ಕಡಬ: ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಅವರು ಮೃತಪಟ್ಟು 2 ದಿನ ಕಳೆದಿದೆ. ಆದರೆ ಸೀತಾರಾಮ ಅವರು ಕೋಡಿಂಬಾಳದಿಂದ ತನ್ನ ಮನೆಗೆ ಹರಕೆಗಾಗಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನಾ ಸ್ಥಳದಲ್ಲಿ ಮರದ ಗೆಲ್ಲೊಂದರಲ್ಲಿ ಕುಳಿತು ನಡೆದ ಘಟನೆಗೆ ಸಾಕ್ಷಿಯಾಗಿ ಮೂಕವಾಗಿ ರೋಧಿಸುತ್ತಿದೆ.
ಘಟನೆಯ ಭೀಕರತೆಗೆ ಸಾಕ್ಷಿಯಾಗಿ ನುಜ್ಜು ಗುಜ್ಜಾಗಿರುವ ಸ್ಕೂಟಿಯು ಸ್ಥಳದಲ್ಲಿದ್ದು, ಸೀತಾರಾಮ ಅವರ ಮನೆ ಮಂದಿ ಕೋಳಿ ಮತ್ತು ಸ್ಕೂಟಿಯನ್ನು ಮನೆಗೊಯ್ಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹರಕೆ ಹೆಸರಿನಲ್ಲಿ ಬಲಿಯಾಗ ಬೇಕಿದ್ದ ಕೋಳಿ ಘಟನೆಯಲ್ಲಿ ಜೀವಂತವಾಗಿ ಪಾರಾಗಿದೆ. ಆದರೆ ತನ್ನದಲ್ಲದ ತಪ್ಪಿಗೆ ಮನೆಗೆ ಕೊಂಡೊಯ್ಯುವವರಿಲ್ಲದೆ ಮರದ ಕೊಂಬೆಯಲ್ಲಿ ಕುಳಿತು ತನ್ನನ್ನು ಒಯ್ಯಲು ಯಾರಾದರೂ ಬಂದಾನೋ? ಬಾರಾನೋ? ಎಂಬ ನಿರೀಕ್ಷೆಯಲ್ಲಿ ಕುಳಿತಲ್ಲೇ ದಿನ ಕಳೆಯುತ್ತಿದೆ. ಕೋಳಿಯ ಮೂಕರೋಧನ ಯಾರಿಗೂ ಕೇಳಿಸಿಲ್ಲವೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.