ಉಪ್ಪಿನಂಗಡಿ: ಕೇರಳ ರಾಜ್ಯದಲ್ಲಿ ಸರಕಾರಿ ಉದ್ಯೋಗ ಒದಗಿಸಿಕೊಡುವ ಭರವಸೆ ನೀಡಿ 13.11 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಪೆರ್ಲದ ಸಚಿತಾ ರೈ ಎಂಬಾಕೆಯ ವಿರುದ್ಧ ಕೊಯಿಲ ಗ್ರಾಮ ನಿವಾಸಿ ರಕ್ಷಿತಾ ಕೆ. ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ ೨೨ರಂದು ಭಾರತೀಯ ನ್ಯಾಯ ಸಂಹಿತೆ 2023 ರ 318(4) ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಸಕ್ತ ಪೆರ್ಲದ ಬರಮೇಲು ಮನೆ ನಿವಾಸಿ ಅಶ್ವಿನ್ ಕುಮಾರ್ ಶೆಟ್ಟಿ ಎಂಬವರ ಪತ್ನಿಯಾಗಿರುವ ರಕ್ಷಿತಾ ಎಂಬವರ ಕ್ಲಾಸ್‌ಮೇಟ್ ಆಗಿರುವ ಸಚಿತಾ ರೈ ಎಂಬವರು ಇರಿಗೇಶನ್ ಇಲಾಖೆಯಲ್ಲಿ ಕೆಲಸಕೊಡುವುದಾಗಿ ಹೇಳಿ ಇದರ ಬಾಬ್ತು 2,50,000 ರೂ. ಹಣವನ್ನು ನೀಡುವಂತೆ ಕೇಳಿದ ಮೇರೆಗೆ ದಿನಾಂಕ: 12-೦9-2024ರಂದು ಉಪ್ಪಿನಂಗಡಿ ಎಸ್.ಬಿ.ಐ ಬ್ಯಾಂಕ್ ಮುಖೇನ ರೂ 2,5೦,೦೦೦/-ಹಣವನ್ನು ರಕ್ಷಿತಾ ಅವರು ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಆರೋಪಿತಳು ಪುತ್ತೂರು ಎಸ್.ಬಿ.ಐ ಬ್ಯಾಂಕ್‌ನಲ್ಲಿ ಕೆಲಸಮಾಡಿಸಿಕೊಡುವುದಾಗಿ ಹೇಳಿ ಇದಕ್ಕೆ ಹಣ ನೀಡುವಂತೆ ಕೇಳಿದ್ದು, ಅದರಂತೆ ಪಿರ್ಯಾದಿದಾರರು ದಿನಾಂಕ: 13-೦9-2024ರಿಂದ ದಿನಾಂಕ: 23-೦9-2024 ರ ವರೆಗೆ ಬೇರೆ ಬೇರೆ ದಿನಗಳಲ್ಲಿ ಒಟ್ಟು ರೂ 13,11,600/- ರೂಪಾಯಿಯನ್ನು ಬ್ಯಾಂಕ್ ಮುಖೇನ ನೀಡಿದ್ದು ನಂತರ ಆರೋಪಿ ಕೆಲಸವನ್ನು ಕೊಡಿಸದೇ ಇದ್ದಾಗ ಈ ಬಗ್ಗೆ ವಿಚಾರಿಸಿದ್ದು, ಈ ವೇಳೆ ಆರೋಪಿತೆ ಇಂಟರ್‌ವ್ಯೂ ದಿನಾಂಕ ತಿಳಿಸುವುದಾಗಿ ತಿಳಿಸಿದ್ದಳು. ಕೆಲಸ ಕೊಡಿಸುವ ಬಗ್ಗೆ ತಾನು ಆಕೆಯಲ್ಲಿ ಪದೇ ಪದೇ ಕೇಳಿದಾಗಲೂ ಕೆಲಸ ಕೊಡಿಸುವುದಾಗಿ ಹೇಳಿ ಬಳಿಕ ಈ ವರೆಗೂ ಆಕೆ ಕೆಲಸವನ್ನೂ ಕೊಡಿಸದೇ ಇರುವುದಲ್ಲದೇ ತನ್ನಿಂದ ಪಡೆದುಕೊಂಡಿರುವ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುತ್ತಾಳೆಂದು ರಕ್ಷಿತಾ ಅವರು ದೂರಿನಲ್ಲಿ ಆಪಾದಿಸಿರುತ್ತಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.