ಅಮ್ಮಾ ನಾ ಹೆಣ್ಣಾದೆ…ಬೀದಿ ಪಾಲಾದೆ…-ನಾಯಿ ಮರಿಗಳನ್ನು ರಸ್ತೆಗೆ ಬಿಡುವ ಮುನ್ನ ಯೋಚಿಸಿ…ಅವುಗಳಿಗೂ ಬದುಕಿದೆ

0

✍🏻.ಸಿಶೇ ಕಜೆಮಾರ್

ಈ ಭೂಮಿಯಲ್ಲಿ ನಿಯತ್ತಿಗೆ ಮತ್ತೊಂದೆ ಹೆಸರೇ ನಾಯಿ. ಹೌದು, ನಾಯಿಗೆ ಇರುವಷ್ಟು ನಿಯತ್ತು ಬೇರೆ ಯಾವ ಪ್ರಾಣಿಗೂ ಇಲ್ಲ. ಆದರೆ ಇಂತಹ ಪ್ರಾಮಾಣಿಕ ನಾಯಿ ಮರಿಗಳು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದು ಸತ್ತು ಹೋಗುತ್ತಿರುವುದು ಮಾತ್ರ ಮಾನವೀಯತೆಯ ದುರಂತವನ್ನು ಸಾರುತ್ತಿದೆ. ‘ನಮ್ಮಮ್ಮನಿಗೆ ನಾವು ಹೆಣ್ಣಾಗಿ ಹುಟ್ಟಿದ್ದು ಭಾರವಾಗಲಿಲ್ಲ ಅವಳು ನಮ್ಮ ದೂರ ಮಾಡಲಿಲ್ಲ ಆದರೆ ನಮ್ಮ ಅಮ್ಮನನ್ನು ಸಾಕಿದ ನಮ್ಮ ಯಜಮಾನನಿಗೆ ಭಾರವಾಗಿ ನಮ್ಮನ್ನು ಬೀದಿ ಬದಿಗೆ ತಳ್ಳಿದ್ದಾನೆ. ನಾವು ಮಾಡಿದ ತಪ್ಪಾದರೂ ಏನು? ಹೆಣ್ಣಾಗಿ ಹುಟ್ಟುವುದೇ ತಪ್ಪಾ? ಮಾನವರು ಮಾನವೀಯತೆ ಉಳ್ಳವರು ಎಂದು ನಂಬಿದ್ದೆವು ಆದರೆ ಇನ್ನೂ ಕಣ್ಣು ತೆರೆಯದ ಹೆತ್ತ ತಾಯಿ ಯಾರೆಂದು ನೋಡಲು ಕೂಡ ಬಿಡದೆ ನಮ್ಮನ್ನು ಎತ್ತಿಕೊಂಡು ಬಂದು ಬಿಸಾಡಿ ಹೋಗಿದ್ದೀರಲ್ವಾ..ನಿಮಗೆ ಮಾನವೀಯತೆ ಇದೆಯಾ? ಇದು ಯಾವ ರೀತಿಯ ನ್ಯಾಯ? ನಮ್ಮನ್ನು ಬದುಕುಲು ಬಿಡಿ…’ ಈ ರೀತಿಯ ಕೂಗು ಕೇಳಿಬರುತ್ತಿರುವುದು ಬೀದಿ ಬದಿಯಲ್ಲಿ ಅನಾಥವಾಗಿ ಬಿದ್ದಿರುವ ನಾಯಿ ಮರಿಗಳದ್ದಾಗಿದೆ.


