ಪುತ್ತೂರು: ಕಳೆದ ಮೂರು ನಾಲ್ಕು ದಿನಗಳಿಂದ ಪುತ್ತೂರು ನಗರದ ಆಸುಪಾಸಿನಲ್ಲಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ತಿರುಗುತ್ತಾ ಸಿಕ್ಕ ಸಿಕ್ಕ ಮನೆಗಳಿಗೆ ಹಾಗೂ ಅಂಗಡಿಗಳಿಗೆ ನುಗ್ಗಿ ವಿಚಿತ್ರ ವರ್ತನೆ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನನ್ನು ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಮೊಟ್ಟೆತಡ್ಕ ಪರಿಸರದಲ್ಲಿ ಸಂಚರಿಸುತ್ತಿದ್ದ ಈ ವ್ಯಕ್ತಿಯನ್ನು ಗಮನಿಸಿ 112 ಕ್ಕೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹೆಡ್ ಕಾನ್ಸ್ಟೇಬಲ್ ವಿನೋದ್ ಕುಮಾರ್ ಅವರು ಅಲ್ಲಿಂದ ರಕ್ಷಣೆ ಮಾಡಿ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿ ಬಳಿಕ ಈ ವಿಚಾರವನ್ನು ಪುತ್ತೂರು ಉಮೇಶ್ ನಾಯಕರಿಗೆ ತಿಳಿಸಿ ಅವರ ಸಹಕಾರದಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ 108 ಆಂಬುಲೆನ್ಸಿನ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಲಾಯಿತು. ವಿಚಾರಣೆಯ ವೇಳೆಯಲ್ಲಿ ಈತ ಉಪ್ಪಿನಂಗಡಿಯ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಮಾನಸಿಕ ಅಸ್ವಸ್ಥ ರೀತಿಯಲ್ಲಿ ತಿರುಗುತ್ತಿದ್ದು ಬಳಿಕ ಪುತ್ತೂರಿಗೆ ಬಂದಿದ್ದಾನೆ ಹೆಸರು ಕೊರಗಪ್ಪ ಎಂದು ತಿಳಿದುಬಂದಿದೆ.
ಎರಡು ದಿನದ ಹಿಂದೆ ರಾತ್ರಿ ಈತ ಚೇತನಾ ಆಸ್ಪತ್ರೆ ಬಳಿಯಲ್ಲಿ ತಿರುಗುತ್ತಿದ್ದ ವೇಳೆ ಸ್ಥಳೀಯ ಅಕ್ಷಯ್ ಎಂಬ ಆಟೋ ರಿಕ್ಷಾ ಚಾಲಕರೋರ್ವರು ಈತನ ಬಗ್ಗೆ ಮಾಹಿತಿ ನೀಡಿದ್ದರು.
ಸರಕಾರಿ ಆಸ್ಪತ್ರೆಯಲ್ಲಿ ಡಾ.ಅಜಯ್ ಹಾಗೂ ಡಾ.ಸಂರಕ್ಷಣ್ ಅವರು ಚಿಕಿತ್ಸೆ ನೀಡುವಲ್ಲಿ ಸಹಕರಿಸಿದರು. ರಕ್ಷಣಾ ಕಾರ್ಯದಲ್ಲಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ನವೀನ್,ಲೋಕೇಶ್, ಚಕ್ರಪಾಣಿ ಇನ್ನಿತರರು ಸಹಕಾರ ನೀಡಿದ್ದರು.