ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಯಾಗಿರುವ ಹಂಪನಕಟ್ಟೆ ಲೈಟ್ಹೌಸ್ ಹಿಲ್ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34ವ.) ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.
ಯುವತಿಗೆ, ನೌಕಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಾಯ್ಲಿನ್ ಗ್ಲಾನೆಲ್ ಪಿಂಟೋ ಎಂಬಾತನ ಪರಿಚಯವಾಗಿ ಸ್ನೇಹಿತರಾಗಿದ್ದರು. ಅವರಿಗೆ ಅಂಡಮಾನ್ಗೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ 2021ರ ಫೆ.5ರಂದು ಸ್ನೇಹಿತರು ಸೇರಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿ ಆಕಾಶ್ ಕೆ.ಎಸ್. ಎಂಬವರಿಗೆ ಸೇರಿದ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಯುವತಿಯೂ ಪಾಲ್ಗೊಂಡಿದ್ದರು.ಆಕೆ ತನ್ನ ಸ್ನೇಹಿತ ನಿಕೇತ್ ಶೆಟ್ಟಿ ಎಂಬವರ ಜೊತೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು.
ಪಾರ್ಟಿಗೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ ಬ್ರಯಾನ್ ಅಮನ್ನಾ, ತಾನು ಜಾಯಿಲಿನ್ ಗ್ಲಾನೆಲ್ ಪಿಂಟೋ ಅವರ ಸ್ನೇಹಿತ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ಬಳಿಕ ಆಕೆಗೆ, ವೈನ್ಗೆ ಮತ್ತು ಬರಿಸುವ ಅಮಲು ಪದಾರ್ಥವನ್ನು ಮಿಶ್ರ ಮಾಡಿ ಒತ್ತಾಯದಿಂದ ನೀಡಿದ್ದ. ಜಾಯ್ಲಿನ್ ಗ್ಲಾನೆಲ್ ಪಿಂಟೋ ಮತ್ತು ಅವರ ಸ್ನೇಹಿತ ರೆಬೆಕಾ ಅವರು ಯುವತಿಗೆ ರಾತ್ರಿ ಅಲ್ಲಿ ಉಳಿದುಕೊಳ್ಳಲು ಕೊಠಡಿ ತೋರಿಸಿದ್ದು, ಬಳಿಕ ಮೂವರೂ ಅಲ್ಲಿ ಸ್ವಲ್ಪ ಹೊತ್ತು ಮಾತನಾಡಿಕೊಂಡಿದ್ದರು. ಬಳಿಕ ಯುವತಿ ನಿದ್ದೆ ಮಾಡಿದ್ದು, ಮುಂಜಾನೆ 2 ಗಂಟೆ ವೇಳೆಗೆ ಎಚ್ಚರವಾಗಿ ನೋಡಿದಾಗ ಜಾಯಿಲಿನ್ ಗ್ಲಾನೆಲ್ ಪಿಂಟೋ ಮತ್ತು ರೆಬೆಕಾ ಅವರು ಕೊಠಡಿಯಲ್ಲಿ ಇರಲಿಲ್ಲ. ಮತ್ತೆ ನಿದ್ದೆಗೆ ಜಾರಿದ ಯುವತಿಗೆ 5 ಗಂಟೆ ವೇಳೆ ಎಚ್ಚರವಾಗಿತ್ತು. ಆ ಸಂದರ್ಭ ಆಕೆಯ ಮೇಲೆ ಬ್ರಯಾನ್ ಅಮನ್ನಾ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಿ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಠಾಣೆಯ ಆಗಿನ ನಿರೀಕ್ಷಕರಾಗಿದ್ದ ತಿಮ್ಮಪ್ಪ ನಾಯ್ಕ ಅವರು ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ.ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಬ್ರಯಾನ್ ರಿಚರ್ಡ್ ಅಮನ್ನಾಗೆ ಭಾರತೀಯ ದಂಡ ಸಂಹಿತೆ ಕಲಂ 376ರಡಿಯ ಅಪರಾಧಕ್ಕೆ 10 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಕಲಂ 328ರಡಿಯ ಅಪರಾಧಕ್ಕಾಗಿ 5 ವರ್ಷ ಕಾರಾಗೃಹವಾಸ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ಭಾಗಶಃ ಸಾಕ್ಷಿ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ನಡೆಸಿದ್ದರು. ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು ಉಳಿದ ಸಾಕ್ಷಿ ವಿಚಾರಣೆ ನಡೆಸಿದ್ದರು.