ಉಪ್ಪಿನಂಗಡಿ: ಕ್ಷೇತ್ರದ ಅಭಿವೃದ್ಧಿಯ ಭರವಸೆ ನೀಡಿದ ಶಾಸಕರು ಸಾರ್ವಜನಿಕ ಮೂಲಭೂತ ಸೌಕರ್ಯಗಳಲ್ಲಿ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯನ್ನು ಶೀಘ್ರವೇ ದುರಸ್ತಿಗೊಳಿಸಲು ಮುಂದಾಗಬೇಕೆಂದು ಕಣಿಯೂರು ಎಸ್ಡಿಪಿಐ ಬ್ಲಾಕ್ ಅಧ್ಯಕ್ಷ ಮುಸ್ತಾಫ ಬಂಗೇರಕಟ್ಟೆ ಒತ್ತಾಯಿಸಿದರು.
ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ ದುರಸ್ತಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಕಣಿಯೂರು ಬ್ಲಾಕ್ ಸಮಿತಿಯ ವತಿಯಿಂದ ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಕಲ್ಲೇರಿ ಪೇಟೆಯಲ್ಲಿ ನ.15ರಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯು ಹೊಂಡ- ಗುಂಡಿಗಳಿಂದ ಕೂಡಿದ್ದು, ಪ್ರಯಾಣಿಕರು ರಸ್ತೆ ಸಂಚಾರ ಸಂದರ್ಭ ನರಕ ಯಾತನೆ ಅನುಭವಿಸುವಂತಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಕೂಡಲೇ ಇದರ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್ಡಿಪಿಐ ಜಿಲ್ಲಾ ಸಮಿತಿ ಉಪಾಧ್ಯಕ್ಷ ಇನಾಸ್ ರೊಡ್ರಿಗಸ್ ಮಾತನಾಡಿ, ಜನರಿಂದ ತೆರಿಗೆ ವಸೂಲಾತಿ ಮಾಡುತ್ತಿರುವ ಸರಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕೊಡಲು ಮುಂದಾಗುತ್ತಿಲ್ಲ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೆದ್ದಾರಿಯಲ್ಲಿ ಸಾಂಕೇತಿಕ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು, ಬಳಿಕ ಮೆರವಣಿಗೆಯ ಮೂಲಕ ತಣ್ಣೀರುಪಂಥ ಗ್ರಾ.ಪಂ.ಗೆ ಆಗಮಿಸಿ, ಕಾರ್ಯದರ್ಶಿ ಆನಂದ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ನವಾಝ್, ತಾಲೂಕು ಅಧ್ಯಕ್ಷ ಅಕ್ಬರ್, ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಪ್ರಧಾನ ಕಾರ್ಯದರ್ಶಿ ಅಶ್ಫಾಕ್, ಮುಖಂಡರಾದ ಹನೀಫ್ ಪೂಂಜಾಲಕಟ್ಟೆ, ಮುಹಮ್ಮದ್ ನಿಸಾರ್, ಅನ್ವರ್ ತೆಕ್ಕಾರು, ಅಶ್ರಫ್ ಕಲ್ಲೇರಿ, ನಝೀರ್, ಫೈಝಲ್ ಮೂರುಗೋಳಿ, ಅಶ್ಫಾಕ್ ಪೂಂಜಾಲಕಟ್ಟೆ, ಹನೀಫ್ ಟಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.