ಆಧಾರ್ ಸೀಡ್, ಹಕ್ಕುಪತ್ರ, ಗರುಡ ಆಪ್, ಭೂಮಿಮ ಬೆಳೆ ಸಮೀಕ್ಷೆ, ಕೃಷಿ ಗಣತಿ ಮೊದಲಾದ ಸೇವೆಗಳು ಸಿಗೋದು ಡೌಟ್!
ಬೆಂಗಳೂರು/ಪುತ್ತೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ (ರಿ.) ಸೆ.22ರಂದು ಚಿತ್ರದುರ್ಗದಲ್ಲಿ ನಡೆಸಿದ ರಾಜ್ಯ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯದಂತೆ ಗ್ರಾಮ ಆಡಳಿತ ಅಧಿಕಾರಿಗಳು ನಾಳೆಯಿಂದ ಅಂದರೆ ಸೆ.26ರಿಂದ ಅನಿರ್ಧಾಷ್ಟವಧಿ ಮುಷ್ಕರಕ್ಕಿಳಿಯಲಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮ ಮಟ್ಟದಲ್ಲಿ ಹಲವಾರು ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ.
ಈ ಕಾರ್ಯಕಾರಿಣಿಯಲ್ಲಿ 31 ಜಿಲ್ಲೆಯ ಸಂಘದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಈ ನಿರ್ಣಯದನ್ವಯ ತಮ್ಮ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಮುಷ್ಕರ ನಡೆಸಲಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಈ ಮಷ್ಕರದಿಂದ ಎಲ್ಲಾ ಬಗೆಯ ಸರಕಾರಿ ಸೇವೆಗಳಿಗೆ ಸಂಬಂಧಿಸಿದ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಮೂಲಕ ನೀಡಲಾಗುತ್ತಿರುವ ಸೇವೆಗಳು ಸ್ಥಗಿತಗೊಳ್ಳಲಿವೆ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವ್ಯಾಪ್ತಿಗೆ ಬರುವ ಇತರೇ ಸರಕಾರಿ ಸೇವೆಗಳೂ ಸ್ಥಗಿತಗೊಳ್ಳುವ ಸಾದ್ಯತೆಗಳಿವೆ.
ಈ ಎಲ್ಲಾ ವೆಬ್/ಮೊಬೈಲ್ ತಂತ್ರಾಂಶ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ:
ಸಂಯೊಜನೆ
ಇ-ಆಫೀಸ್
ಆಧಾರ್ ಸೀಡ್
ಲ್ಯಾಂಡ್ ಬೀಟ್
ಬಗೈರ್ ಹುಕುಂ
ಹಕ್ಕುಪತ್ರ
ಪೌತಿ ಆಂದೋಲನ ಆಪ್
ಸಂರಕ್ಷಣೆ (ಬೆಳೆ ಕಟಾವು ಮೊಬೈಲ್ ಆಪ್)
ನವೋದಯ
ಗರುಡ ಆಪ್
ಭೂಮಿ
ವೋಟರ್ ಹೆಲ್ಪ್ ಲೈನ್
ಬೆಳೆ ಸಮೀಕ್ಷೆ
ಬೆಳೆ ಸಮೀಕ್ಷೆಯ ಅನುಮೋದನೆ ವೆಬ್ ಆಪ್
ಪಿಎಂ ಕಿಸಾನ್ ವೆಬ್ ಆಪ್
ಕೃಷಿ ಗಣತಿ
ನೀರಾವರಿ ಗಣತಿ
ದಿಶಾಂಕ್
ಇವರ ಪ್ರಮುಖ ಬೇಡಿಕೆಗಳೇನು?
*ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ
*ಸುಸಜ್ಜಿತವಾದ ಕಚೇರಿ, ಮೊಬೈಲ್ ಫೋನ್, ಲ್ಯಾಪ್ ಟಾಪ್ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ
*ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ
*ಕಂದಾಯ ಇಲಾಖೆಯ ನೌಕರರ ಸೇವಾ ವಿಷಯಗಳಾದ ಪ್ರೊಬೆಷನರಿ, ಟೈಮ್ ಬಾಂಡ್, ವೈದ್ಯಕೀಯ ವೆಚ್ಚದ ಮರುಪಾವತಿ, ಪದೋನ್ನತಿ ವಿಷಯಗಳಲ್ಲಿ ಸಕಾಲ ಮಾದರಿಯ ವಿಧಾನ ಅನುಸರಿಸುವ ಬಗ್ಗೆ
*ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡುವ ಬಗ್ಗೆ
*ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ
*ಮನೆ ಹಾನಿ ಪ್ರಕರಣಗಳ ಜವಾಬ್ದಾರಿಯಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡುವ ಬಗ್ಗೆ
*ಪ್ರಯಾಣ ಭತ್ಯೆ ದರವನ್ನು 500 ರೂಪಾಯಿಗಳಿಂದ 3000 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುವ ಬಗ್ಗೆ