ಸುದಾನ ಶಾಲೆಯಲ್ಲಿ ’ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಜಾಗೃತಿ ಸಂಘ ಮತ್ತು ಸುದಾನ ಶಾಲಾ ವಿಜ್ಞಾನ ಸಂಘ ’ಅವನಿ’ಯು ಜಂಟಿಯಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಆತ್ಮಹತ್ಯೆ ವಿರೋಧಿ ದಿನವಾದ ಸೆಪ್ಟಂಬರ್ 10 ರಂದು ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಆಯೋಜಿಸಿತ್ತು.ಸುದಾನ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಮನೋಹರ್ ರವರು ದೀಪೋಜ್ವಲನೆಯನ್ನು ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‌

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ನಿವೃತ್ತ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆ ಮಂಗಳೂರು ಜಯರಾಮ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ’ದುಶ್ಚಟಗಳಿಗೆ ಬಲಿಯಾಗುವುದರಿಂದ ಅಮರಿಕೊಳ್ಳುವ ತೀವ್ರತರವಾದ ರೋಗ ರುಜಿನಗಳ ಬಗ್ಗೆ ಮತ್ತು ಕೌಟುಂಬಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಉಂಟಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ಜನಜಾಗೃತಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ದುಶ್ಚಟಗಳಿಂದ ದೂರವುಳಿದು, ನಾಯಕರಾಗಿ ಬೆಳೆಯುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಶಿಕ್ಷಣವು ಇದಕ್ಕೆ ಪೂರಕವಾದ ವಾತಾವರಣವನ್ನು ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಜನಜಾಗೃತಿ ಸಂಘದ ಸದಸ್ಯ ಲೋಕೇಶ್ ಹೆಗ್ಡೆ ಯವರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ದುಶ್ಚಟಗಳಿಂದ ದೂರವಿರುವಂತೆ ಪ್ರಮಾಣವಚನ ನೀಡಿಸಿ, ವಂದಿಸಿದರು. ಜನಜಾಗೃತಿ ಸಂಘದ ಸದಸ್ಯೆ ಉಷಾಲತಾ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಧ. ಗ್ರಾ ಯೋಜನೆಯ ಸದಸ್ಯೆ ಪೂಜಾ, ಸುದಾನ ವಿಜ್ಞಾನ ಸಂಘ ’ಅವನಿ’ ಯ ಸಂಯೋಜಕಿ ಪ್ರತಿಮಾ ಎನ್.ಜಿ ಉಪಸ್ಥಿತರಿದ್ದರು. ಸಹಶಿಕ್ಷಕರಾದ ಪೂಜಾ, ಶ್ರೀಮತಿ. ರಂಜಿತಾ ಸಹಕರಿಸಿದರು. ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here