ಹೌದು..ಯಾರದೋ ಮನೆಯಲ್ಲಿ ಸಾಕು ನಾಯಿಯಾಗಿ ನಿಯತ್ತಾಗಿ ಮನೆ ಕಾಯುತ್ತ ಇದ್ದ ನಾಯಿಯೊಂದು ಹೆಣ್ಣು ಮರಿಗಳಿಗೆ ಜನ್ಮ ನೀಡಿದರೆ ಅದುವೇ ಮಹಾ ಅಪರಾಧವೆಂಬಂತೆ ಆ ಮನೆಯ ಮಾಲೀಕ ಆ ಹೆಣ್ಣು ನಾಯಿ ಮರಿಗಳನ್ನು ಬೀದಿಗೆ ತಂದು ಬಿಸಾಕಿ ಹೋಗುತ್ತಿದ್ದಾನೆ. ಮೂಕ ಪ್ರಾಣಿಗೂ ಹೃದಯವಿದೆ, ಹೃದಯದ ಭಾಷೆ ಇದೆ ಅವುಗಳಿಗೂ ಅಮ್ಮ ಎನ್ನುವ ಮಮತೆ ಇದೆ ಎಂಬುದನ್ನೇ ಮರೆತು ತಾಯಿಯ ಎದೆ ಹಾಲು ಚೀಪುತ್ತಿರುವಾಗಲೇ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಬಂದು ರಾತ್ರೋ ರಾತ್ರಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ರಾತ್ರಿಯ ಚಳಿಯಲ್ಲಿ ಅಮ್ಮನ ಎದೆ ಹಾಲಿಗಾಗಿ ಹುಡುಕಾಡುವ ನಾಯಿ ಮರಿಗಳಿಗೆ ತಾವೆಲ್ಲಿದ್ದೇವೆ ಎಂಬುದೇ ತಿಳಿಯದೇ ಹೊರಳಾಡಿ ಹೊರಳಾಡಿ ಪ್ರಾಣವನ್ನೇ ಬಿಡುತ್ತವೆ. ಎಂತಹ ಮನಕಲುಕುವ ದೃಶ್ಯವಿದು ಹಾಲು ಆಹಾರ ಸಿಗದೆ ಹಸಿವಿನಲ್ಲಿ ನರಳಾಡಿ ಪ್ರಾಣ ಬಿಡುವ ನಾಯಿ ಮರಿಗಳು, ರಸ್ತೆಯಲ್ಲಿ ಓಡಾಡುವ ವಾಹನಗಳ ಚಕ್ರದಡಿಗೆ ಸಿಲುಕಿ ಅಸುನೀಗುವ ಮುದ್ದು ಮರಿಗಳು. ಇದೆಲ್ಲಾ ಯಾರಿಂದ ಆಯಿತು ಎಂದು ಒಂದು ಕ್ಷಣ ಯೋಚಿಸಿದರೆ ಅದು ನಮ್ಮಿಂದಲೇ ಎಂಬ ಪಾಪ ಪ್ರಜ್ಞೆ ನಮಗೆ ಕಾಡದಿರದು.


ನಾಯಿಯ ನಿಯತ್ತಿನ ಬಗ್ಗೆ ಮಾತನಾಡುವ ನಾವುಗಳು ಯಾವ ಕಾರಣಕ್ಕೂ ತಾಯಿ ಮತ್ತು ಮರಿಗಳನ್ನು ಬೀದಿಗೆ ತಳ್ಳದೆ ಅವುಗಳಿಗೂ ಒಂದು ಬದುಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅನ್ನ ಹಾಕಿದ ಯಜಮಾನನಿಗೆ ನಿಷ್ಠೆ ತೋರಿಸುವ ಪ್ರಾಣಿಗಳಲ್ಲಿಯೇ ಶ್ರೇಷ್ಠ ಪ್ರಾಣಿ ಎಂದು ಗುರುತಿಸಿಕೊಂಡಿರುವ ನಾಯಿಗಳು ಮನೆ ಕಾಯುವುದರಿಂದ ಹಿಡಿದು ಮಿಲಿಟರಿ, ಪೊಲೀಸ್ ಇಲಾಖೆ ತನಕ ಕಾರ್ಯ ನಿರ್ವಹಿಸುತ್ತವೆ. ಇಂತಹ ನಾಯಿ ಮರಿಗಳನ್ನು ಬೀದಿ ಪಾಲು ಮಾಡುವ ಪುಣ್ಯಾತ್ಮರಿಗೆ ಪಾಪ ಪ್ರಜ್ಞೆ ಕಾಡದಿರಲಿ…ನಾಯಿ ಮರಿಗಳನ್ನು ಬೀದಿಗೆ ತಂದು ಬಿಸಾಕುವ ಮುನ್ನ ನೂರು ಬಾರಿ ಯೋಚಿಸಿ ಅವುಗಳಿಗೂ ಜೀವವಿದೆ…ಬದುಕಿದೆ…


‘ಮನೆ ಕಾಯುವ ನಾಯಿಗಳಿಗೆ ಅನ್ನ ಹಾಕಲು ಸಾಧ್ಯವಿಲ್ಲದವರು ದಯವಿಟ್ಟು ನಾಯಿಗಳನ್ನು ಸಾಕಬೇಡಿ, ಸಾಕಿದ ಮೇಲೆ ಮರಿಗಳನ್ನು ತಂದು ಬೀದಿ ಬದಿಗೆ ಬಿಡಬೇಡಿ. ನಾಯಿಗಳಿಗೂ ಒಂದು ಜೀವನ ಎಂಬುದು ಇದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.’
-ರಾಜೇಶ್ ಬನ್ನೂರು, ಶ್ವಾನ ಪ್ರೇಮಿ, ಮಾಜಿ ಅಧ್ಯಕ್ಷರು ಪುತ್ತೂರು ಪುರಸಭೆ

LEAVE A REPLY

Please enter your comment!
Please enter your name here