ಕೈಕಾರ ಶಾಲಾ ಶತಮಾನೋತ್ಸವ ಸವಿನೆನಪಿನ ಸಭಾಭವನಕ್ಕೆ ಶಿಲಾನ್ಯಾಸ

0

ಆರೋಗ್ಯ, ವಿದ್ಯೆ, ಉದ್ಯೋಗಕ್ಕೆ ನಮ್ಮ ಪ್ರಯತ್ನ – ಅಶೋಕ್‌ ರೈ

ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸವಿನೆನಪಿಗೆ ನಿರ್ಮಾಣವಾಗಲಿರುವ ನೂತನ ಸಭಾಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನ.5ರಂದು ನಡೆಯಿತು.

ಶಿಲಾನ್ಯಾಸ ನೆರವೇರಿಸಿದ ಶಾಸಕ ಅಶೋಕ್‌ ಕುಮಾರ್‌ ರೈಯವರು ಮಾತನಾಡಿ ʻಆಂಗ್ಲ ಮಾಧ್ಯಮ ಕಲಿಸದಿದ್ದರೆ ಮಕ್ಕಳಿಗೆ ಅನ್ಯಾಯವಾಗುತ್ತದೆ. ಆಂಗ್ಲಮಾಧ್ಯಮ ಕಲಿಕೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತೀರಾ ಅಗತ್ಯವಿದೆ. ಸಭಾಭವನ ನಿರ್ಮಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಧರ್ಮ. ಆ ನಿಟ್ಟಿನಲ್ಲಿ ಸರಕಾರವೂ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು 150 ವರ್ಷಗಳಷ್ಟೂ ಹಿಂದಿದ್ದೇವೆ.  


1976 ರಲ್ಲಿ ವಿದೇಶಗಳಲ್ಲಿ ನೆಲದಡಿಯಲ್ಲಿ ಮೆಟ್ರೋ ಆರಂಭವಾಗಿದೆ. ಆದರೆ ನಾವು ಬಹಳಷ್ಟು ಹಿಂದಿದ್ದೇವೆ. ಕೂತು ತಿನ್ನುವವರ ಪ್ರಮಾಣ ಹೆಚ್ಚಿದೆ. ಇದಕ್ಕೆ ಉತ್ತಮ ಶಿಕ್ಷಣದ ಕೊರತೆ ಎನ್ನಬಹುದು. ಆರೋಗ್ಯ, ವಿದ್ಯೆ, ಉದ್ಯೋಗ ಇದ್ದರೆ ಒಬ್ಬ ವ್ಯಕ್ತಿ ಯ ಬದುಕು ಸಂಪೂರ್ಣ ಎನ್ನಬಹುದು. ಅದಕ್ಕಾಗಿ ನಮ್ಮ ಪ್ರಯತ್ನವಿದೆʼ ಎಂದ ಅವರು ಸಭಾಭವನಕ್ಕೆ ನನ್ನ ಕಡೆಯಿಂದಲೂ ಚಿಕ್ಕ ಅನುದಾನ ಕೊಡುವ ಕೆಲಸ ಮಾಡುತ್ತೇನೆʼ ಎಂದು ಭರವಸೆ ನೀಡಿದರು.


ಅಧಿಕಾರ ನನ್ನ ತಲೆಗೆ ಬಾರದಿರಲಿ – ಕಿಶೋರ್‌ ಕುಮಾರ್‌
ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ‘ಈ ಜಾಗಕ್ಕೆ ಒಂದು ಶಕ್ತಿ ಇದೆ. ಎನ್‌ಎಸ್‌ಎಸ್‌ ಕ್ಯಾಂಪ್‌ ಮೂಲಕ ಈ ಪರಿಸರದ ಸಂಪರ್ಕ ಇರಿಸಿಕೊಂಡಿದ್ದೇನೆ. ಇಲ್ಲಿನ ಕೆಲಸ ಕಾರ್ಯಗಳ ಜೊತೆ ನಾನಿದ್ದೇನೆ. ಅಧಿಕಾರ ಎಂಬುದು ನನ್ನ ತಲೆಗೆ ಬಾರದಿರಲಿ, ಸರಳವಾಗಿಯೇ ಇರುತ್ತೇನೆ. ಸಮಾಜ ಸೇವೆ ಮಾಡುವ ಕಾರ್ಯ ದೇವರ ಪೂಜೆ ಎಂದು ಭಾವಿಸಿ ಮಾಡುತ್ತೇನೆʼ ಎಂದರು.


