ವರದಿಯಿಂದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ :ಕಿಶೋರ್ ಶಿರಾಡಿ
* ಕಡಬ ಉಪತಹಶೀಲ್ದಾರ್ ಶಾಯಿದುಲ್ಲಾ ಖಾನ್ ಮೂಲಕ ಮನವಿ
* ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆಗೆ ನಿರ್ಧಾರ
* ನ.12ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ
ನೀತಿ ಸಂಹಿತೆ-ಬೃಹತ್ ಪ್ರತಿಭಟನೆಗೆ ಅಡ್ಡಿ
ಕಸ್ತೂರಿರಂಗನ್ ವರದಿ ವಿರುದ್ದ ಸೆ.30ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಗಳನ್ನು ಮಾಡಲಾಗಿತ್ತು. ಆದರೆ ನೀತಿ ಸಂಹಿತೆ ಇದ್ದ ಕಾರಣ ಆಡಳಿತ ಸೌಧದ ಎದುರು ನಡೆಸಬೇಕಾಗಿದ್ದ ಪ್ರತಿಭಟನೆ ರದ್ದುಗೊಳಿಸಿ, ಎಪಿಎಂಸಿ ಕಟ್ಟಡದ ಬಳಿ ನಡೆಸಲಾಯಿತು. ನೀತಿ ಸಂಹಿತೆ ಕಾರಣ ಪ್ರತಿಭಟನೆ ಇಲ್ಲ, ಮನವಿ ಮಾತ್ರ ಕೊಡುವುದು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗಿದ್ದರಿಂದ ಜನರು ಆಗಮಿಸಿದ್ದು ವಿರಳವಾಗಿತ್ತು.
ಕಡಬ: ಪಶ್ಚಿಮಘಟ್ಟ ಸೂಕ್ಷ್ಮ ವಲಯ ಘೋಷಣೆ ಕಸ್ತೂರಿ ರಂಗನ್ ವರದಿಯ ಬಗ್ಗೆ ಕರಡು ಅಧಿಸೂಚನೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು , ಕಸ್ತೂರಿ ರಂಗನ್ ವರದಿಯಿಂದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ. ವರದಿ ಅನುಷ್ಠಾನವಾದರೆ ದ.ಕ ಜಿಲ್ಲೆಯ ಮುಕ್ಕಾಲು ಭಾಗದ ಜನ ಬೀದಿಗೆ ಬರಬೇಕಾಗುತ್ತದೆ, ಈ ರೈತ ವಿರೋಧಿ ಜನವಿರೋಧಿ ವರದಿಯನ್ನು ಕೈಬಿಡಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದರು.
ಸೆ.30ರಂದು ಕಡಬದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿತವಾದ ಗ್ರಾಮಗಳಲ್ಲಿ ಈಗಾಗಲೇ ಲಕ್ಷಾಂತರ ಜನರ ಕೃಷಿ ಭೂಮಿಗೆ ನೀಡಿರುವ ಹಕ್ಕು ಪತ್ರವನ್ನು ಕಸಿದುಕೊಳ್ಳುವ ಷಡ್ಯಂತರ ನಡೆಯುತ್ತಿದೆ. ಆ ಹಕ್ಕು ಪತ್ರಗಳು ಕಾನೂನು ಪ್ರಕಾರ ಇಲ್ಲ ಎಂದು ಹೇಳುವ ಅಧಿಕಾರಿಗಳು ಲಂಚ ಪಡೆದು ಹಕ್ಕು ಪತ್ರ ನೀಡಿದ್ದಾರೆ. ಈಗ ಅದನ್ನು ರೈತರಿಗೆ ಕಾನೂನಾತ್ಮಕವಾಗಿ ಮಾಡಿಕೊಡುವುದು ನಿಮ್ಮ ಧರ್ಮವಾಗಿದೆ, ನೀವು ಮಾಡಿದ ತಪ್ಪಿಗೆ ರೈತರನ್ನು ಬಲಿ ಕೊಡಬೇಡಿ ಎಂದು ಹೇಳಿದರು. ಈಗಾಗಲೇ ಉದ್ಧೇಶಿತ ಪ್ರದೇಶಗಳಲ್ಲಿ ಭೂಪರಿವರ್ತನೆ, ಕೋವಿ ಪರವಾನಿಗೆಗಳನ್ನು ನಿಲ್ಲಿಸಿ ರೈತರನ್ನು ಕೀಳು ಮಟ್ಟದಲ್ಲಿ ನೋಡುತ್ತಿದ್ದೀರಿ, ರೈತಾಪಿ ಜನ ವಿದ್ಯಾವಂತ ಸುಶಿಕ್ಷಿತರಿದ್ದೇವೆ, ನಮ್ಮನ್ನು ಮೋಸ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ರೈತರ ಉಳಿವಿಗೆ ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ, ಪರಿಸರ ಸಂರಕ್ಷಣ ವರದಿಯನ್ನು ಕೃಷಿ ಭೂಮಿಗೆ ತೊಂದರೆಯಾಗದಂತೆ, ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗದಂತೆ, ಪಶ್ಚಿಮ ಘಟ್ಟಕ್ಕೆ ಮಾತ್ರ ಅನ್ವಯವಾಗುವ ರೀತಿಯಲ್ಲಿ ಅನುಷ್ಠಾನ ಮಾಡಬೇಕು, ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ನ.12ರಂದು ಕುಕ್ಕೇ ಸುಬ್ರಹ್ಮಣ್ಯದಲ್ಲಿ 50 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕಿಶೋರ್ ಹೇಳಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖ್ ದಾಮೋದರ ಗುಂಡ್ಯ ಮಾತನಾಡಿ ಕಳೆದ ಹನ್ನೆರಡು ವರ್ಷಗಳಿಂದ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿರಂಗನ್ ವರದಿ ಘಟ್ಟ ಹಾಗೂ ಕರಾವಳಿಯ ಭಾಗದ ಜನರಿಗೆ ಶಾಪವಾಗಿ ಕಾಡುತ್ತಿವೆ, ಉದ್ದೇಶಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದರೆ ಕೇಂದ್ರದ ವರ್ಕಿಂಗ್ ಕಮಿಟಿಯ ಅನುಮತಿ ಪಡೆಯಬೇಕಾಗುತ್ತದೆ. ಇದನ್ನೆಲ್ಲ ಮಾಡಲು ಸಾಧ್ಯವಾಗದ ರೀತಿಯಲ್ಲಿ ನೋಡಿಕೊಂಡು ರೈತರು ತಾವಾಗಿಯೇ ಒಕ್ಕಲೆದ್ದು ಹೋಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಬಳಿಕ ಕಡಬ ಉಪ ತಹಸೀಲ್ದಾರ್ ಶಾಯಿದುಲ್ಲಾ ಖಾನ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮಿರಾ ಸಾಹೇಬ್, ಪ್ರಮುಖರಾದ ಅಚ್ಚುತ ಗುಂಡ್ಯ, ಅಶೋಕ್ ಕುಮಾರ್ ಸುಬ್ರಹ್ಮಣ್ಯ, ಹರೀಶ್ ಕಲ್ಲುಗುಂಡಿ, ಯಶೋಧರ ಕೊಣಾಜೆ, ಮೇದಪ್ಪ ಗೌಡ ಡೆಪ್ಪುಣಿ, ಸನ್ನಿ ಉದನೆ, ಗಣೇಶ್ ಅನಿಲ, ಪ್ರಸನ್ನಕುಮಾರ್ ಮಣಿಬಾಂಢ ಮತ್ತಿತರರು ಭಾಗವಹಿಸಿದ್ದರು.