ಪುತ್ತೂರು:ಆಟೋ ರಿಕ್ಷಾವೊಂದರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಅಕ್ರಮವಾಗಿ ಗೋವನ್ನು ಸಾಗಾಟ ಮಾಡುತ್ತಿರುವ ಕುರಿತು ಬಜರಂಗದಳ ಸಂಘಟನೆಯಿಂದ ಬಂದ ಮಾಹಿತಿಯಂತೆ ಪೊಲೀಸರು ದರ್ಬೆ ಬೈಪಾಸ್ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ತಡೆದು ಅಪಾಯಕಾರಿ ಸ್ಥಿತಿಯಲ್ಲಿದ್ದ ಗೋವನ್ನು ರಕ್ಷಣೆ ಮಾಡಿ, ರಿಕ್ಷಾ ಚಾಲಕ ಮತ್ತು ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ ಘಟನೆ ಅ.16ರಂದು ನಡೆದಿದೆ.
ಬನ್ನೂರು ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ಇಬ್ರಾಹಿಂ, ಜೊತೆಯಲ್ಲಿದ್ದ ರೆಹಮತ್, ಸಫಿಯಾ ಅವರು ಪರವಾನಿಗೆ ಇಲ್ಲದೆ ಗೋವನ್ನು ಅಕ್ರಮವಾಗಿ ಸಾಗಾಟ ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಸಾಗಾಟ ಮಾಡುತ್ತಿದ್ದವರು ಎಂದು ಆರೋಪಿಸಲಾಗಿದೆ.ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ಅಪಾಯಕಾರಿ ಸ್ಥಿತಿಯಲ್ಲಿ ಗೋವೊಂದನ್ನು ಆಟೋ ರಿಕ್ಷಾದಲ್ಲಿ ಕೊಂಡು ಹೋಗುತ್ತಿರುವುದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ದರ್ಬೆ ಬೈಪಾಸ್ ರಸ್ತೆ ಸರ್ವಿಸ್ಸ್ಟೇಷನ್ ಬಳಿ ಆಟೋ ರಿಕ್ಷಾವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹಸುವೊಂದನ್ನು ರಿಕ್ಷಾದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ.ಪೊಲೀಸರು ವಿಚಾರಣೆ ನಡೆಸಿದಾಗ, ಮುಂಡೂರಿನಿಂದ ಬನ್ನೂರಿಗೆ ಕೊಂಡೊಯ್ಯುವುದಾಗಿ ರಿಕ್ಷಾ ಚಾಲಕ ತಿಳಿಸಿದ್ದಾರೆ.ನಂಬರ್ ಆಧರಿಸಿ ವಿಳಾಸ ಪಡೆದ ಪೊಲೀಸರಿಗೆ ಬೈಕ್ನ ಇನ್ಶ್ಯೂರೆನ್ಸ್ ಲ್ಯಾಪ್ಸ್ ಆಗಿರುವ ಮಾಹಿತಿ ಲಭ್ಯವಾದ ಬೆನ್ನಲ್ಲಿ ಆಟೋ ರಿಕ್ಷಾದ ಜೊತೆ ಬೈಕ್ ಅನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆದರೆ ಗೋ ಸಾಗಾಟಕ್ಕೆ ಯಾವುದೇ ಅನುಮತಿ ಇರದಿರುವುದು ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಗೋವನ್ನು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಇಬ್ರಾಹಿಂ ಮತ್ತು ರಿಕ್ಷಾದಲ್ಲಿದ್ದ ರೆಹಮತ್ ಮತ್ತು ಸಫಿಯಾ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಅಕ್ರಮ ಮತ್ತು ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸಿದ್ದಾರೆ. ಗೋವನ್ನು ಠಾಣೆಯ ಬಳಿ ಕಟ್ಟಿ ಹಾಕಲಾಗಿದೆ.ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ:
ಪ್ರಕರಣದ ಆರೋಪಿಗಳಾದ ಇಬ್ರಾಹಿಂ ಮತ್ತು ರೆಹಮತ್,ಸಫಿಯಾ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೈಕ್ ಕೂಡಾ ವಶಕ್ಕೆ
ಆಟೋ ರಿಕ್ಷಾವನ್ನು ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ರಿಕ್ಷಾಕ್ಕೆ ಬೆಂಗಾವಲಾಗಿ ಬೈಕ್ವೊಂದು ಬಂದಿತ್ತೆನ್ನಲಾಗಿತ್ತು.ಪೊಲೀಸರು ಮಹಜರು ನಡೆಸುವ ಸಂದರ್ಭ ರಿಕ್ಷಾದ ಬಳಿ ವಾರಸುದಾರರಿಲ್ಲದ ಬೈಕ್ ಪತ್ತೆಯಾಗಿತ್ತು.ಬೈಕ್ನ ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಬೈಕ್ ನಂಬರ್ ಆಧರಿಸಿ ವಿಳಾಸ ಪಡೆದ ಪೊಲೀಸರಿಗೆ ಬೈಕ್ನ ಇನ್ಶ್ಯೂರೆನ್ಸ್ ಲ್ಯಾಪ್ಸ್ ಆಗಿರುವ ಮಾಹಿತಿ ಲಭ್ಯವಾದ ಬೆನ್ನಲ್ಲಿ ಆಟೋ ರಿಕ್ಷಾದ ಜೊತೆ ಬೈಕ್ ಅನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.