತೆಯು ಕ್ರೈಸ್ತ ಬಾಂಧವರಿಗೆ ಆದರ್ಶಪ್ರಾಯರಾಗಿದ್ದಾರೆ. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಹೊಸ ಅಕ್ಕಿ ಊಟವನ್ನು ಸೇವನೆ ಮಾಡುವ ಮೂಲಕ ಕುಟುಂಬವು ಸಮೃದ್ಧಿಗೊಳ್ಳುವುದು ಎಂದು ಅವರು ಹೇಳಿದರು.


ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಧರ್ಮಗುರುಗಳಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಲೋಹಿತ್ ಅಜೇಯ್ ಮಸ್ಕರೇನ್ಹಸ್, ವಂ|ಮ್ಯಾಕ್ಸಿಂ ಡಿ’ಸೋಜರವರು ಭಕ್ತಾಧಿಗಳೊಂದಿಗೆ ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು. ಅದರಂತೆ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಜೋನ್ ಬ್ಯಾಪ್ಟಿಸ್ಟ್ ಮೊರಾಸ್, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ವಂ|ಡೆನ್ಜಿ ಮಾರ್ಟಿಸ್, ವಂ|ಗಿಲ್ಬರ್ಟ್ ಮಸ್ಕರೇನ್ಹಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜರವರೊಂದಿಗೆ ಹಬ್ಬದ ಬಲಿಪೂಜೆಗಳು ನೆರವೇರಿದವು. ಆಯಾ ಚರ್ಚ್‌ನ ಧರ್ಮಭಗಿನಿಯರು, ಪಾಲನಾ ಸಮಿತಿ, ವಾಳೆ ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ, ಸ್ಯಾಕ್ರಿಸ್ಟಿಯನ್, ಸಂಘ-ಸಂಸ್ಥೆಗಳು ಸಹಕರಿಸಿದರು.


ಹಬ್ಬದಿಂದ ಕೌಟುಂಬಿಕ ಸಾಮರಸ್ಯ:
ಹಬ್ಬದ ಇನ್ನೊಂದು ವಿಶೇಷವೆಂದರೆ ‘ಹೊಸ ಅಕ್ಕಿ ಊಟ’ ನವ ದಂಪತಿಗಳಿಗೆ, ಒಂದು ವರ್ಷ ತುಂಬುವ ಮಗುವಿಗೆ ಈ ಹಬ್ಬ ಇನ್ನೂ ವಿಶೇಷವಾಗಿದೆ. ಪೂರ್ವಿಕರಿಂದಲೇ ಅಚರಿಸುವ ಈ ಹಬ್ಬವು ತನ್ನದೇ ವಿಶಿಷ್ಟ ಸಂಸ್ಕೃತಿಯಿಂದ, ಸಂಪ್ರದಾಯವನ್ನು ಎತ್ತಿ ಹಿಡಿಯಲಾಗುತ್ತದೆ. ಚರ್ಚುಗಳಲ್ಲಿ ಭಕ್ತಿಪೂರ್ವಕವಾಗಿ ತೆನೆಯನ್ನು ಮೆರವಣಿಗೆಯ ಮೂಲಕ ದೇವಾಲಯದ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದದ ಬಳಿಕ ಮನೆಗೆ ತಂದು ಮೇಣದ ಭತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸಸಂಖ್ಯೆ ಆಧಾರದಲ್ಲಿ ಪುಡಿಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲಾ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲಾ ಅಡುಗೆ ರುಚಿಗಳು ಸಸ್ಯಹಾರವಾಗಿದ್ದು ಸಾಂಬಾರು ಅಥವಾ ಪದಾರ್ಥಗಳು ಬೆಸ ಸಂಖ್ಯೆ ಆಧಾರದಲ್ಲಿ ಇರುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಕೌಟುಂಬಿಕ ಸಾಮರಸ್ಯವನ್ನು ಈ ಹಬ್ಬದ ಮೂಲಕ ಸಾರಲಾಗುತ್ತದೆ.


ಭತ್ತದ ತೆನೆಗಳ ಪವಿತ್ರೀಕರಣ..
ರೈತರು ಬೆಳೆಸಿದ ಭತ್ತದ ತೆನೆ(ಹೊಸ ಅಕ್ಕಿ ಊಟ)ಗಳನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯ. ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ದಿವ್ಯ ಬಲಿಪೂಜೆಯ ಬಳಿಕ ಹಂಚಲಾಯಿತು ಹಾಗೂ ಜೀವನದುದ್ದಕ್ಕೂ ಬಾಳಿನಲ್ಲಿ ಸಿಹಿಯು ಮನೆ ಮಾಡಲಿ ಎಂದು ಸಿಹಿಯ ಪ್ರತೀಕವಾದಂತಿರುವ ಕಬ್ಬನ್ನು ಹಬ್ಬದ ಸಂದರ್ಭದಲ್ಲಿ ಆಯಾ ಚರ್ಚ್‌ನಲ್ಲಿ ವಿತರಿಸುವುದು ಸಂಪ್ರದಾಯವಾಗಿದ್ದು, ಅದರಂತೆ ತಾಲೂಕಿನ ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ಸಿಹಿತಿಂಡಿ ಹಾಗೂ ಕಬ್ಬನ್ನು ವಿತರಿಸಲಾಯಿತು.

ಮೇರಿ ಮಾತೆಗೆ ಹೂ ಅರ್ಪಣೆ..
ಮೊಂತಿ ಫೆಸ್ತ್-ಕುಟುಂಬದ ಹಬ್ಬ ಆಚರಣೆಯು ಒಂಭತ್ತು ದಿವಸದ ಹಿಂದೆಯೇ ಆರಂಭಗೊಂಡಿದ್ದು, ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯ ಜೊತೆಗೆ ಪುಟ್ಟ ಮಕ್ಕಳು ಮೇರಿ ಮಾತೆಗೆ ಹೂಗಳನ್ನು ಅರ್ಪಿಸುವ ಕಾರ‍್ಯ ಪ್ರಾರಂಭಗೊಂಡಿತ್ತು. ಆಯಾ ಚರ್ಚ್‌ಗಳಲ್ಲಿ ಪುಟ್ಟ ಮಕ್ಕಳು ಪ್ರಕೃತಿಯಲ್ಲಿ ದೊರೆಯುವ ಚೆಂದದ ಹೂಗಳನ್ನು ಹೆಕ್ಕಿ, ಆರಿಸಿ ಬುಟ್ಟಿಯಲ್ಲಿ ಸೊಗಸಾಗಿ ಜೋಡಿಸಿ ಚರ್ಚ್‌ಗೆ ಬಂದು ತಾವು ತಂದ ಹೂಗಳನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಮೇರಿ ಮಾತೆಗೆ ಅರ್ಪಿಸುವುದು ಸಂಪ್ರದಾಯವಾಗಿದೆ. ಅದರಂತೆ ಮಕ್ಕಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇರಿ ಮಾತೆಗೆ ಹಬ್ಬದ ದಿನದಂದು ಹೂವುಗಳನ್ನು ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here