ಅಂದಾಜು 50 ಲಕ್ಷ ರೂ. ವೆಚ್ಚದ ಸಭಾಭವನ – ಸೀತಾರಾಮ ರೈ
ಪ್ರಾಸ್ತಾವಿಕ ಮಾತುಗಳನ್ನಾಡಿದ ಶತಮಾನೋತ್ಸವ ಸಮಿತಿಯ ಸಂಚಾಲಕ ಸೀತಾರಾಮ ರೈ ಕೈಕಾರ ರವರು ಮಾತನಾಡಿ ‘2023 ಇಸವಿಗೆ ನಮ್ಮ ಶಾಲೆ ಶತಮಾನ ಕಂಡಿದೆ. ಇದರ ಸವಿನೆನಪಿಗ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಎಂಆರ್‌ಪಿಎಲ್‌ ನಿಂದ ರೂ. 30 ಲಕ್ಷ ಅನುದಾನ ಕೊಟ್ಟಿದ್ದಾರೆ. ಇನ್ನು ಸುಮಾರು ರೂ. 20 ಲಕ್ಷದಷ್ಟು ಹಣದ ಅಗತ್ಯತೆಯಿದೆ. ಊರಿನ ವಿದ್ಯಾಭಿಮಾನಿಗಳು ಪ್ರೋತ್ಸಾಹಿಸುತ್ತಾರೆಂಬ ಭರವಸೆಯಲ್ಲಿದ್ದೇವೆ. ಮುಂದಕ್ಕೆ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಮುಂದುವರಿಸುವ ಯೋಜನೆ ಇದೆʼ ಎಂದರು.


ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರು ಮಾತನಾಡಿ ‘ಆದಷ್ಟು ಶೀಘ್ರವಾಗಿ ಈ ಸಭಾಭವನ ಲೋಕಾರ್ಪಣೆಗೊಂಡು ಈ ಊರಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲಿ ಎಂದು ಹೇಳಿ, ಈ ಸಭಾಭವನ ನಿರ್ಮಾಣಕ್ಕೆ ಸೀತಾರಾಮ ರೈ ಯವರ ಸಹಕಾರವನ್ನು ಶ್ಲಾಘಿಸಿದರು.
ಶ್ರೀರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ‘ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಸ್ಥಳೀಯ ಮಹನೀಯರ ಪ್ರಯತ್ನದಿಂದ ಸರಕಾರಿ ಶಾಲೆಗಳಿಗೆ ಬೇರೆ ಬೇರೆ ರೀತಿಯ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು‌.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಒಳಮೊಗ್ರು ಗ್ರಾ.ಪಂ. ಉಪಾಧ್ಯಕ್ಷ ಅಶ್ರಫ್,  ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ, ಕೋಶಾಧಿಕಾರಿ ಶ್ರೀಧರ ರೈ ಹೊಸಮನೆ, ಎಸ್‌ಡಿಎಂಸಿ ಅಧ್ಯಕ್ಷೆ ಶಿಲ್ಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸ್ವಾಗತಿಸಿದರು. ಸಭಾಭವನದ ನಿರ್ಮಾಣ ಗುತ್ತಿಗೆದಾರ ನವೀನ್ ಪ್ರಸಾದ್ ರವರಿಗೆ ಕಾಮಗಾರಿಗೆ ಚಾಲನೆ ನೀಡಲು ಪ್ರಸಾದ ನೀಡಲಾಯಿತು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಖ್ಯಗುರು ರಾಮಣ್ಣ ರೈ ಕೈಕಾರ ವಂದಿಸಿದರು. ಸಂತೋಷ್‌ ರೈ ಕೈಕಾರ ನಿರೂಪಿಸಿದರು.

ಸೀತಾರಾಮ ರೈ ಕೈಕಾರ ರವರು ಅಭಿನಂದನಾರ್ಹರು
ನೂತನ ಸಭಾಭವನಕ್ಕೆ ಎಂಆರ್‌ಪಿಎಲ್‌ ಕಂಪೆನಿಯಿಂದ ರೂ.30 ಲಕ್ಷ ವಿಶೇಷ ಅನುದಾನ ಬಂದಿದ್ದು, ಎಂಆರ್‌ಪಿಎಲ್‌ನಲ್ಲಿ ಅಧಿಕಾರಿಯಾಗಿರುವ ಸೀತಾರಾಮ ರೈ ಕೈಕಾರರವರ ವಿಶೇಷ ಮುತುವರ್ಜಿಯಿಂದ ಈ ಅನುದಾನ ಬಂದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಶಾಸಕರು ಸಹಿತ ಅತಿಥಿಗಳು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಎಂಆರ್‌ಪಿಎಲ್ ನಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 4.5 ಕೋಟಿ ಅನುದಾನ
ಎಂಆರ್‌ಪಿಎಲ್‌ ಕಂಪೆನಿಯು ತನ್ನ ಉಳಿತಾಯದಲ್ಲಿ ಶೇಕಡಾ 2 ನ್ನು ಸಿಎಸ್‌ಆರ್‌ ಫಂಡ್‌ ಮೂಲಕ ಸಮಾಜದ ವಿವಿಧ ಮೂಲಭೂತ ಅಗತ್ಯತೆಗಳಿಗಾಗಿ ಬಳಸುತ್ತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೂ 4.5 ಕೋಟಿ ರೂ. ಅನುದಾನ ಕಂಪೆನಿ ನೀಡಿದೆ. ಮುಖ್ಯವಾಗಿ ರೂ. 1 ಕೋಟಿ ಅನುದಾನ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ನೀಡಿದ್ದು, ಅಲ್ಲಿ ಫಿಸಿಯೋಥೆರಪಿ ಮಾಡುವ ಬಗ್ಗೆ ಪ್ರಪೋಸಲ್‌ ಕಳುಹಿಸಿಕೊಟ್ಟಿದ್ದೇವೆʼ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here