ಪುಣಚ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದಲ್ಲಿ ನವರಾತ್ರಿ ಉತ್ಸವ- ಧಾರ್ಮಿಕ ಸಭೆ

0

ಪುಣಚ: ಪುಣಚ ದೇವಿನಗರ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಶ್ರೀ ಆದಿಶಕ್ತಿ ಮಹಮ್ಮಾಯಿ ಆರಾಧನಾ ಮಂದಿರದಲ್ಲಿ ನವರಾತ್ರಿ ಉತ್ಸವ ಅ.3ರಿಂದ ಆರಂಭಗೊಂಡಿದ್ದು ಅ.11ವರೆಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಅ.5ರಂದು ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಧಾರ್ಮಿಕ ಸಭೆ:
ಮುಖ್ಯ ಅತಿಥಿಯಾಗಿ ಧಾರ್ಮಿಕ ಉಪನ್ಯಾಸ ನೀಡಿದ ಬೆಟ್ಟಂಪಾಡಿ ಸ.ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮನಾಯ್ಕ ಕೆಮ್ಮಾಯಿ ಮಾತನಾಡಿ ಶ್ರದ್ಧೆ ಭಕ್ತಿಯಿಂದ ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳಿಗೆ ಅದರದ್ದೇ ಆದ ಮಹತ್ವವಿದೆ. ಜೀವನದಲ್ಲಿ ಒಳ್ಳೆಯ ಮೌಲ್ಯವನ್ನು ಅಳವಡಿಸಿಕೊಂಡು ಪರಸ್ಪರ ಮಾನವೀಯತೆಯಿಂದ ಬೆರೆತು ನಾವು ನಮ್ಮ ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು ಎಂದರು.


ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕ ಪೊಯ್ಯಮೂಲೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕಾರ ಪ್ರೋತ್ಸಾಹ ನೀಡಿ ಸಹಕರಿಸುವಂತೆ ತಿಳಿಸಿದರು. ಪುಣಚ ಗ್ರಾ.ಪಂ‌.ಸದಸ್ಯರಾದ ರೇಖಾ ಮಾಯಿಲಮೂಲೆ, ಆನಂದ ನಾಯ್ಕ ತೊಂಡನಡ್ಕ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಲಲಿತ ಅಜ್ಜಿನಡ್ಕ, ಸರೋಜಿನಿ ಆಜೇರುಮಜಲು, ರಾಜೇಶ್ ನಾಯ್ಕ ತೊಂಡನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
2023‌- 24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಗಾಯನ ಅಜಕ್ಕಲ, ಮೇಘಶ್ರೀ ಗುಡ್ಡೆಗದ್ದೆ, ಪಿ.ಯು.ಸಿಯಲ್ಲಿ ದಿಶಾಜ್ಯೋತಿ ಅಜ್ಜಿನಡ್ಕ, ಅಶ್ವತ್ ಕೆಲ್ಲಾಳಿ ಹಾಗೂ ಕೆಲಿಂಜ ಪ್ರಾ.ಶಾಲಾ ಪ್ರಭಾರ ಮುಖ್ಯ ಶಿಕ್ಷಕ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಿಮ್ಮಪ್ಪ ನಾಯ್ಕ ರವರನ್ನು ಶಾಲು ಹಾಕಿ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಬಹುಮಾನ ವಿತರಣೆ:
ನವರಾತ್ರಿ ಉತ್ಸವದ ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಅತಿಥಿಗಳಿಗೆ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೀಕ್ಷಾ, ಅದಿತಿ, ಕಾವ್ಯ ಪ್ರಾರ್ಥಿಸಿದರು. ಸಂಘದ ಭಜನಾ ಸಮಿತಿ ಅಧ್ಯಕ್ಷ ದಿನೇಶ ಬುಡಾಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೇವಿನಗರ ಪ್ರಾ.ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ವಂದಿಸಿದರು. ರೇಷ್ಮಾ ದೇವಿನಗರ, ಕವಿತಾ ಮೊಟ್ಟೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here