ವಿಟ್ಲ: ಬಂಟ್ವಾಳ ತಾಲೂಕಿನ ತುಂಬೆ, ಮಾರಿಪಳ್ಳ, ಭಾಗದ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿರುವ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆ ತಂಡ ಒಟ್ಟು 20 ಬೋಟ್‌ಗಳನ್ನು ವಶಪಡಿಸಿಕೊಂಡಿದೆ.
ದ.ಕ.ಜಿಲ್ಲಾಧಿಕಾರಿ ಆದೇಶದಂತೆ ಗಣಿ ಇಲಾಖೆಯ ತಂಡವು, ಬಂಟ್ವಾಳ ಕಂದಾಯ ಇಲಾಖೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ನೆರವು ಪಡೆದು , ಕಾರ‍್ಯಾಚರಣೆ ನಡೆಸಿತ್ತು. ದಾಳಿಯ ವೇಳೆ ಸುಮಾರು 20 ಬೋಟ್ ಗಳನ್ನು ವಶಪಡಿಸಿಕೊಂಡು, ಮಂಗಳೂರು ತಾಲೂಕಿನ ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ.
ವಶಪಡಿಸಿಕೊಂಡ ಯಾವುದೇ ಬೋಟ್‌ಗಳಲ್ಲಿ ಮರಳು ಪತ್ತೆಯಾಗಿಲ್ಲ. ಜೊತೆಗೆ ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ ಗಿರೀಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್, ಮಂಗಳೂರು ಕಂದಾಯ ಇಲಾಖೆಯ ಪ್ರಶಾಂತ್ ಪಾಟೀಲ್, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಕರಣಿಕರು ಹಾಗೂ ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ಭಾಗವಹಿಸಿತ್ತು.