ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ಗೆ ಅಕ್ರಮ ಹಸ್ತಾಂತರ ಮಾಡಿ ಅವ್ಯವಹಾರ ಮಾಡಿರುವ ಕುರಿತು ಕೊಕ್ಕಡ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯವರು ನೀಡಿದ ದೂರಿನ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಬೆಳ್ತಂಗಡಿ ತಹಶೀಲ್ದಾರ್, ಸೌತಡ್ಕ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಂಗಳೂರು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಆದೇಶಿಸಿದ್ದಾರೆ.
- ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ದೇವಸ್ಥಾನ ಮುಂಭಾಗದ ಆಸ್ತಿ ಖರೀದಿಸಿ ಬಳಿಕ ಖಾಸಗಿಯಾಗಿ ರಚಿಸಿಕೊಂಡಿದ್ದ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ಗೆ ಈ ಜಾಗವನ್ನು ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ಮಾಡಲಾಗಿದೆ. ಆದ್ದರಿಂದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದನ್ನು ರದ್ದುಪಡಿಸಿ ಎಲ್ಲಾ ಆಸ್ತಿಯನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು, ಟ್ರಸ್ಟ್ ಆದ ಬಳಿಕದಿಂದ ಈ ತನಕದ ಎಲ್ಲಾ ಆದಾಯ, ಖರ್ಚು ವೆಚ್ಚಗಳ ತನಿಖೆ ನಡೆಸಿ ಎಲ್ಲಾ ಆದಾಯಗಳನ್ನು ದೇವಸ್ಥಾನದ ಖಜಾನೆಗೆ ತುಂಬಿಸಬೇಕು ಹಾಗೂ ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ಭಕ್ತರ ಸಹಾಯದಿಂದ ಖರೀದಿಸಲಾಗಿದ್ದ ವಾಸುದೇವ ಶಬರಾಯ, ರಾಘವ ಕೆ., ಹಾಗೂ ವಿಶ್ವನಾಥ ಕೆ.ಅವರ ಹೆಸರಿನಲ್ಲಿರುವ ಜಾಗವನ್ನು ದೇವಸ್ಥಾನದ ಹೆಸರಿಗೆ ಬರೆಸಲು ಸೂಕ್ತ ಆದೇಶ ಮಾಡುವಂತೆ ಒತ್ತಾಯಿಸಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನ.11 ಹಾಗೂ 12ರಂದು ಸೌತಡ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಧರಣಿ ಸ್ಥಳಕ್ಕೆ ಆಗಮಿಸಿದ್ದ ಮಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗೋವಿಂದ ನಾಯ್ಕ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರಿಗೆ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿತ್ತು.
- ಇದೀಗ ಈ ಮನವಿಗೆ ಸ್ಪಂದಿಸಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯವರು ನೀಡಿದ ದೂರಿನ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಬೆಳ್ತಂಗಡಿ ತಹಶೀಲ್ದಾರ್, ಸೌತಡ್ಕ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಂಗಳೂರು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಆದೇಶಿಸಿದ್ದಾರೆ.